ಬೆಂಗಳೂರು: ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ (Congress) ಜಾಲದಲ್ಲಿ ಸಿಕ್ಕಿಬೀಳಬೇಡಿ ಎಂದು ಆರ್‌ಎಸ್‌ಎಸ್ (RSS) ಬಿಜೆಪಿ ನಾಯಕರಿಗೆ ಸೂಚಿಸಿದೆ.
ಪಥ ಸಂಚಲನ ಜಟಾಪಟಿ ನಡುವೆ ಇಂದು ಬಿಜೆಪಿ (BJP) ನಾಯಕರ ಜೊತೆ ಆರ್‌ಎಸ್‌ಎಸ್ ಮಹತ್ವದ ಬೈಠಕ್ ನಡೆಸಿತು.
ಆರ್‌ಎಸ್‌ಎಸ್ ಮುಖಂಡರಾದ ತಿಪ್ಪೇಸ್ವಾಮಿ, ರಘುನಂದನ್, ವಾದಿರಾಜ್ ಬಿಜೆಪಿ ನಾಯಕರಾದ ಆರ್.ಅಶೋಕ್, ವಿಜಯೇಂದ್ರ, ಸಿ.ಟಿ ರವಿ, ಛಲವಾದಿ ನಾರಾಯಣಸ್ವಾಮಿ, ಅಶ್ವಥ್ ನಾರಾಯಣ, ಸಂಸದರಾದ ಬೊಮ್ಮಾಯಿ, ಬ್ರಿಜೇಶ್ ಚೌಟ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಜನಾರ್ದನ ರೆಡ್ಡಿ ಸೇರಿ ಹಲವು ಶಾಸಕರು, ಮುಖಂಡರು ಭಾಗಿಯಾಗಿದರು.
ಇತ್ತೀಚಿನ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಂಡು ನೀತಿ ಬೋಧನೆ ಮಾಡಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ತಿಳಿದುಬಂದಿದೆ. ಕಿವಿಮಾತು ಜೊತೆಗೆ ಸರ್ಕಾರದ ವಿರುದ್ಧ ಪರಿಣಾಮಕಾರಿ ಹೋರಾಟಕ್ಕೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: 50 ದಿನಗಳಿಂದ ತಲೆಮರಿಸಿಕೊಂಡಿದ್ದ ಬುರುಡೆ ಗ್ಯಾಂಗ್‌ನ ಮಹೇಶ್ ಶೆಟ್ಟಿ ತಿಮರೋಡಿ ಕೊನೆಗೂ ಪ್ರತ್ಯಕ್ಷ
ಆರ್‌ಎಸ್‌ಎಸ್ ಕಿವಿಮಾತೇನು?
ಆರ್‌ಎಸ್‌ಎಸ್ ಬಗ್ಗೆ ಕಾಂಗ್ರೆಸ್‌ನವರು ಕೆಟ್ಟ ಅಭಿಪ್ರಾಯ ಸೃಷ್ಟಿಸುತ್ತಿದ್ದಾರೆ. ಸಂಘಕ್ಕೆ 100 ವರ್ಷದ ಇತಿಹಾಸ ಇದ್ದು ಇಂಥ ಎಷ್ಟೋ ಕಠಿಣ ಸಂದರ್ಭಗಳನ್ನು ಸಂಘ ಎದುರಿಸಿ ಮೆಟ್ಟಿ ನಿಂತಿದೆ.
3 ಸಲ ಸಂಘವನ್ನು ನಿಷೇಧ ಮಾಡುವ ಅವರ ಪ್ರಯತ್ನಗಳೇ ವಿಫಲವಾಗಿದೆ. ಈಗ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸಂಘದ ವಿಚಾರ ಕೆದಕಿದ್ದಾರೆ. ಆತುರದ, ಉದ್ವೇಗದ ಹೇಳಿಕೆ ನೀಡಿ ಕಾಂಗ್ರೆಸ್ ಜಾಲದಲ್ಲಿ ಸಿಕ್ಕಿಬೀಳಬೇಡಿ. ಈಗಿನ ಸವಾಲಿನ ಪರಿಸ್ಥಿತಿಯನ್ನೂ ಸಂಘ ಯಶಸ್ವಿಯಾಗಿ ಎದುರಿಸುತ್ತದೆ.
ಬೈಠಕ್ ನಿರ್ಣಯಗಳೇನು?
ಆರ್‌ಎಸ್‌ಎಸ್ ವಿರುದ್ಧದ ಷಡ್ಯಂತ್ರ ಎದುರಿಸಿ ಸರ್ಕಾರದ ವಿರುದ್ಧ ಜನಾಭಿಪ್ರಾಯ ರೂಪಿಸುವುದು. ಸರ್ಕಾರದ ವೈಫಲ್ಯ, ಭ್ರಷ್ಟಾಚಾರ ಬಯಲಿಗೆಳೆದು ಕಾಂಗ್ರೆಸ್ ನಾಯಕರ ತಂತ್ರಕ್ಕೆ ಪ್ರತಿತಂತ್ರ ಹೆಣೆಯುವುದು. ಕಾಂಗ್ರೆಸ್ ವಿರುದ್ಧ ಪರಿಣಾಮಕಾರಿ ಹೋರಾಟ ರೂಪಿಸುವುದು.

