ನವದೆಹಲಿ: ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದಲ್ಲಿ ಅತಿ ಹೆಚ್ಚು 64.66% ಮತದಾನವಾಗಿದೆ (Voter Turnout). ಇದು ರಾಜ್ಯದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದ್ದು, ಪ್ರಜಾಪ್ರಭುತ್ವದ ಗೆಲುವು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ಹೇಳಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (SIR) ಶೂನ್ಯ ಮೇಲ್ಮನವಿ ಸಲ್ಲಿಕೆಯಾಗಿದೆ. ಇದರ ಜೊತೆಗೆ 1951ರಿಂದ ಮೊದಲ ಬಾರಿ ಅತಿ ಹೆಚ್ಚು ಮತದಾನವಾಗಿದೆ. ಪರಿಪೂರ್ಣ ಮತದಾರರ ಪಟ್ಟಿ ಮತ್ತು ಮತದಾರರ (Bihar Voters) ಉತ್ಸಾಹಭರಿತ ಭಾಗವಹಿಸುವಿಕೆ, ಪಾರದರ್ಶಕ ಚುನಾವಣಾ ಯಂತ್ರಗಳ ಮೂಲಕ ಪ್ರಜಾಪ್ರಭುತ್ವ ಗೆಲ್ಲುತ್ತದೆ. ಇದು ಆಯೋಗಕ್ಕೆ ಅದ್ಭುತ ಪ್ರಯಾಣವಾಗಿದೆ ಎಂದು ಬಣ್ಣಿಸಿದ್ದಾರೆ.
243 ವಿಧಾನಸಭಾ ಕ್ಷೇತ್ರಗಳ ಪೈಕಿ ಮೊದಲ ಹಂತದ 121 ಕ್ಷೇತ್ರಗಳಿಗೆ ಗುರುವಾರ ಮತದಾನ ನಡೆದಿದೆ. 64.66% ಮತದಾನವಾಗಿದೆ. ಈ ಹಿಂದೆ 2020ರಲ್ಲಿ ಕೋವಿಡ್ ವೇಳೆ ನಡೆದ ಚುನಾವಣೆಯಲ್ಲಿ ಶೇ 57.29ರಷ್ಟು ಮತದಾನ ನಡೆದಿತ್ತು. 2000 ಇಸವಿಯಲ್ಲಿ ಶೇ 62.57 ಹಾಗೂ 1998 ರಲ್ಲಿ ಅತಿಹೆಚ್ಚು 64.6% ಮತದಾನ ನಡೆದಿತ್ತು ಎಂದು ವರದಿಯಾಗಿದೆ.
ಇನ್ನುಳಿದ 122 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ನ.11ರಂದು ಚುನಾವಣೆ ನಡೆಯಲಿದ್ದು ನ.14ರಂದು ಫಲಿತಾಂಶ ಹೊರಬೀಳಲಿದೆ.


