– ಪುಲ್ವಾಮಾ ಮೂಲದ ಉಮರ್ ಸೂಸೈಡ್ ಬಾಂಬರ್?
– ಗ್ಯಾಂಗ್ ಸದಸ್ಯರು ಅರೆಸ್ಟ್ ಆಗಿದ್ದಕ್ಕೆ ಸಿಟ್ಟಾಗಿ ಕೃತ್ಯ?
ನವದೆಹಲಿ: ಕೆಂಪುಕೋಟೆ (Red Fort) ಬಳಿ ಸ್ಫೋಟಗೊಂಡ ಐ20 ಕಾರಿನಲ್ಲಿ ಫರಿದಾಬಾದ್ ವೈದ್ಯ ಡಾ. ಉಮರ್ ಯು ನಬಿ (Umar Nabi) ಸೂಸೈಡ್ ಬಾಂಬರ್ ಆಗಿ ಕೆಲಸ ಮಾಡಿರುವ ಶಂಕೆ ವ್ಯಕ್ತವಾಗಿದೆ.
2,900 ಕೆಜಿ ಸ್ಫೋಟಕ ಪತ್ತೆಯಾದ ಫರಿದಾಬಾದ್ ಮಾಡ್ಯೂಲ್ (Faridabad Terror Module) ಜೊತೆ ಸಂಬಂಧ ಹೊಂದಿದ್ದ ಪುಲ್ವಾಮಾ ಮೂಲದ ಉಮರ್ ಯು ನಬಿ ಕಾರಿನಲ್ಲಿ ಇದ್ದಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ. ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಚಾರ ಗೊತ್ತಾಗಿ ಪರಾರಿಯಾಗಿದ್ದ ನಬಿ ಸೋಮವಾರ ಏಕಾಂಗಿಯಾಗಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
ತನಿಖಾಧಿಕಾರಿಗಳು ಈಗ ಕಾರಿನ ಚಾಲಕನದ್ದೆಂದು ಶಂಕಿಸಲಾಗಿರುವ ಕತ್ತರಿಸಿದ ಕೈಯನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದು ಕಾಶ್ಮೀರದಲ್ಲಿರುವ ನಬಿ ಕುಟುಂಬದ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಮೂಲಗಳ ಪ್ರಕಾರ ನಬಿ ಭಟ್ ಅವರ ಮಗ ಡಾ. ಉಮರ್ ಯು ನಬಿ ಫರಿದಾಬಾದ್‌ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ. ಫೆಬ್ರವರಿ 24, 1989 ರಂದು ಜನಿಸಿದ ಉಮರ್ ಸದ್ಯ ಸೆರೆಯಾಗಿರುವ ಡಾ. ಅದೀಲ್ ಆಪ್ತ ಸ್ನೇಹಿತ ಎಂದು ವರದಿಯಾಗಿದೆ. ಇದನ್ನೂ ಓದಿ: ದೆಹಲಿ ಸ್ಫೋಟದ ಐ20 ಕಾರಿಗೆ ಇದೆ ಪುಲ್ವಾಮಾ ನಂಟು!
ಡಾ. ಉಮರ್ ಎನ್‌ಕ್ರಿಪ್ಟ್ ಮಾಡಿದ ಟೆಲಿಗ್ರಾಮ್ ಚಾನೆಲ್‌ಗಳ ಮೂಲಕ ಮೂಲಭೂತವಾದಿಗಳಾಗಿದ್ದ ವೈದ್ಯಕೀಯ ವೃತ್ತಿಪರರ ಗುಂಪಿನ ಭಾಗವಾಗಿದ್ದ. ಫರಿದಾಬಾದ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತನ್ನ ತಂಡವನ್ನು ಬಂಧಿಸಿದ್ದಕ್ಕೆ ನಾಪತ್ತೆಯಾಗಿದ್ದ ಉಮರ್ ಸಿಟ್ಟಾಗಿ ತನ್ನ ಬಳಿಯಿದ್ದ ಸ್ಫೋಟಕಗಳನ್ನು ಬಳಸಲು ನಿರ್ಧರಿಸಿರಬಹುದು. ಮುಂದೆ ನಾನು ಬಂಧನವಾಗಬಹುದು ಎಂಬುದನ್ನು ಅರಿತು ಈ ಕೃತ್ಯ ಎಸಗಿರುವ ಸಾಧ್ಯತೆಯಿದೆ ಎಂದು ತನಿಖಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೋಮವಾರ ಸಂಜೆ ದೆಹಲಿಯ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ನಿಧಾನವಾಗಿ ಚಲಿಸುತ್ತಿದ್ದ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಈ ದಾಳಿಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿ 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.


