ಬಾಗಲಕೋಟೆ: ಕಾಂಗ್ರೆಸ್‌ನ (Congress) ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಹೆಚ್.ವೈ ಮೇಟಿ (HY Meti) ಅವರ ಅಂತ್ಯಕ್ರಿಯೆ ಬಾಗಲಕೋಟೆಯ (Bagalkote) ತಿಮ್ಮಾಪುರದಲ್ಲಿ (Timmapur) ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮಂಗಳವಾರ (ನ.4) ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು.ಇದನ್ನೂ ಓದಿ: ಬಾಗಲಕೋಟೆ | ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಹೆಚ್.ವೈ ಮೇಟಿ ನಿಧನ
ಬುಧವಾರ (ನ.5) ಬೆಳಿಗ್ಗೆ 8 ಗಂಟೆಗೆ ಶಾಸಕ ಮೇಟಿ ಅವರ ಪಾರ್ಥಿವ ಶರೀರವನ್ನು ಬಾಗಲಕೋಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು. ನಂತರ ತೆರೆದ ವಾಹನದಲ್ಲಿ ಬಾಗಲಕೋಟೆಯಿಂದ ಸ್ವಗ್ರಾಮ ತಿಮ್ಮಾಪುರಕ್ಕೆ ತರಲಾಯಿತು. ಸಿಎಂ ಸಿದ್ದರಾಮಯ್ಯ ಸ್ವಗ್ರಾಮಕ್ಕೆ ಬಂದು ಪಾರ್ಥಿವ ಶರೀರ ಅಂತಿಮ ದರ್ಶನ ಪಡೆದರು. ಈ ವೇಳೆ ಮಾತನಾಡಿ, ಮೇಟಿಯವ್ರು ನಿಷ್ಠಾವಂತ ರಾಜಕಾರಣಿ, ನನಗೆ ಅತೀ ನಿಷ್ಠರಾಗಿದ್ದರು. ಅವರನ್ನು ಕಳೆದುಕೊಂಡ ನನಗೆ ವೈಯಕ್ತಿಕವಾಗಿ ನಷ್ಟವಾಗಿದೆ. ಮೇಟಿಗೆ ಮೇಟಿಯೇ ಸಾಕ್ಷಿಯಾಗಿದ್ದರು. ನನ್ನ ಜೊತೆ ಹೆಜ್ಜೆಗೆ ಹೆಜ್ಜೆ ಹಾಕಿದವರು. ರಾಜಕೀಯ ಬದಲಾವಣೆಗಳಲ್ಲೂ ನನ್ನನ್ನ ಹಿಂಬಾಲಿಸಿದರು. ಅವರಂತಹ ವ್ಯಕ್ತಿತ್ವ ಅತೀ ವಿರಳ ಎಂದು ಭಾವುಕಾರದರು.
ಸಿದ್ದರಾಮಯ್ಯ ಜೊತೆ ಸಚಿವರಾದ ಹೆಚ್.ಸಿ ಮಹದೇವಪ್ಪ, ಹೆಚ್.ಕೆ ಪಾಟೀಲ್ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ ತಿಮ್ಮಾಪುರ್, ಶಿವಾನಂದ್ ಪಾಟೀಲ್, ಎಂಬಿ ಪಾಟೀಲ್, ಸಂತೋಷ್ ಲಾಡ್, ಸಿಎಂ ಪುತ್ರ ಎಂಎಲ್‌ಸಿ ಯತೀಂದ್ರ, ರಾಜ್ಯಸಭಾ ಸದಸ್ಯ ನಾರಾಯಣ್ ಸಾ ಭಾಂಡಗೆ, ಮಾಜಿ ಸಚಿವರಾದ ಎಸ್.ಆರ್ ಪಾಟೀಲ್, ಸಿಎಂ ಇಬ್ರಾಹಿಂ ಜಿ.ಎಸ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.
ಹಿಂದೂ ಹಾಲಮತ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅವರ ತಂದೆ, ತಾಯಿ ಸಮಾಧಿ ಪಕ್ಕ ಮೇಟಿಯವರ ಪಾರ್ಥಿವ ಶರೀರವನ್ನ ಹೂಳುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನೆರವೇರಿತು.ಇದನ್ನೂ ಓದಿ: ಕಬ್ಬು ಬೆಳೆ ಬೆಲೆ ನಿಗದಿಗೆ ಆಗ್ರಹ – ಕಟ್ಟೆಯೊಡೆದ ರೈತರ ಕಿಚ್ಚು; ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ

