* ಸಚಿವ ಪ್ರಹ್ಲಾದ್ ಜೋಶಿ ಒತ್ತಾಸೆಗೆ ರೈಲ್ವೆ ಸಚಿವರ ಸ್ಪಂದನೆ
* ರಾಜಧಾನಿ-ವಾಣಿಜ್ಯ ನಗರಿ ಮಧ್ಯೆ ಡಿ.8ರಿಂದ ಹೊಸ ರೈಲು ಸಂಚಾರ
ನವದೆಹಲಿ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಪ್ರಯತ್ನದ ಫಲವಾಗಿ ಕೇಂದ್ರ ಸರ್ಕಾರ ದೀಪಾವಳಿ ವೇಳೆ ರಾಜ್ಯಕ್ಕೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ರಾಜಧಾನಿ ಬೆಂಗಳೂರು ಮತ್ತು ವಾಣಿಜ್ಯ ನಗರಿ ಹುಬ್ಬಳ್ಳಿ (Bengaluru-Hubballi) ಮಧ್ಯೆ ನಿತ್ಯ ‘ಸೂಪರ್ ಫಾಸ್ಟ್ ವಿಶೇಷ ರೈಲು’ ಸಂಚಾರದ ಕೊಡುಗೆ ನೀಡಿದೆ.
ಹುಬ್ಬಳ್ಳಿ-ಬೆಂಗಳೂರು ಮಾರ್ಗದಲ್ಲಿ ಡಿಸೆಂಬರ್ 8ರಿಂದ ಪ್ರತಿನಿತ್ಯವೂ ಈ ವಿಶೇಷ ಸೂಪರ್ ಫಾಸ್ಟ್ ರೈಲು ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಅದರಂತೆ ರೈಲು ಸಂಖ್ಯೆ: 20687 ಮತ್ತು 20688 SBC ಈ ಮಾರ್ಗದಲ್ಲಿ ನಿಯತಕಾಲಿಕವಾಗಿ ಸಂಚಾರ ಆರಂಭಿಸಲಿವೆ. ಇದನ್ನೂ ಓದಿ: ಜಾತಿಗಣತಿಯಲ್ಲಿ ಭಾಗವಹಿಸಿದ ಸಿಎಂ ಸಿದ್ದರಾಮಯ್ಯ
ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕದ ಕೊಂಡಿಯಂತಿರುವ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಹೆಚ್ಚಿನ ಜನಸಂಪರ್ಕ ಇರುವುದರಿಂದ ಧಾರವಾಡ ಸಂಸದ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಕೆಲ ದಿನಗಳ ಹಿಂದಷ್ಟೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದರು. ಸಚಿವ ಜೋಶಿ ಅವರ ಒತ್ತಾಸೆಗೆ ಸ್ಪಂದಿಸಿದ ರೈಲ್ವೆ ಸಚಿವರಿಬ್ಬರೂ ಇದೀಗ ಬೆಂಗಳೂರು-ಹುಬ್ಬಳ್ಳಿ ಮಾರ್ಗದಲ್ಲಿ ಮತ್ತೊಂದು ಸೂಪರ್ ಫಾಸ್ಟ್ ವಿಶೇಷ ರೈಲು ಸಂಚಾರಕ್ಕೆ ಕ್ರಮ ಕೈಗೊಂಡಿದ್ದಾರೆ.
ಈ ಸೂಪರ್ ಫಾಸ್ಟ್ ರೈಲು ಹುಬ್ಬಳ್ಳಿ, ಕರ್ಜಗಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಬಿರೂರು, ಅರಸಿಕೆರೆ, ಸಂಪಿಗೆ ರೋಡ್, ತುಮಕೂರು, ಯಶವಂತಪುರ ಮತ್ತು ಕೆಎಸ್‌ಆರ್ ಬೆಂಗಳೂರು ಮಧ್ಯೆ ಸಂಚರಿಸಲಿದೆ. ರಾಜಧಾನಿ ಮತ್ತು ಉತ್ತರ ಕರ್ನಾಟಕ ಮಾತ್ರವಲ್ಲದೆ, ಮಧ್ಯ ಕರ್ನಾಟಕಕ್ಕೂ ಸಂಪರ್ಕ ಸೇತುವಾಗಿದೆ. ಇದರಿಂದ ರಾಜ್ಯದ ಏಳೆಂಟು ಜಿಲ್ಲೆಗಳಿಗೂ ಹೆಚ್ಚಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಇದನ್ನೂ ಓದಿ: 2027ರ ಏಪ್ರಿಲ್‌ನಲ್ಲಿ ಬೆಂಗಳೂರಲ್ಲಿ ಜೈಟೆಕ್ಸ್ ಗ್ಲೋಬಲ್ ಸಮ್ಮೇಳನ – ದುಬೈ ವರ್ಲ್ಡ್ ಟ್ರೇಡ್ ಸೆಂಟರ್ ಸಹಕಾರ: ಪ್ರಿಯಾಂಕ್ ಖರ್ಗೆ
ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಹೊಸ ರೈಲು ಸಮಸ್ತ ಉತ್ತರ ಕರ್ನಾಟಕದ ಅಭಿವೃದ್ಧಿ ಜತೆಗೆ ವಿವಿಧ ಪ್ರದೇಶಗಳ ವಾಣಿಜ್ಯೋದ್ಯಮಕ್ಕೂ ಅನುಕೂಲವಾಗಲಿದೆ. ಹೀಗಾಗಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು, ಹೊಸ ರೈಲು ಕಲ್ಪಿಸಿದ ಪ್ರಧಾನಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ವಿ.ಸೋಮಣ್ಣ ಅವರಿಗೆ ಧನ್ಯವಾದ ತಿಳಿಸಿದ್ದಾರೆ.