ಬೆಂಗಳೂರು: ನಾಡಿನೆಲ್ಲೆಡೆ ಇಂದು 70ನೇ ಕನ್ನಡ ರಾಜ್ಯೋತ್ಸವ (Kannada Rajyotsava) ಸಂಭ್ರಮ ಮನೆ ಮಾಡಿತ್ತು. ರಾಜ್ಯದ ಮೂಲೆ ಮೂಲೆಗಳಲ್ಲೂ ಕನ್ನಡ ಡಿಂಡಿಮ ಮೊಳಗಿತು.

ಬೆಳಗಾವಿ, ಬೀದರ್, ಬಾಗಲಕೋಟೆ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ, ಹಾಸನ, ಶಿವಮೊಗ್ಗ, ಉಡುಪಿ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕನ್ನಡ ರಾಜ್ಯೋತ್ಸವ ಅದ್ಧೂರಿಯಾಗಿ ಆಚರಿಸಲಾಯ್ತು. ಹಾಸನದಲ್ಲಿ 2,500 ಅಡಿ ಉದ್ಧದ ಕನ್ನಡ ಧ್ವಜ ಮೆರವಣಿಗೆ ಗಮನ ಸೆಳೆಯಿತು. ಅಂತೆಯೇ ಚಿಕ್ಕಬಳ್ಳಾಪುರದಲ್ಲಿರುವ ಇಶಾ ಫೌಂಡೇಷನ್‌ವತಿಯಿಂದಲೂ ಅದ್ಧೂರಿ ಮತ್ತು ಸಂಭ್ರಮದಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯ್ತು.
ಕನ್ನಡ ರಾಜ್ಯೋತ್ಸವದ ಅಂಗವಾಗಿ 112 ಅಡಿ ಎತ್ತರದ ಆದಿಯೋಗಿಯ ಶಿವನ ಪ್ರತಿಮೆಯನ್ನ (Adiyogi Shiva Statue) ಕರ್ನಾಟಕ ನಾಡಧ್ವಜದ ಅರಿಶಿನ, ಕುಂಕುಮ ಬಣ್ಣಗಳಿಂದ ಬೆಳಗಲಾಯಿತು. ಉದಯವಾದ ಚೆಲುವ ಕನ್ನಡ ನಾಡನ್ನ ಸ್ಮರಿಸಲು ಸದ್ಗುರು ಸನ್ನಿಧಿಯಲ್ಲಿ ಕನ್ನಡ ಧ್ವಜಾರೋಹಣ ನೆರವೇರಿಸಿ, ತಾಯಿ ಭುವನೇಶ್ವರಿಗೆ ಗೌರವ ಅರ್ಪಿಸಲಾಯಿತು.
