ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ (Actor Dharmendra) ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೆಲವು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಧರ್ಮೇಂದ್ರ ನಿಧನದ ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಧರ್ಮೇಂದ್ರ ಪತ್ನಿ ನಟಿ, ಸಂಸದೆ ಹೇಮಾಮಾಲಿನಿ ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ.
ನಟ ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿರುವ ಧರ್ಮೇಂದ್ರ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಮುಂದುವರೆದಿದೆ. ಆದರೆ ಕೆಲ ಮಾಧ್ಯಮಗಳು ಧರ್ಮೇಂದ್ರ ನಿಧನ ಹೊಂದಿದ್ದಾರೆ ಎಂದು ವರದಿ ಪ್ರಸಾರ ಮಾಡಿದ್ದವು. ಇದನ್ನು ಗಮನಿಸಿ ಸಾಮಾಜಿಕ ಜಾಲತಾಣಗಳಲ್ಲಿಯೂ ಸಹ ಅಭಿಮಾನಿಗಳು ಶೋಕ ಸಂದೇಶ ಹಂಚಿಕೊಳ್ಳಲು ಆರಂಭಿಸಿದ್ದರು. ಆದರೆ ಈ ವಿಷಯ ಧರ್ಮೇಂದ್ರ ಕುಟುಂಬದವರಿಗೆ ತೀವ್ರ ನೋವುಂಟು ಮಾಡಿದೆ. ವಿಶೇಷವಾಗಿ ನಟಿ, ಸಂಸದೆ ಹೇಮಾಮಾಲಿನಿ ಅವರಂತೂ ಮಾಧ್ಯಮಗಳು ಹಾಗೂ ಸುಳ್ಳು ಸುದ್ದಿ ಹರಡುತ್ತಿರುವವರ ಮೇಲೆ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.ಇದನ್ನೂ ಓದಿ: ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲು: ವೆಂಟಿಲೇಟರ್‌ನಲ್ಲಿ ಚಿಕಿತ್ಸೆ
`ಈ ರೀತಿ ಆಗುತ್ತಿರುವುದು ಕ್ಷಮೆಗೆ ಅರ್ಹವಾದುದಲ್ಲ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಮತ್ತು ಚೇತರಿಸಿಕೊಳ್ಳುತ್ತಿರುವ ವ್ಯಕ್ತಿಯ ಬಗ್ಗೆ ಜವಾಬ್ದಾರಿಯುತ ಚಾನೆಲ್‌ಗಳು ಸುಳ್ಳು ಸುದ್ದಿಗಳನ್ನು ಹೇಗೆ ಹರಡಬಹುದು? ಇದು ಅತ್ಯಂತ ಅಗೌರವ ಮತ್ತು ಬೇಜವಾಬ್ದಾರಿ. ದಯವಿಟ್ಟು ಕುಟುಂಬಕ್ಕೆ ಮತ್ತು ಅದರ ಗೌಪ್ಯತೆಗೆ ಸರಿಯಾದ ಗೌರವವನ್ನು ನೀಡಿ’ ಎಂದು ಹೇಮಾಮಾಲಿನಿ ಆಕ್ರೋಶದಿಂದ ಟ್ವೀಟ್ ಮಾಡಿದ್ದಾರೆ. ಸದ್ಯ ನಟ ಧರ್ಮೇಂದ್ರ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ.
ನಟ ಧರ್ಮೇಂದ್ರ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಆದಷ್ಟು ಬೇಗ ಚೇತರಿಸಿಕೊಂಡು ಸಹಜ ಸ್ಥಿತಿಗೆ ಬರಲೆಂದು ಅವರ ಕುಟುಂಬಸ್ಥರು, ಆಪ್ತರು ಹಾಗೂ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ.ಇದನ್ನೂ ಓದಿ: Delhi Blast| ʻಫರಿದಾಬಾದ್ ಮಾಡ್ಯೂಲ್ʼ ಗ್ಯಾಂಗ್ ಅರೆಸ್ಟ್ ಆಗಿದ್ದಕ್ಕೆ ವೈದ್ಯ ಉಮರ್ ನಬಿಯಿಂದ ಕಾರು ಸ್ಫೋಟ!

