ಕಲಬುರಗಿ: ಚಿತ್ತಾಪುರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ (Chittapur RSS Route March) ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿದ್ದು, ಅಕ್ಟೋಬರ್ 28 ರಂದು ಸಂಘಟನೆಗಳ ಶಾಂತಿ ಸಭೆ ನಡೆಸಿ ಅಕ್ಟೋಬರ್ 30 ರಂದು ಅರ್ಜಿ ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಹೀಗಾಗಿ ಅ.28ರಂದು ಶಾಂತಿ ಸಭೆಗೆ ಹಾಜರಾಗುವಂತೆ ವಿವಿಧ ಸಂಘಟನೆಗಳಿಗೆ ಕಲಬುರಗಿ (Kalaburagi) ಜಿಲ್ಲಾಡಳಿತ ಮನವಿ ಮಾಡಿದೆ.
ಆರ್‌ಎಸ್‌ಎಸ್ (RSS), ದಲಿತ ಸಂಘಟನೆ ಸೇರಿ 8 ಸಂಘಟನೆಗಳಿಗೆ ಇಂದು ನೋಟಿಸ್ ನೀಡಲಾಗುತ್ತಿದ್ದು, ಕಲಬುರಗಿ ಡಿಸಿ ಫೌಜೀಯಾ ತರನ್ನುಂ ಹಾಗೂ ಎಸ್ಪಿ ಅಡ್ಡೂರ್ ಶ್ರೀನಿವಾಸಲು ನೇತೃತ್ವದಲ್ಲಿ ಶಾಂತಿ ಸಭೆ ನಡೆಯಲಿದೆ.
ಅ.30ರಂದು ಮತ್ತೆ ವಿಚಾರಣೆ
ಸಚಿವ ಪ್ರಿಯಾಂಕ್ ಖರ್ಗೆ ಕ್ಷೇತ್ರ ಕಲಬುರಗಿ ಜಿಲ್ಲೆ ಚಿತ್ತಾಪುರದಲ್ಲಿ ನವೆಂಬರ್ 2ರಂದು ಆರ್‌ಎಸ್‌ಎಸ್ ಪಥಸಂಚಲನ ವಿಚಾರಕ್ಕೆ ಸಂಬಂಧಿಸಿದಂತೆ ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ನಿನ್ನೆ ಆರ್‌ಎಸ್‌ಎಸ್ ಅರ್ಜಿ ವಿಚಾರಣೆ ನಡೆದಿದ್ದು, ಆರ್‌ಎಸ್‌ಎಸ್ ಪರ ಅರುಣ್ ಶ್ಯಾಮ್ ವಾದ ಮಂಡಿಸಿದ್ದರು. ಇನ್ನೂ ಎರಡು ಕಡೆ ವಾದ ಆಲಿಸಿದ ಕಲಬುರಗಿ ಹೈಕೋರ್ಟ್ ಏಕಸದಸ್ಯ ಪೀಠ, ಅಕ್ಟೋಬರ್ 28 ರಂದು ಎಲ್ಲಾ ಸಂಘಟನೆಗಳ ಶಾಂತಿ ಸಭೆ ನಡೆಸಲು ಜಿಲ್ಲಾಡಳಿತ ಮತ್ತು ಸರ್ಕಾರದ ಪರ ವಕೀಲರಿಗೆ ಸೂಚಿಸಿದೆ. ಶಾಂತಿ ಸಭೆ ನಡೆಸಿದ ವರದಿಯನ್ನ ತೆಗೆದುಕೊಂಡು ಅಕ್ಟೋಬರ್ 30 ರಂದು ಅರ್ಜಿ ವಿಚಾರಣೆಗೆ ಹಾಜರಾಗಲು ಹೈಕೋರ್ಟ್ ಸೂಚಿಸಿದೆ.
ಆರ್‌ಎಸ್‌ಎಸ್ ಪಥಸಂಚಲನಕ್ಕೆ ಕೌಂಟರ್ ಆಗಿ ಭೀಮ್ ಆರ್ಮಿ, ದಲಿತ್ ಪ್ಯಾಂಥರ್, ಹಸಿರು ಸೇನೆ, ಕ್ರಿಶ್ಚಿಯನ್ ವೇಲ್ ಫೇರ್ ಅಸೋಸಿಯೇಷನ್, ಎಸ್‌ಟಿಗೆ ಸೇರಿಸಲು ಆಗ್ರಹಿಸಿ ಕುರುಬ ಸಮುದಾಯ ಹೀಗೆ ಒಟ್ಟು 7 ಸಂಘಟನೆಗಳು ನವೆಂಬರ್ 2ರಂದೇ ಅನುಮತಿಗಾಗಿ ಅರ್ಜಿ ಸಲ್ಲಿಸಿದ ಹಿನ್ನೆಲೆ ಎಲ್ಲಾ ಸಂಘಟನೆಗಳಿಗೂ ಅಕ್ಟೋಬರ್ 28ರಂದು ಶಾಂತಿ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಸೂಚಿಸಲಾಗಿದೆ. ಆದರೆ ಅಕ್ಟೋಬರ್ 28ರಂದು ನಡೆಯುವ ಸಭೆಯಲ್ಲಿ ಸಹ ಒಮ್ಮತಕ್ಕೆ ಬರೋದು ಬಹುತೇಕ ಡೌಟ್ ಆಗಿದ್ದು, ಎಲ್ಲಾ ಸಂಘಟನೆಗಳು ಆರ್‌ಎಸ್‌ಎಸ್ ಪಥಸಂಚಲನ ದಿನವೇ ಅನುಮತಿಗೆ ಪಟ್ಟು ಹಿಡಿಯುವ ಸಾಧ್ಯತೆಯಿದೆ.
ಸದ್ಯ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಹೆಜ್ಜೆಹೆಜ್ಜೆಗೂ ಕಂಟಕ ಎದುರಾಗಿದ್ದು, ಶಾಂತಿ ಸಭೆಯಲ್ಲಿ ಸಹ ಅಶಾಂತಿ ಆಗುವ ಲಕ್ಷಣಗಳಿವೆ. ಹೀಗಾಗಿ ಅಕ್ಟೋಬರ್ 30ರಂದು ಅರ್ಜಿ ವಿಚಾರಣೆ ನಡೆದು ಅಂದೇ ಪಥಸಂಚಲನ ಭವಿಷ್ಯ ನಿರ್ಧಾರವಾಗಲಿದ್ದು, ಇಡೀ ದೇಶದ ಚಿತ್ತ ಚಿತ್ತಾಪುರ ಪಥಸಂಚಲನ ಮತ್ತು ಹೈಕೋರ್ಟ್ ಪೀಠದತ್ತ ನೆಟ್ಟಿರೋದು ಸತ್ಯ.

