ನವದೆಹಲಿ: ದೆಹಲಿಯ ಕೆಂಪು ಕೋಟೆ ಕಾರು ಸ್ಫೋಟದಲ್ಲಿ (Delhi Blast) ಭಾಗಿಯಾಗಿರುವ ಹುಂಡೈ ಐ20 ಕಾರು ಸ್ಫೋಟಕ್ಕೂ ಮೊದಲು ಮೂರು ಗಂಟೆ ಪಾರ್ಕಿಂಗ್ (Parking) ಆಗಿದ್ದ ವಿಚಾರ ಈಗ ಸಿಸಿಟಿವಿ ದೃಶ್ಯಗಳಿಂದ ಪತ್ತೆಯಾಗಿದೆ.
ಕಾರು ಸುನೇಹ್ರಿ ಮಸೀದಿ ಪಾರ್ಕಿಂಗ್ ಸ್ಥಳಕ್ಕೆ ಮಧ್ಯಾಹ್ನ 3:19 ಕ್ಕೆ ಪ್ರವೇಶಿಸಿ ಸಂಜೆ 6:48ಕ್ಕೆ ನಿರ್ಗಮಿಸಿದೆ. ನಿರ್ಗಮಿಸಿದ ಕೆಲವೇ ನಿಮಿಷಗಳ ನಂತರ ಕೆಂಪು ಕೋಟೆಯ ಬಳಿ ಸಂಜೆ 6:52–7:00 ಗಂಟೆಯ ಒಳಗಡೆ ಸ್ಫೋಟಗೊಂಡಿದೆ.
ಪಾರ್ಕಿಂಗ್ ಪ್ರದೇಶಕ್ಕೆ ಪ್ರವೇಶಿಸುವ ಮತ್ತು ನಿರ್ಗಮಿಸುವ ವೇಳೆ ಕಾರಿನಲ್ಲಿ ನೀಲಿ ಮತ್ತು ಕಪ್ಪು ಬಣ್ಣದ ಟೀ ಶರ್ಟ್, ಮುಖಕ್ಕೆ ಮಾಸ್ಕ್ ಧರಿಸಿದ್ದ ಚಾಲಕ ಒಬ್ಬನೇ ಕುಳಿತ್ತಿದ್ದ. ತನಿಖಾಧಿಕಾರಿಗಳು ಈಗ ದರ್ಯಗಂಜ್ ಕಡೆಗೆ ಹೋಗುವ ಮಾರ್ಗವನ್ನು ಪತ್ತೆಹಚ್ಚುತ್ತಿದ್ದಾರೆ. ಕಾರು ಎಲ್ಲಿಂದ ಆಗಮಿಸಿದೆ ಎನ್ನುವುದರ ಜಾಡು ಹಿಡಿಯಲು 100ಕ್ಕೂ ಹೆಚ್ಚು ಸಿಸಿಟಿವಿಗಳನ್ನು ಪರಿಶೀಲಿಸುತ್ತಿದ್ದಾರೆ.
ದೆಹಲಿ ಪೊಲೀಸರು ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಮುಂಬೈ, ಕೋಲ್ಕತ್ತಾ, ಬೆಂಗಳೂರು, ಜೈಪುರ, ಹರಿಯಾಣ, ಪಂಜಾಬ್, ಹೈದರಾಬಾದ್, ಉತ್ತರ ಪ್ರದೇಶ ಮತ್ತು ಉತ್ತರಾಖಂಡಗಳಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ. ಇಂದು ಎರಡನೇ ಮತ್ತು ಅಂತಿಮ ಸುತ್ತಿನ ಮತದಾನ ನಡೆಯಲಿರುವ ಬಿಹಾರದಲ್ಲಿಯೂ ಹೈ ಅಲರ್ಟ್ ಘೋಷಿಸಲಾಗಿದೆ.

