ಬೆಂಗಳೂರು: ನಗರದ ಪ್ರತಿಷ್ಠಿತ ಎಂಜಿನಿಯರಿಂಗ್ (Engineering) ಕಾಲೇಜಿನ ಶೌಚಾಲಯದಲ್ಲಿ (Toilet) ತನ್ನ ಸಹಪಾಠಿಯ ಮೇಲೆ 21 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿ ಅತ್ಯಾಚಾರ (Rape) ಎಸಗಿದ್ದಾನೆ.
ಅ.10 ರಂದು ಕೃತ್ಯ ನಡೆದಿದ್ದು ಸಂತ್ರಸ್ತೆ 5 ದಿನಗಳ ನಂತರ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಹನಮಂತನಗರ ಪೊಲೀಸರು ಈಗ ವಿದ್ಯಾರ್ಥಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಘಟನೆ ಹೇಗಾಯ್ತು?
ಆರೋಪಿ 6ನೇ ಸೆಮಿಸ್ಟರ್ ವಿದ್ಯಾರ್ಥಿಯಾಗಿದ್ದರೆ ಸಂತ್ರಸ್ತೆ ಏಳನೇ ಸೆಮಿಸ್ಟರ್ ವಿದ್ಯಾರ್ಥಿನಿಯಾಗಿದ್ದಾಳೆ. ಇವರಿಬ್ಬರು ಮೊದಲು ಒಂದೇ ತರಗತಿಯಲ್ಲಿ ಓದುತ್ತಿದ್ದರು. ಆದರೆ ಆರೋಪಿ ಒಂದು ಸೆಮಿಸ್ಟರ್‌ನಲ್ಲಿ ಫೇಲ್ ಆಗಿದ್ದ.
ಕಾಲೇಜಿನ ಊಟದ ವಿರಾಮದ ಸಮಯದಲ್ಲಿ ಆರೋಪಿ ಹಲವು ಬಾರಿ ಕರೆ ಮಾಡಿ ಏಳನೇ ಮಹಡಿಯಲ್ಲಿರುವ ಆರ್ಕಿಟೆಕ್ಚರ್ ಬ್ಲಾಕ್ ಬಳಿ ತನ್ನನ್ನು ಭೇಟಿಯಾಗುವಂತೆ ಕೇಳಿಕೊಂಡಿದ್ದಾನೆ. ಆಕೆ ಬಂದಾಗ ಬಲವಂತವಾಗಿ ಚುಂಬಿಸಲು ಪ್ರಯತ್ನಿಸಿದ್ದಾನೆ. ನಂತರ ಆಕೆ ಲಿಫ್ಟ್ ಬಳಸಿ ಹೊರಡಲು ಮುಂದಾದಾಗ ಆರನೇ ಮಹಡಿವರೆಗೆ ಆಕೆಯನ್ನು ಹಿಂಬಾಲಿಸಿ ಪುರುಷರ ಶೌಚಾಲಯಕ್ಕೆ ಎಳೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಶೌಚಾಲಯದ ಬಾಗಿಲನ್ನು ಲಾಕ್ ಮಾಡಿ ಕೃತ್ಯ ಎಸಗಿದ್ದಾನೆ. ಈ ವೇಳೆ ಸಂತ್ರಸ್ತೆಯ ಮೊಬೈಲಿಗೆ ಕರೆ ಬಂದಾಗ ಫೋನ್ ವಶಪಡಿಸಿಕೊಂಡಿದ್ದಾನೆ. ಮಧ್ಯಾಹ್ನ 1:30 ರಿಂದ 1:50 ರ ನಡುವೆ ಈ ಕೃತ್ಯ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೆಳಕಿಗೆ ಬಂದಿದ್ದು ಹೇಗೆ?
ಘಟನೆಯ ನಂತರ ವಿದ್ಯಾರ್ಥಿನಿ ತನ್ನ ಇಬ್ಬರು ಸ್ನೇಹಿತರಿಗೆ ಈ ವಿಚಾರವನ್ನು ತಿಳಿಸಿದ್ದಾಳೆ. ಅಷ್ಟೇ ಅಲ್ಲದೇ ಆರೋಪಿ ಕರೆ ಮಾಡಿ ಮಾತ್ರೆ ಬೇಕೇ ಎಂದು ಕೇಳಿದ್ದಾನೆ.
ಈ ಕೃತ್ಯದಿಂದ ಶಾಕ್‌ಗೆ ಒಳಗಾಗಿದ್ದ ವಿದ್ಯಾರ್ಥಿನಿ ಆರಂಭದಲ್ಲಿ ದೂರು ನೀಡಲು ಹಿಂದೇಟು ಹಾಕಿದ್ದಳು. ನಂತರ ಧೈರ್ಯ ಮಾಡಿ ಪೋಷಕರಿಗೆ ತಿಳಿಸಿದ ಬಳಿಕ ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಘಟನೆ ನಡೆದ ಸ್ಥಳದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ. ಪೊಲೀಸರು ಈಗ ವಿಧಿವಿಜ್ಞಾನ ಮತ್ತು ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ.