ಹಾವೇರಿ: ಕಳಪೆ ಗುಣಮಟ್ಟದ ಬಿತ್ತನೆ ಬೀಜದಿಂದ ಫಸಲು ಬಾರದ ಹಿನ್ನಲೆಯಲ್ಲಿ ರೈತರೊಬ್ಬರು ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ರೈತನನ್ನು 52 ವರ್ಷ ವಯಸ್ಸಿನ ಪ್ರಕಾಶ ಯರಬಾಳ್ ಎಂದು ಗುರುತಿಸಲಾಗಿದೆ. ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ವಡೇರಾಯನಹಳ್ಳಿ ಗ್ರಾಮದ ರೈತ ಮೂರು ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆಯನ್ನು ಹಾಕಿದ್ದರು. ಆದರೆ ಬೆಳೆ ಬೆಳೆದರೂ ಫಸಲು ಮಾತ್ರ ಬಂದಿಲ್ಲ. ಇದರಿಂದ ಬೇಸತ್ತ ರೈತ ಕಾವೇರಿ ಕಂಪನಿಗೆ ದೂರು ನೀಡಿದ್ದರು. ಕೃಷಿ ಸಂಶೋಧಕರು ಜಮೀನಿಗೆ ಭೇಟಿ ಪರಿಶೀಲನೆ ನಡೆಸಿ ವರದಿ ನೀಡಿದ್ದರು. ವರದಿಯಲ್ಲಿ ವಾತಾವರಣ ಸರಿ ಇಲ್ಲದ ಕಾರಣ ಫಸಲು ಬಂದಿಲ್ಲ ಅಂತಾ ಹೇಳಲಾಗಿದೆ.
ಇದರಿಂದಾಗಿ ಪರಿಹಾರ ಸಿಗೋದಿಲ್ಲ ಎಂದು ತಿಳಿದ ರೈತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ರೈತನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.