– ನಟೋರಿಯಸ್ ಉಗ್ರರಿಗೂ ಸ್ವರ್ಗವಾಯ್ತಾ ಪರಪ್ಪನ ಅಗ್ರಹಾರ ಜೈಲು?
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ಎಲ್ಲವೂ ಖುಲ್ಲಂ ಖುಲ್ಲ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ರಾಜಾತಿಥ್ಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಎಚ್ಚರಿಕೆ ಬಳಿಕವೂ ಹಣದ ದಾಹಕ್ಕೆ ಜೈಲಾಧಿಕಾರಿಗಳು ತಮ್ಮ ಚಾಳಿ ಮುಂದುವರಿಸಿದ್ದಾರೆ. ಹೀಗಾಗಿ ಭಯೋತ್ಪಾದಕರಿಗೂ ಪರಪ್ಪನ ಅಗ್ರಹಾರ ಜೈಲು ಸ್ವರ್ಗವಾಯ್ತಾ ಅನ್ನೋ ಅನುಮಾನ ಮೂಡಿದೆ.
ಹೌದು. ಪರಪ್ಪನ ಅಗ್ರಹಾದ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಮೋಸ್ಟ್ ವಾಂಟೆಡ್, ಐಸಿಸ್ ಉಗ್ರ (ISIS Terrorist) ಜುಹಾದ್ ಹಮೀದ್ ಶಕೀಲ್ ಮನ್ನಾಗೆ ರಾಜಾತಿಥ್ಯ ನೀಡಿರುವುದು ವೈರಲ್ ಆಗಿರುವ ವಿಡಿಯೋದಿಂದ ಬೆಳಕಿಗೆ ಬಂದಿದೆ. ಶಕೀಲ್ ರಾಜಾರೋಷವಾಗಿ ಜೈಲಿನಲ್ಲಿ ಮೊಬೈಲ್ ಫೋನ್ ಇಟ್ಕೊಂಡು ಮಾತನಾಡುತ್ತಿರೋದು ವಿಡಿಯೋದಲ್ಲಿ ಗೊತ್ತಾಗಿದೆ. ಹೀಗಾಗಿ ಬೆಂಗಳೂರು ಸೆಂಟ್ರಲ್ ಜೈಲು (Bengaluru Central Jail) ಭಯೋತ್ಪಾದಕರಿಗೂ ಸ್ವರ್ಗವಾಯ್ತಾ ಅನ್ನೋ ಪ್ರಶ್ನೆ ಮೂಡಿದೆ.
ನಟೋರಿಯಸ್ ಉಗ್ರನ ಕೇಸ್ ಹಿಸ್ಟರಿ
ಬೆಂಗಳೂರಿನ ತಿಲಕ್‌ನಗರದವನಾದ ಜುಹಾದ್ ಹಮೀದ್ ಶಕೀಲ್ ಮೂಲಭೂತವಾದಿ ಮನಸ್ಥಿತಿಯುಳ್ಳ ಮುಸ್ಲಿಂ ಯುವಕರನ್ನ ಐಸಿಸ್‌ಗೆ ನೇಮಕ ಮಾಡ್ತಿದ್ದ. ʻಇಕ್ರಾ ಸರ್ಕಾಲ್ʼ ಹೆಸರಿನಲ್ಲಿ ಆನ್‌ಲೈನ್ ಗ್ರೂಪ್ ರಚಿಸಿ ಉಗ್ರರ ಸಂಘಟನೆಗೆ ನೇಮಕಾತಿ ನಡೆಸುತ್ತಿದ್ದ. ಅದರಂತೆ ಬೆಂಗಳೂರಿನ ನಾಲ್ವರನ್ನೂ ಸಿರಿಯಾಗೆ ಕರೆದೊಯ್ದಿದ್ದ. ಆದ್ರೆ ಟರ್ಕಿಯ ಇಸ್ತಾಂಬುಲ್ ರೆಫ್ಯೂಜಿ ಕ್ಯಾಂಪ್‌ನಲ್ಲೇ ಇಬ್ಬರು ಮೃತಪಟ್ಟಿದ್ದರು.
ಸಿರಿಯಾ ದೇಶಾದ್ಯಂತ ಐಸಿಸ್ ಉಗ್ರರ ಜೊತೆ ನಿರಂತರವಾಗಿ ಸಂಪರ್ಕ ಹೊಂದಿದ್ದ ಶಕೀಲ್‌ನನ್ನ 2020ರಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿಸಲಾಗಿತ್ತು. 2022ರಲ್ಲಿ ಸೌದಿಯಿಂದ ಭಾರತಕ್ಕೆ ಗಡೀಪಾರಾಗಿದ್ದ. ಸದ್ಯ ಕಳೆದ ಮೂರು ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಲ್ಲಿ ಶಕೀಲ್ ಶಿಕ್ಷೆ ಅನುಭವಿಸುತ್ತಿದ್ದಾನೆ. ಆದ್ರೆ ಶಿಕ್ಷೆಗೆ ಗುರಿಯಾಗಿರುವ ಕೈದಿ ಬಿಂದಾಸ್ ಲೈಫ್ ನಡೆಸುತ್ತಿರೋದು ಕಾನೂನು ಸುವ್ಯಸ್ಥೆ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ.



