ಧಾರವಾಡ: ಸರ್ಕಾರಿ ಜಾಗದಲ್ಲಿ ಕಾರ್ಯಕ್ರಮ ನಡೆಸಲು ಸರ್ಕಾರದ ಅನುಮತಿ ಪಡೆಯಬೇಕೆಂಬ ರಾಜ್ಯ ಸರ್ಕಾರದ ಆದೇಶಕ್ಕೆ ವಿಭಾಗೀಯ ಪೀಠದಿಂದ ಮತ್ತೆ ಹಿನ್ನಡೆಯಾಗಿದೆ.
ಸರ್ಕಾರಿ ಶಾಲೆ ಹಾಗೂ ಸಂಸ್ಥೆಗಳ ಆವರಣದಲ್ಲಿ ಸಂಘ, ಸಂಸ್ಥೆಗಳು ಕಾರ್ಯಕ್ರಮ ನಡೆಸಬೇಕಾದರೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ಸರ್ಕಾರದ ಆದೇಶ ಪ್ರಶ್ನಿಸಿ ಪುನಶ್ಚೇತನ ಸಂಸ್ಥೆ ಸೇರಿ ನಾಲ್ವರು ಹೈಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರದ ಈ ಆದೇಶಕ್ಕೆ ಹೈಕೋರ್ಟ್ ಏಕಸದಸ್ಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿ ಸರ್ಕಾರದ ಪರ ತಕರಾರು ಅರ್ಜಿ ಸಲ್ಲಿಸಲು ಸೂಚನೆ ನೀಡಿತ್ತು. ಈಗ ತಡೆ ತೆರವು ಮಾಡಲು ಹೈಕೋರ್ಟ್ ದ್ವಿಸದಸ್ಯ ಪೀಠದಲ್ಲಿ ಅರ್ಜಿ ಸಲ್ಲಿಸಿದ್ದ ಸರ್ಕಾರಕ್ಕೆ ಮುಖಭಂಗವಾಗಿದೆ. ಸರ್ಕಾರದ ಅರ್ಜಿ ವಜಾ ಮಾಡಿ ಹೈಕೋರ್ಟ್ ದ್ವಿಸದಸ್ಯ ಪೀಠ ಆದೇಶ ಮಾಡಿದೆ.
ಸರ್ಕಾರದ ಪರ ಮೊನ್ನೆಯಷ್ಟೇ ಸರ್ಕಾರಿ ವಕೀಲರು ಹೈಕೋರ್ಟ್ ದ್ವಿಸದಸ್ಯ ಪೀಠದ ಎದುರು ಮೇಲ್ಮನವಿ ಅರ್ಜಿ ಸಲ್ಲಿಸಿ ತಡೆಯಾಜ್ಞೆ ತೆರವುಗೊಳಿಸುವಂತೆ ಕೋರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ದ್ವಿಸದಸ್ಯ ಪೀಠವು ಆದೇಶವನ್ನು ಕಾಯ್ದಿರಿಸಿತ್ತು.
ಇಂದು ತನ್ನ ಆದೇಶ ಪ್ರಕಟಿಸಿರುವ ಹೈಕೋರ್ಟ್‌ನ ದ್ವಿಸದಸ್ಯ ಪೀಠವು, ಏಕಸದಸ್ಯ ಪೀಠದಲ್ಲೇ ಇದನ್ನು ಇತ್ಯರ್ಥ ಮಾಡಿಕೊಳ್ಳಿ ಎಂದು ಸರ್ಕಾರಿ ವಕೀಲರು ಸಲ್ಲಿಸಿದ್ದ ಅರ್ಜಿಯನ್ನೇ ವಜಾಗೊಳಿಸಿದೆ. ಆ ಮೂಲಕ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ನಲ್ಲಿ ಮತ್ತೊಮ್ಮೆ ಹಿನ್ನಡೆಯುಂಟಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಅರ್ಜಿದಾರರ ಪರ ವಕೀಲರು, ಸರ್ಕಾರದ ಆಸ್ತಿ ಉಳಿಸಲು ಆದೇಶ ಮಾಡಲಾಗಿದೆ ಎಂದು ಒಂದೇ ಕಾರಣಕ್ಕೆ ಸರ್ಕಾರದ ಪರ ವಕೀಲರ ಅರ್ಜಿ ಪರಿಗಣಿಸಲು ಆಗಲ್ಲ ಎಂದು ಹೈಕೋರ್ಟ್ ದ್ವಿಸದಸ್ಯ ಪೀಠ ಅಭಿಪ್ರಾಯಪಟ್ಟಿದ್ದು, ಸರ್ಕಾರಕ್ಕೆ ಹೈಕೋರ್ಟ್‌ಗೆ ಹೋಗಲು ಅವಕಾಶ ಇದೆ. ಅಲ್ಲದೇ, ಏಕಸದಸ್ಯ ಪೀಠದಲ್ಲೇ ಮತ್ತೊಮ್ಮೆ ಅರ್ಜಿ ಹಾಕಬಹುದು ಎಂದು ತಿಳಿಸಿದೆ.

