ಶೀರ್ಷಿಕೆ ಹಾಗೂ ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಮಾರಿಗಲ್ಲು ವೆಬ್ ಸರಣಿಯ ಟ್ರೇಲರ್ ಬಿಡುಗಡೆಯಾಗಿದೆ. Zee5 ಮತ್ತು ‘ಪಿಆರ್‌ಕೆ ಪ್ರೊಡಕ್ಷನ್ಸ್’ ಜಂಟಿಯಾಗಿ ನಿರ್ಮಿಸಿರುವ ಈ ವೆಬ್ ಸೀರೀಸ್ ಇದೇ ತಿಂಗಳ 31ರಿಂದ ಪ್ರಸಾರ ಆಗಲಿದೆ. ಜೀ 5 ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ. ಮಾರಿಗಲ್ಲು 1990ರ ದಶಕದ ಕಥೆಯಾಗಿದೆ. ಅಲ್ಲದೇ ಕದಂಬರ ಕಾಲಘಟ್ಟದ ಹಿನ್ನೆಲೆನೂ ಇಲ್ಲಿದೆ. ಈ ಮೂಲಕ ನಮ್ಮ ಮಣ್ಣಿನ ಕಥೆಯನ್ನು ಜೀ 5 ಹಾಗೂ ಪಿ.ಆರ್.ಕೆ ಪ್ರೊಡಕ್ಷನ್ ಹೇಳೋದಿಕ್ಕೆ ಹೊರಟಿದೆ.
ಶಿರಸಿ ಬಳಿಯ ಮಾರಿಗಲ್ಲು ಎಂಬ ಕಾಲ್ಪನಿಕ ಹಳ್ಳಿಯೊಂದರಲ್ಲಿ ನಡೆದ ಕಥೆಯನ್ನು ಸರಣಿಯಲ್ಲಿ ಕಟ್ಟಿಕೊಡಲಾಗಿದೆ. ಕದಂಬರ ರಾಜಧಾನಿಯಾಗಿರುವ ಬನವಾಸಿಗೆ ತನ್ನದೇ ಆದ ಪರಂಪರೆ ಹಾಗೂ ಇತಿಹಾಸವಿದೆ. ಇದು ದೊಡ್ಡ ಮನೆತನ ಎಂದು ಹೆಸರು ಪಡೆದಿದೆ. ಕದಂಬರ ಕಾಲದ ನಿಧಿಯನ್ನು ಹುಡುಕಲು ಹೊರಟ ಶಿರಸಿ ಯುವಕರ ಕಹಾನಿಯನ್ನು ಇದರಲ್ಲಿ ತೋರಿಸಲಾಗಿದೆ. ನಂಬಿಕೆ, ಸ್ವಾರ್ಥ, ದುರಾಸೆ ಮುಂತಾದ ಭಾವನೆಗಳಿಗೆ ಒಳಗಾದ ಪಾತ್ರಗಳನ್ನು ಈ ಪಯಣದಲ್ಲಿ ಸೂಕ್ಷ್ಮವಾಗಿ ಹೇಳಾಗಿದೆ. ‘ಮಾರಿಗಲ್ಲು’ ಮೂಲಕ ರಂಗಾಯಣ ರಘು, ಗೋಪಾಲ್ ಕೃಷ್ಣ ದೇಶಪಾಂಡೆ ವೆಬ್ ಸೀರಿಸ್ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಪ್ರಪ್ರಥಮ ಬಾರಿಗೆ ಈ ಇಬ್ಬರು ವೆಬ್ ಸೇರೀಸ್ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವುದು ಕುತೂಹಲ ಹೆಚ್ಚಿಸಿದೆ ಪ್ರವೀಣ್ ತೇಜ್ ಪಾತ್ರವರ್ಗದಲ್ಲಿದ್ದಾರೆ. ಇವರೊಂದಿಗೆ ಜೀ ಕನ್ನಡದ ಹಿಟ್ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ಸ್ ಖ್ಯಾತಿಯ ಎಎಸ್ ಸೂರಜ್, ನಟ ಪ್ರಶಾಂತ್ ಸಿದ್ದಿ ಅಭಿನಯಿಸಿದ್ದಾರೆ. ಇವರಿಬ್ಬರು ಮೂಲತಃ ಶಿರಸಿಯವರಾಗಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚು ಮಾಡಿದೆ. ಟಿವಿ ಲೋಕದಲ್ಲಿ ಖ್ಯಾತಿ ಪಡೆದಿರುವ ನಿನಾದ್ ಹೃತ್ಸಾ ಮಾರಿಗಲ್ಲು ಭಾಗವಾಗಿದ್ದಾರೆ. ಸ್ಥಳೀಯ ರಂಗಭೂಮಿ ಕಲಾವಿದರು ವೆಬ್ ಸೀರೀಸ್ ನಲ್ಲಿ ನಟಿಸಿದ್ದಾರೆ. ಅನುಭವಿ ತಾರಾಬಳಗದ ಜೊತೆಗೆ ಹೊಸ ಪ್ರತಿಭೆಗಳಿಗೆ ವೆಬ್ ಸರಣಿಯಲ್ಲಿ ಅವಕಾಶ ನೀಡಲಾಗಿದೆ.
ಈ ವೆಬ್ ಸೀರಿಸ್ ಅನ್ನು ಪಿಆರ್‌ಕೆ ವತಿಯಿಂದ ಅಶ್ವಿನಿ ಪುನೀತ್ ರಾಜ್ಕುಮಾರ್ ನಿರ್ಮಾಣ ಮಾಡಿದ್ದು, ದೇವರಾಜ್ ಪೂಜಾರಿ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನಿರ್ದೇಶಕ ದೇವರಾಜ್ ಪೂಜಾರಿ ಮಾತನಾಡಿ, “ಮಾರಿಗಲ್ಲು ಕರ್ನಾಟಕದ ಮಣ್ಣಿನಲ್ಲಿ ಆಳವಾಗಿ ಬೇರೂರಿರುವ ಕಥೆಯಾಗಿದೆ. ಇದು ನಂಬಿಕೆ, ದುರಾಸೆ ಮತ್ತು ಮಾನವ ಹಣೆಬರಹವನ್ನು ರೂಪಿಸುವ ಕಾಣದ ಶಕ್ತಿಗಳ ಬಗ್ಗೆ ಇದೆ. ಅಲ್ಲದೇ ಶಿರಸಿಯ ಸಾಂಸ್ಕೃತಿಕ ಆಚರಣೆ, ಬೇಡರ ವೇಷ ಹುಟ್ಟು, ಹಿನ್ನೆಲೆಯಲ್ಲಿ ಸಾಗುವ ಕಥೆಯಲ್ಲಿ ಸರಣಿಯಲ್ಲಿ ನಾಲ್ಕು ಜನ ಹುಡುಗರು ಸೊಗಸಾಗಿ ನಟಿಸಿದ್ದಾರೆ. ಕಾಡು, ಜಾನಪದ ಮತ್ತು ನಂಬಿಕೆ ಎಲ್ಲವೂ ಒಟ್ಟಿಗೆ ಜೀವಂತವಾಗಿರುವ ನೈಜ ಆದರೆ ಅತೀಂದ್ರಿಯತೆಯನ್ನು ಅನುಭವಿಸುವ ಕಥೆಯನ್ನು ರಚಿಸಲು ನಾನು ಬಯಸಿದ್ದೆ. ಪ್ರತಿಯೊಂದು ಫ್ರೇಮ್ ಭಕ್ತಿ ಮತ್ತು ಭಯದ ಭಾವನೆಯನ್ನು ಹೊಂದಿದೆ, ಮತ್ತು ನಮ್ಮ ಸಂಸ್ಕೃತಿಯನ್ನು ನಿಗೂಢತೆಯ ಮೂಲಕ ಆಚರಿಸುವ ಕಥೆಯಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಪಿಆರ್‌ಕೆ ಪ್ರೊಡಕ್ಷನ್ಸ್ ಮತ್ತು ಜೀ5 ಗೆ ನಾನು ಕೃತಜ್ಞನಾಗಿದ್ದೇನೆ” ಎಂದು ಹೇಳಿದರು.
ಜೀ5 ಕನ್ನಡದ ವ್ಯವಹಾರ ಮುಖ್ಯಸ್ಥ ದೀಪಕ್ ಶ್ರೀರಾಮುಲು, “ಮಾರಿಗಲ್ಲು ನಮ್ಮ ಭರವಸೆಯ ‘ನಮ್ಮ ಭಾಷೆ, ನಮ್ಮ ಕಥೆಗಳು’ ಸಾರವನ್ನು ಸಂಪೂರ್ಣವಾಗಿ ಸೆರೆಹಿಡಿಯುತ್ತದೆ. ಇದು ಕರ್ನಾಟಕದ ಸ್ಥಳೀಯ ಕಥೆ ಹೇಳುವ ಸಂಪ್ರದಾಯ ದೈವಿಕ ಜಾನಪದ ಥ್ರಿಲ್ಲರ್ ಮತ್ತು ಹಾಸ್ಯದೊಂದಿಗೆ ಅಲೌಕಿಕ ಕುತೂಹಲವನ್ನು ಸಂಯೋಜಿಸುವ ಅಸಾಧಾರಣ ಕಥೆಯಾಗಿದೆ. ಇದು ಭಾಷೆಗಳು ಮತ್ತು ಪ್ರದೇಶಗಳಾದ್ಯಂತ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುತ್ತದೆ ಎಂದು ನಮಗೆ ವಿಶ್ವಾಸವಿದೆ ” ಎಂದು ಅಭಿಪ್ರಾಯ ಹಂಚಿಕೊಂಡರು. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಮಾತನಾಡಿ, “ಮಾರಿಗಲ್ಲು ನಮಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಇದು ಕರ್ನಾಟಕದಿಂದ ಬಲವಾದ, ಬೇರೂರಿರುವ ಕಥೆಗಳನ್ನು ದೊಡ್ಡ ಪ್ರೇಕ್ಷಕರಿಗೆ ಕೊಂಡೊಯ್ಯುವ ಪಿಆರ್ಕೆ ಪ್ರೊಡಕ್ಷನ್ನ (PRK Productions) ದೃಷ್ಟಿಕೋನವನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಇದು ಸಂಸ್ಕೃತಿ, ನಂಬಿಕೆ ಮತ್ತು ಮಾನವ ಭಾವನೆಗಳನ್ನು ಸಾಂಪ್ರದಾಯಿಕ ಮತ್ತು ಸಮಕಾಲೀನ ರೀತಿಯಲ್ಲಿ ಬೆರೆಸುವ ಸರಣಿಯಾಗಿದೆ. ಈ ಯೋಜನೆಯಲ್ಲಿ ಜೀ 5ನೊಂದಿಗೆ ಕೆಲಸ ಮಾಡುವುದು ತೃಪ್ತಿಕರವಾಗಿದೆ, ಒಟ್ಟಾಗಿ ನಾವು ನಮ್ಮ ನೆಲದ ಹೃದಯ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುವ ಕಥೆಯನ್ನು ಪ್ರಸ್ತುತಪಡಿಸುತ್ತಿದ್ದೇವೆ” ಎಂದರು.
ಮಾರಿಗಲ್ಲು ವೆಬ್ ಸರಣಿಗೆ (Maarigallu Web Series) ಎಸ್.ಕೆ. ರಾವ್ ಅವರು ಛಾಯಾಗ್ರಹಣ ಮಾಡಿದ್ದಾರೆ. ಎಲ್.ವಿ. ಮುತ್ತು ಹಾಗೂ ಎಲ್.ವಿ. ಗಣೇಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ರವಿ ಹಿರೇಮಠ್ ಅವರು ಸೌಂಡ್ ಡಿಸೈನ್ ಜವಾಬ್ದಾರಿ ನಿಭಾಯಿಸಿದ್ದು, ಕಾಂತಾರ ಸಂಕಲನಕಾರ ಸುರೇಶ್ ಮಲ್ಲಯ್ಯ, ಆಶಿಕ್ ಕಲರಿಸ್ಟ್ ಹೊಣೆ ಹೊತ್ತುಕೊಂಡಿದ್ದಾರೆ.





