ರೂಪೇಶ್ ಶೆಟ್ಟಿ ನಟನೆಯ ಜೈ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್‌ಗೆ ಆಗಮಿಸಿದ್ದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ಟ್ರೈಲರ್ ಲಾಂಚ್ ಬಳಿಕ ಮಾತನಾಡಿದ್ದಾರೆ. ಕನ್ನಡದಲ್ಲೇ ಮಾತು ಶುರು ಮಾಡಿದ ಸುನೀಲ್ ಶೆಟ್ಟಿ, ನನಗೆ ಕನ್ನಡ ಸ್ವಲ್ಪ ಸ್ವಲ್ಪ ಬರುತ್ತದೆ. ಆದ್ರೆ ಅರ್ಥ ಆಗುತ್ತೆ. ತುಳು ಭಾಷೆ ನನಗೆ ಚನ್ನಾಗಿ ಬರುತ್ತೆ ತುಳುನಲ್ಲೇ ಮಾತಾಡ್ತೀನಿ ಎಂದಿದ್ದಾರೆ.
ನಾನು ಹುಟ್ಟಿದ್ದು ತುಳುನಾಡಲ್ಲಿ ಅನ್ನೋದಕ್ಕೆ ಹೆಮ್ಮೆ ಆಗುತ್ತೆ. ಇದೊಂದು ತುಳು ಹಾಗೂ ಕನ್ನಡದ ಸಿನಿಮಾ ಅನ್ನೋದು ಹೆಮ್ಮೆ ಅನ್ಸುತ್ತೆ. ರೂಪೇಶ್ ಶೆಟ್ಟಿ ನನ್ನ ತಮ್ಮ. ನಾನು ತುಳು ಸಿನಿಮಾಗೆ ತುಂಬಾ ಸಪೋರ್ಟ್ ಮಾಡ್ತೀನಿ. ಕನ್ನಡದ ಸಿನಿಮಾಗಳು ವಿಶ್ವ ಮಟ್ಟದಲ್ಲಿ ಮಾನ್ಯತೆ ಪಡೆಯುತ್ತಿವೆ. ಕಾಂತಾರ ಸಿನಿಮಾ ಮೂಲಕ ಇಡೀ ವಿಶ್ವಕ್ಕೆ ನಮ್ಮ ತುಳು ನಾಡಿನ ಸಂಸ್ಕೃತಿ ಪರಿಚಯ ಆಗಿದೆ. ನಾನು ಕರ್ನಾಟಕದ ಒಂದು ಭಾಗ. ನನ್ನ ಬ್ರದರ್ ಕೂಡ ಬೆಂಗಳೂರಿನಲ್ಲೇ ಇರೋದು. ಬೆಂಗಳೂರು ಇದೊಂದು ಗ್ರೀನ್ ಸಿಟಿ, ನನ್ನ ಬಾಲ್ಯದ ದಿನಗಳು ಕೂಡ ನೆನಪಾಗುತ್ತೆ. ಬೆಂಗಳೂರಿನ ಜನ ನೋಡಿ ತುಂಬಾ ಖುಷಿ ಆಗುತ್ತೆ ಎಂದಿದ್ದಾರೆ.
ಕರ್ನಾಟಕ ಅಂದಾಕ್ಷಣ ನಮಗೆಲ್ಲ ರಾಜ್‌ಕುಮಾರ್ ಸರ್ ನೆನಪಾಗ್ತಾರೆ. ನನ್ನ ಜನ್ಮಭೂಮಿ ಕರ್ನಾಟಕ, ಕರ್ಮಭೂಮಿ ಮುಂಬೈ. ನನಗೆ ಇನ್ನೂ ಕೇವಲ 65 ವಯಸ್ಸು ಮಾತ್ರ. ನಾನು ಇಷ್ಟೊಂದು ಸುಂದರವಾಗಿ ಕಾಣಲು ಒಂದು ಕಾರಣ ಇದೆ. ಅದು ನಮ್ಮ ತುಳುನಾಡು, ನಮ್ಮ ಮೀನು, ನಮ್ಮ ಸಂಸ್ಕೃತಿ, ನಮ್ಮ ಬೊಂಡ, ನಮ್ಮ ಮಂಗಳೂರು ಊಟವೇ ನನ್ನನ್ನ ಇಷ್ಟೊಂದು ಸುಂದರವಾಗಿ ಕಾಣುವಂತೆ ಮಾಡಿದೆ. ನಾನು ಕೂಡ ನಮ್ಮ ಸಂಸ್ಕೃತಿ, ಆಚಾರ, ಪರಂಪರೆಗಳನ್ನ ಪಾಲಿಸುವೆ ಎಂದಿದ್ದಾರೆ. ಕರ್ನಾಟಕದಿಂದ ಹೋಗಿ ಬಾಲಿವುಡ್‌ನಲ್ಲಿ ಅಷ್ಟು ದೊಡ್ಡ ಹೆಸರು ಮಾಡಿದ್ದರೂ ಇಲ್ಲಿನ ಆಚಾರ ವಿಚಾರದ ಬಗ್ಗೆ ಸುನೀಲ್ ಶೆಟ್ಟಿ ಅಪಾರ ಗೌರವ ಹೊಂದಿದ್ದಾರೆ. ಇನ್ನು ಜೈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.


