ವಾಷಿಂಗ್ಟನ್: ಅಮೆರಿಕ (America) ಹಾಗೂ ಜಾರ್ಜಿಯಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಭಾರತದ ಇಬ್ಬರು ಮೋಸ್ಟ್ ವಾಂಟೆಡ್ ದರೋಡೆಕೋರರನ್ನು ಭಾರತೀಯ ಭದ್ರತಾ ಸಂಸ್ಥೆಗಳು ಬಂಧಿಸಿವೆ. ಬಂಧಿತರಲ್ಲಿ ಓರ್ವ ಆರೋಪಿ ಬಿಷ್ಣೋಯ್ ಗ್ಯಾಂಗ್ (Lawrence Bishnoi) ಜೊತೆ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
ಬಂಧಿತರನ್ನು ವೆಂಕಟೇಶ್ ಗಾರ್ಗ್ ಹಾಗೂ ಭಾನು ರಾಣಾ ಎಂದು ಗುರುತಿಸಲಾಗಿದೆ. ಹರಿಯಾಣ ಪೊಲೀಸರು (Haryana Police) ಹಾಗೂ ಭದ್ರತಾ ಸಂಸ್ಥೆಯ ಅಧಿಕಾರಿಗಳು ವೆಂಕಟೇಶ್ ಗಾರ್ಗ್‌ನನ್ನು ಜಾರ್ಜಿಯಾದಲ್ಲಿ (Georgia) ಬಂಧಿಸಿದ್ದಾರೆ. ಭಾನು ರಾಣಾನನ್ನು ಅಮೆರಿಕದಲ್ಲಿ ಬಂಧಿಸಲಾಗಿದೆ. ರಾಣಾ ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಸಂಪರ್ಕ ಹೊಂದಿದ್ದಾನೆ. ಗಾರ್ಗ್ ಮತ್ತು ರಾಣಾ ಇಬ್ಬರೂ ಶೀಘ್ರದಲ್ಲೇ ಭಾರತಕ್ಕೆ ಗಡೀಪಾರಾಗಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವೆಂಕಟೇಶ್ ಗಾರ್ಗ್ ಬಿಎಸ್‌ಪಿ ನಾಯಕನ ಹತ್ಯೆಯಲ್ಲಿ ಭಾಗಿಯಾಗಿದ್ದ. ಈತ ಹರಿಯಾಣದ ನಾರಾಯಣಗಢದ ನಿವಾಸಿಯಾಗಿದ್ದ. ಪ್ರಸ್ತುತ ಜಾರ್ಜಿಯಾದಲ್ಲಿ ವಾಸಿಸುತ್ತಿರುವ ಇವನ ವಿರುದ್ಧ ಭಾರತದಲ್ಲಿ 10ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತ ತನ್ನ ಗ್ಯಾಂಗ್‌ಗೆ ಹರಿಯಾಣ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಭಾರತದ ಇತರ ರಾಜ್ಯಗಳಿಂದ ಯುವಕರನ್ನು ನೇಮಕ ಮಾಡಿಕೊಳ್ಳುತ್ತಿದ್ದ. ಇದನ್ನೂ ಓದಿ: ಕೆನಡಾದಲ್ಲಿ ಉದ್ಯಮಿ ಹತ್ಯೆ, ಗಾಯಕನ ಮನೆಗೆ ಬೆಂಕಿಯಿಟ್ಟ ಬಿಷ್ಣೋಯ್ ಗ್ಯಾಂಗ್
ಗಾರ್ಗ್ ಪ್ರಸ್ತುತ ವಿದೇಶದಲ್ಲಿ ವಾಸಿಸುತ್ತಿರುವ ದರೋಡೆಕೋರ ಕಪಿಲ್ ಸಾಂಗ್ವಾನ್ ಜೊತೆ ಸುಲಿಗೆ ಗ್ಯಾಂಗ್ ನಡೆಸುತ್ತಿದ್ದ. ಅಕ್ಟೋಬರ್‌ನಲ್ಲಿ, ದೆಹಲಿ ಪೊಲೀಸರು ಸಂಗ್ವಾನ್‌ನ ನಾಲ್ವರು ಶೂಟರ್‌ಗಳನ್ನು ಬಂಧಿಸಿದ್ದರು. ಬಂಧಿತ ಶೂಟರ್‌ಗಳು ಫಾರ್ಮ್ ಹೌಸ್ ಒಂದರ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕದಲ್ಲಿರುವ ರಾಣಾ, ಸ್ವಲ್ಪ ಸಮಯದಿಂದ ಅಮೆರಿಕದಲ್ಲಿ ವಾಸಿಸುತ್ತಿದ್ದ. ಮೂಲತಃ ಕರ್ನಾಲ್ ನಿವಾಸಿಯಾದ ರಾಣಾ ಬಹಳ ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಸಕ್ರಿಯನಾಗಿದ್ದಾನೆ. ಈತನ ವಿರುದ್ಧ ಸಹ ಹಲವಾರು ಪ್ರಕರಣಗಳು ದಾಖಲಾಗಿವೆ. ಇವನ ಕ್ರಿಮಿನಲ್ ಜಾಲ ಹರಿಯಾಣ, ಪಂಜಾಬ್ ಮತ್ತು ದೆಹಲಿಯ ಭಾಗಗಳಲ್ಲಿ ವಿಸ್ತರಿಸಿದೆ. ಪಂಜಾಬ್‌ನಲ್ಲಿ ನಡೆದ ಗ್ರೆನೇಡ್ ದಾಳಿಯ ತನಿಖೆಯ ಸಂದರ್ಭದಲ್ಲಿ ಇವನ ಹೆಸರು ಬೆಳಕಿಗೆ ಬಂದಿತ್ತು.
ಈ ವರ್ಷ ಜೂನ್ ತಿಂಗಳಲ್ಲಿ ಕರ್ನಾಲ್‌ನ ವಿಶೇಷ ಕಾರ್ಯಪಡೆ (ಎಸ್‌ಟಿಎಫ್), ಹ್ಯಾಂಡ್ ಗ್ರೆನೇಡ್‌ಗಳು, ಪಿಸ್ತೂಲ್‌ಗಳು ಮತ್ತು ಮದ್ದುಗುಂಡುಗಳನ್ನು ಹೊಂದಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿತ್ತು. ಇವರಿಬ್ಬರು ರಾಣಾನ ಆಜ್ಞೆಯ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿತ್ತು. ಇದನ್ನೂ ಓದಿ: ಪಂಜಾಬ್ ಬಿಜೆಪಿ ನಾಯಕನ ಮನೆಯಲ್ಲಿ ಸ್ಫೋಟ ಕೇಸ್ – ಬಂಧಿತ ಆರೋಪಿಗೆ ಲಾರೆನ್ಸ್ ಬಿಷ್ಣೋಯ್ ಲಿಂಕ್

