– ಸಂಜೆಯ ಕೆಲ ವಿಮಾನಗಳ ಹಾರಾಟ ರದ್ದು ಸಾಧ್ಯತೆ!
– 300 ವಿಮಾನಗಳ ಹಾರಾಟ ವಿಳಂಬ
ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (IGIA) ಏರ್ ಟ್ರಾಫಿಕ್ ಕಂಟ್ರೋಲರ್ (ATC) ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಕನಿಷ್ಠ 300 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ. ಅಲ್ಲದೇ ಸಂಜೆಯ ಕೆಲ ವಿಮಾನಗಳ ಹಾರಾಟ ರದ್ದಾಗುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ಈ ನಡುವೆ ಸ್ಫೋಟಕ ಮಾಹಿತಿಯೊಂದು ಬೆಳಕಿಗೆ ಬಂದಿದೆ.
ಎಟಿಸಿಯಲ್ಲಿ ಉಂಟಾದ ತಾಂತ್ರಿಕ ದೋಷ ಆಕಸ್ಮಿಕವಾಗಿ ಆಗಿಲ್ಲ. ಯಾಂತ್ರೀಕೃತ ಸಾಫ್ಟ್‌ವೇರ್‌ನಲ್ಲಿ ಮಾಲ್‌ವೇರ್ ಇಂಜೆಕ್ಟ್ (Malware Injected) ಮಾಡಿರುವ ಶಂಕೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ ಎನ್ನಲಾಗಿದೆ. ಮಾಲ್‌ವೇರ್ ಅಂದ್ರೆ ನಿಮ್ಮ ಡೇಟಾವನ್ನ ಕದಿಯಲು ಅಥವಾ ನಿಮ್ಮ ಸಿಸ್ಟಮ್‌ಗೆ ಅನಧಿಕೃತ ಪ್ರವೇಶ ಪಡೆಯಲು ವಿನ್ಯಾಸಗೊಳಿಸಲಾದ ದುರುದ್ದೇಶಪೂರಿತ ಸಾಫ್ಟ್‌ವೇರ್ ಆಗಿದೆ.
ಯಾಂತ್ರೀಕೃತ ಸಾಫ್ಟ್‌ವೇರ್‌ನಲ್ಲಿ (Software) ವೈಫಲ್ಯ ಉಂಟಾಗಿರಬಹುದೇ ಎಂದು ಏಜೆನ್ಸಿಗಳು ತನಿಖೆ ನಡೆಸುತ್ತಿವೆ. ಏಕೆಂದ್ರೆ ಎಟಿಸಿನಲ್ಲಿ ಕೆಲವು ಅಪ್‌ಡೇಟ್‌ಗಳ ಕೊರತೆ ಕಂಡುಬಂದಿದೆ. ರಿಯಲ್ ಟೈಮ್ ಬ್ಯಾಕಪ್‌ಗಳನ್ನ ಹಾಳಾಗಿವೆ. ಇದಿನ್ನೂ ಪ್ರಾಥಮಿಕ ಹಂತದಲ್ಲಿದೆ. ಆದಾಗ್ಯೂ ಎಟಿಸಿಯ ಬಹುವ್ಯವಸ್ಥೆಗಳ ಮೇಲೆ ಹೇಗೆ ದಾಳಿ ಮಾಡಲು ಸಾಧ್ಯವಾಯ್ತು? ಅನ್ನೋದನ್ನ ತಾಂತ್ರಿಕ ತಂಡ ಪರಿಶೀಲಿಸುತ್ತಿದೆ. ಈ ಎಲ್ಲ ಕಾರಣಗಳಿಂದ ಸುಮಾರು 300 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿದೆ.
ತಾಂತ್ರಿಕ ತಂಡಗಳು ಬಿರುಸಿನ ಕಾರ್ಯಾಚರಣೆ ನಡೆಸುತ್ತಿವೆ. ಈ ಉದ್ದೇಶಿದ ದಾಳಿಯು ಸಿಸ್ಟಮ್ ಇಂಟರ್‌ಫೇಸ್‌ಗಳು ಅಥವಾ ರಾಡಾರ್ ಸಿಂಕ್ರೊನೈಸೇಷನ್ ಮಾಡ್ಯೂಲ್‌ಗಲ್ಲಿನ ದೌರ್ಬಲ್ಯಗಳನ್ನ ಬಳಸಿಕೊಳ್ಳುವ ಉದ್ದೇಶ ಹೊಂದಿದೆಯೇ ಅನ್ನೋದನ್ನ ಪರಿಶೀಲಿಸಲಾಗುತ್ತಿದೆ. ಇದರ ನಡುವೆ ರಿಸೆಂಟ್ ಅಪ್‌ಡೇಟ್ಸ್ ಹಾಗೂ ರಿಯಲ್ ಟೈಮ್ ಬ್ಯಾಕಪ್‌ಗಳು ಮತ್ತಷ್ಟು ಹಾಳಾಗುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ ಎಂದು ಸೈಬರ್-ವಿಚಾರಣಾ ಅಧಿಕಾರಿಯೊಬ್ಬರು ಹೇಳಿರೋದಾಗಿ ಮಾಧ್ಯಮಗಳು ವರದಿ ಮಾಡಿವೆ.



