ಕಲಬುರಗಿ: ಚಿತ್ತಾಪುರ (Chittapur) ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘ(RSS) ನಡೆಸಲು ಉದ್ದೇಶಿಸಿದ್ದ ಪಥ ಸಂಚಲನದ ಅರ್ಜಿ ವಿಚಾರಣೆ ನವೆಂಬರ್ 13ಕ್ಕೆ ಮುಂದೂಡಿಕೆಯಾಗಿದೆ.
ಕಲಬುರಗಿ ಹೈಕೋರ್ಟ್‌ನಲ್ಲಿ (Kalaburagi High Court) ನಡೆದ ಅರ್ಜಿ ವಿಚಾರಣೆ ವೇಳೆ ತನ್ನ ಕಚೇರಿಯಲ್ಲಿ ನಡೆದ ಶಾಂತಿ ಸಭೆಯ ಅಂಶಗಳನ್ನು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಅವರು ನ್ಯಾಯಾಧೀಶರ ಗಮನಕ್ಕೆ ತಂದರು.
ಪಥಸಂಚಲನ ಸಂಬಂಧ ಒಟ್ಟು 11 ಅರ್ಜಿಗಳು ಸಲ್ಲಿಕೆಯಾಗಿದೆ. ಯಾರೆಲ್ಲ ಅರ್ಜಿ ಹಾಕಿದ್ದಾರೋ ಅವರಿಗೆ ಒಂದು ವಾರದಲ್ಲಿ ಎಲ್ಲರಿಗೂ ಪ್ರತ್ಯೇಕ ದಿನಾಂಕ ನಿಗದಿ ಮಾಡುತ್ತೇವೆ. ದಿನಾಂಕ ನಿಗದಿ ಮಾಡಲು ಒಂದು ವಾರ ಕಾಲವಕಾಶ ಮಾಡಿಕೊಡಬೇಕು. ಹೀಗಾಗಿ ನವೆಂಬರ್ 12 ರಂದು ನಮ್ಮ ನಿರ್ಧಾರವನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತೇವೆ. ನವೆಂಬರ್ 13 ರಂದು ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಬಹುದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಪ್ರತಿ ಟನ್ ಕಬ್ಬಿಗೆ ಸರ್ಕಾರದಿಂದ 3,300 ರೂ. ದರ ನಿಗದಿ
ಎಜೆ ಮನವಿಯನ್ನು ಪುರಸ್ಕರಿಸಿದ ನ್ಯಾಯಾಧೀಶರು ಸರ್ಕಾರದ ವರದಿ ಆಧರಿಸಿ ಮುಂದಿನ ನಿರ್ಧಾರ ತಿಳಿಸಲಾಗುವುದು ಎಂದು ಹೇಳಿ ನವೆಂಬರ್ 13ಕ್ಕೆ ವಿಚಾರಣೆಯನ್ನು ಮುಂದೂಡಿದರು.
ಹೈಕೋರ್ಟ್ ನಿರ್ದೇಶನದಂತೆ ನ.5ರಂದು ಎಜೆ ಶಶಿಕಿರಣ್ ಶೆಟ್ಟಿ ಅವರ ಕಚೇರಿಯಲ್ಲಿ ಎರಡನೇ ಶಾಂತಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಆರ್‌ಎಸ್‌ಎಸ್ ಮುಖಂಡರು ನ.13 ಅಥವಾ 16 ರಂದು ನಡೆಸಲು ಅನುಮತಿ ನೀಡಿ ಎಂದು ಮನವಿ ಮಾಡಿದ್ದರು.

