ಬೀದರ್: ಕಳೆದ 11 ತಿಂಗಳ ಗೌರವಧನ ಸರ್ಕಾರದಿಂದ ಬಿಡುಗಡೆಯಾದರೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ನೀಡದಿರುವುದರಿಂದ ಜಿಲ್ಲೆಯ ಯರನಳ್ಳಿ ಗ್ರಾಮ ಪಂಚಾಯತಿ ಸದಸ್ಯರು ಅಂಗಲಾಚುವಂತಾಗಿದೆ.
ಯರನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯು ಯರನಳ್ಳಿ, ಬಂಪಳ್ಳಿ, ಸಾಂಗ್ವಿ, ಇಸ್ಲಾಂಪುರ ಹಾಗೂ ಸಿದ್ಧಾಪುರ ಗ್ರಾಮಗಳನ್ನು ಒಳಗೊಂಡಿದ್ದು, ಒಟ್ಟು 14 ಜನ ಸದಸ್ಯ ಬಲ ಹೊಂದಿದೆ. ಸರ್ಕಾರದ ಹೊಸ ಆದೇಶದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಮಾಸಿಕ 6 ಸಾವಿರ ರೂ., ಉಪಾಧ್ಯಕ್ಷರಿಗೆ 4 ಸಾವಿರ ರೂ. ಹಾಗೂ ಸದಸ್ಯರಿಗೆ 2 ಸಾವಿರ ರೂ. ಗೌರವ ಧನ ನಿಗದಿಪಡಿಸಲಾಗಿದೆ. 2024ರಲ್ಲಿ ಹಿಂದಿನ ಪಿಡಿಒ ಅವರ ಅವಧಿಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರಿಗೆ ಒಟ್ಟು 11 ತಿಂಗಳ ಮಾಸಿಕ ಗೌರವಧನ ಬಿಡುಗಡೆಯಾಗಿದೆ. ಗೌರವ ಧನ ಕೊಡುವಂತೆ ಕೇಳಿದರೆ `ಆ ಹಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕೆಲಸ ಕಾರ್ಯಗಳಿಗೆ ಖರ್ಚು ಮಾಡಲಾಗಿದೆ ಎಂದು ಪಿಡಿಒ ಅವರು ಸಬೂಬು ಹೇಳಿದ್ದಾರೆ’ ಎಂದು ಸದಸ್ಯರು ದೂರಿದ್ದಾರೆ.ಇದನ್ನೂ ಓದಿ: ಹೈದರಾಬಾದ್ ವ್ಯಕ್ತಿಗೆ ಸಹಕರಿಸುವಂತೆ ಪೊಲೀಸರಿಗೆ ಕರೆ ಮಾಡಿದ್ದ ಕೇಸ್ – ಜೆಡಿಎಸ್‌ನಿಂದ ಸಚಿವ ಜಮೀರ್ ವಿರುದ್ಧ ರಾಜ್ಯಪಾಲರಿಗೆ ದೂರು
ಸರ್ಕಾರದಿಂದ ಬಿಡುಗಡೆಯಾಗಿ ಪಂಚಾಯತ್ ಖಾತೆಗೆ ಜಮೆಯಾದರೂ ಪಿಡಿಒಗಳು ಸದಸ್ಯರಿಗೆ ಗೌರವ ಧನ ನೀಡುತ್ತಿಲ್ಲ ಎಂದು ಆರೋಪಿಸಿ ಪಂಚಾಯಿತಿಯ 12 ಜನ ಸದಸ್ಯರು ಬೀದರ್ ತಾಲೂಕು ಪಂಚಾಯತಿ ಇಒ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕಳೆದ ಐದಾರು ತಿಂಗಳ ಹಿಂದೆ ಸದಸ್ಯರ ಗೌರವ ಧನ ಬಿಡುಗಡೆಯಾಗಿದೆ. ಹಿಂದಿನ ಪಿಡಿಒ ಅವರಿಗೆ ಅನೇಕ ಬಾರಿ ಕೇಳಿದರೂ ವೇತನ ನೀಡದೆ ವರ್ಗಾವಣೆಯಾದರು. ಇದೀಗ ಇರುವ ಪಿಡಿಒ ಅವರಿಗೆ ಕೇಳಿದರೆ ಈ ಬಗ್ಗೆ ಹಿಂದಿನ ಪಿಡಿಒ ಅವರಿಗೆ ಗೊತ್ತು ಎಂದು ಹೇಳುತ್ತಿದ್ದಾರೆ.
ಈ ಬಗ್ಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಗ್ರಾಮ ಪಂಚಾಯತಿ ಸದಸ್ಯರಿಗೆ ಬರಬೇಕಾದ ಮಾಸಿಕ ಗೌರವಧನ ಪಾವತಿಸಬೇಕೆಂದು ಗ್ರಾಮ ಪಂಚಾಯತಿ ಸದಸ್ಯರಾದ ತಾಜುದ್ದೀನ್, ರಾಜಪ್ಪಾ, ಲಕ್ಷ್ಮೀಬಾಯಿ, ಕಸ್ತೂರಿಬಾಯಿ, ಬಾಬು, ಮಾಣಿಕೇಶ್ವರಿ, ವಿಜಯಕುಮಾರ, ಪ್ರಭುಶೆಟ್ಟಿ, ರೇಣುಕಾ, ರೇಷ್ಮಾ ಹಾಗೂ ಕಾವೇರಿ ಅವರು ಪತ್ರಕ್ಕೆ ಸಹಿ ಹಾಕಿ, ಆಗ್ರಹಿಸಿದ್ದಾರೆ.ಇದನ್ನೂ ಓದಿ: ಮುಸ್ಲಿಮರು ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಮುಸ್ಲಿಮರು: ರೇವಂತ್ ರೆಡ್ಡಿ

