ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಅರಣ್ಯ ಇಲಾಖೆಯ ದೌರ್ಜನ್ಯ ಮತ್ತೆ ಮುಂದುವರಿದಿದೆ. ರೈತರೊಬ್ಬರು (Farmer) ತೋಟದಲ್ಲಿ ಬೆಳೆದಿದ್ದ ಏಲಕ್ಕಿ (Cardamom Plantation), ಕಾಫಿ ಬೆಳೆಯನ್ನ ಅರಣ್ಯ ಇಲಾಖೆ ಸಿಬ್ಬಂದಿಗಳೇ ನಾಶಪಡಿಸಿರುವ ಮತ್ತೊಂದು ಘಟನೆ ಮಡಿಕೇರಿ ತಾಲೂಕಿನ ಬೆಟ್ಟತ್ತೂರು ಗ್ರಾಮದಲ್ಲಿ ನಡೆದಿದೆ.
ಬೆಟ್ಟತ್ತೂರು ಗ್ರಾಮದಲ್ಲಿ ರೈತ ಪೊನ್ನಪ್ಪ ಅವರು ತೋಟದಲ್ಲಿ ಬೆಳೆದಿದ್ದ ಏಲಕ್ಕಿ ಹಾಗೂ ಕಾಫಿ ಬೆಳೆಯನ್ನ ಅರಣ್ಯ ಇಲಾಖೆ ಸಿಬ್ಬಂದಿ ನಾಶ ಮಾಡಿದ್ದು, ಈಗ ಆ ರೈತ ಕಣ್ಣೀರಿಡುವಂತಾಗಿದೆ. 2011ರಲ್ಲಿ ಅರಣ್ಯ ಇಲಾಖೆಯೇ ಈ ಕುಟುಂಬಕ್ಕೆ ಇದೇ ಎರಡು ಮುಕ್ಕಾಲು ಎಕ್ರೆಗೆ ಹಕ್ಕುಪತ್ರ ನೀಡಿತ್ತು. ತಾವೇ ಹಕ್ಕುಪತ್ರ ಕೊಟ್ಟು ಮತ್ತೆ ತಾವೇ ತೋಟವನ್ನ ನಾಶಪಡಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಎರಡು ತಿಂಗಳಿನಿಂದ ಅರಣ್ಯ ಇಲಾಖೆಯ ವಿರುದ್ಧ ರೈತರು ಹೋರಾಟ ನಡೆಸುತ್ತಿದ್ದರೂ ಅರಣ್ಯ ಇಲಾಖೆ ಮತ್ತೆ ತನ್ನದೇ ಚಾಳಿ ಮುಂದುವರಿಸಿದೆ. ಈ ವರ್ತತೆ ರೈತರ ಮತ್ತೊಂದು ಬೃಹತ್ ಹೋರಾಟಕ್ಕೆ ಮುನ್ನುಡಿ ಬರೆಯುವಂತಿದೆ. ಸದ್ಯ ಅರಣ್ಯ ಸಿಬ್ಬಂದಿ ನಾಶಪಡಿಸಿದ ಸ್ಥಳಕ್ಕೆ ರೈತ ಹೋರಾಟ ಸಮಿತಿ ಭೇಟಿ ನೀಡಿ, ರೈತರಿಗೆ ಬೆಂಬಲ ಸೂಚಿಸಿದೆ. ಬೆಳೆ ನಾಶಪಡಿಸಿದ ಸಿಬ್ಬಂದಿಯನ್ನ ತಕ್ಷಣ ಅಮಾನತುಗೊಳಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.


