ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಏನಾಗುತ್ತೆ..? ಏನ್ ಆಗಲ್ಲ. ನವೆಂಬರ್ ಆಟವೋ..? ಡಿಸೆಂಬರ್ ಡೆಡ್‌ಲೈನೋ..? ಇದು ರಾಜ್ಯ ರಾಜಕಾರಣದ ಬಿಸಿ ಬಿಸಿ ಚರ್ಚೆ. ಈ ನಡುವೆ ನಾಳೆ ಸಿಎಂ ಕರೆದಿರುವ ಡಿನ್ನರ್ ಮೀಟಿಂಗ್ (CM Dinner Meeting), ಮತ್ತಷ್ಟು ಕಾವೇರಿಸಿದೆ. ಹಾಗಾದ್ರೆ ಡಿನ್ನರ್ ಮೀಟಿಂಗ್ ರಹಸ್ಯ ಏನು..? ಇನ್‌ಸೈಡ್ ಸ್ಟೋರಿಗಾಗಿ ಮುಂದೆ ಓದಿ…
ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಸದ್ದು ಸದ್ಯಕ್ಕೆ ನಿಲ್ಲುತ್ತಿಲ್ಲ. ಈ ಹೊತ್ತಲ್ಲೇ ನಾಳೆ ಸಿಎಂ ಸಿದ್ದರಾಮಯ್ಯ ಸಚಿವರಿಗೆ ಡಿನ್ನರ್ ಆಯೋಜಿಸಿದ್ದಾರೆ. ಬಹಳ ದಿನಗಳ ನಂತ್ರ ಸಚಿವರ ಸಭೆ ಕರೆದಿರುವ ಸಿಎಂ ಸಿದ್ದರಾಮಯ್ಯ (Siddaramaiah) ನಡೆ ಕುತೂಹಲ ಮೂಡಿಸಿದೆ. ಊಟದ ನೆಪದಲ್ಲಿ ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದು, ಸಂಪುಟ ಪುನಾರಚನೆ ಆಗುತ್ತೋ..? ಇಲ್ವೋ..? ಎಂಬ ಬಗ್ಗೆ ಕ್ಲಾರಿಟಿ ಕೊಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಆದ್ರೆ ಡಿನ್ನರ್‌ಗೆ ಡಿಸಿಎಂ ಡಿಕೆಶಿಗೂ ಕೂಡ ಆಹ್ವಾನ ಕೊಟ್ಟಿದ್ದಾರೆ ಎನ್ನಲಾಗಿದ್ದು, ಡಿಕೆಶಿ (DK Shivakumar) ಹಾಜರಿ ಬಗ್ಗೆ ಕುತೂಹಲವೂ ಹೆಚ್ಚಿದೆ. ಆದ್ರೆ ಸಂಪುಟ ಪುನಾರಚನೆ ಸಿಎಂ ಕೈಯಲ್ಲಿ ಇಲ್ಲ, ಹೈಕಮಾಂಡ್ ಅಂತಿಮ ತೀರ್ಮಾನ ಮಾಡಬೇಕಾಗುತ್ತೆ. ನಾಳೆಯ ಡಿನ್ನರ್ ಸಭೆಯಲ್ಲಿ ಬಿಹಾರ ಎಲೆಕ್ಷನ್‌ಗೆ ರಾಜ್ಯ ಕಾಂಗ್ರೆಸ್‌ನಿಂದ ಹೈಕಮಾಂಡ್‌ಗೆ ಸಹಕಾರ ಕೊಡುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಬಹುದು ಎನ್ನಲಾಗ್ತಿದೆ.
ಇನ್ನು ಸಂಪುಟ ಪುನಾರಚನೆಗೆ ಬಗ್ಗೆ ಶಾಸಕ ಲಕ್ಷ್ಮಣ್ ಸವದಿ ಸುಳಿವು ನೀಡಿದಂತೆ ಕಾಣ್ತಿದೆ, ಡಿಸೆಂಬರ್‌ನಲ್ಲಿ ನನಗೆ ಶುಕ್ರದೆಸೆ ಬರಲಿದೆ ಅಂತಾ ಹೇಳಿದ್ದಾರೆ. ಆದ್ರೆ ಸಚಿವರಾದ ಹೆಚ್.ಸಿ.ಮಹದೇವಪ್ಪ, ದಿನೇಶ್‌ಗುಂಡೂರಾವ್ ಮಾತ್ರ ಸಿಎಂ ಡಿನ್ನರ್ ಕರೆದಿರುವುದು ಪುನಾರಚನೆಗೆ ಅಲ್ಲ ಅಂತಾ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಎಲ್ಲವೂ ಹೈಕಮಾಂಡ್ ಕೈಯಲ್ಲಿದೆ ಅಂತೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ಬೆಳವಣಿಗೆಗಳ ಬಗ್ಗೆ ಬಿಜೆಪಿ ನಾಯಕರು (BJP Leaders) ವಾಗ್ದಾಳಿ ನಡೆಸಿದ್ದಾರೆ. ಜನ ನೆರೆಯಿಂದ ಸಮಸ್ಯೆಗೆ ಒಳಗಾಗಿದ್ದಾರೆ. ಸಿಎಂ ನಾಟಕ ಮಾಡೋದನ್ನು ಬಿಡಲಿ. ಸಚಿವರನ್ನು ನೆರೆ ಪ್ರದೇಶಗಳಿಗೆ ಕಳಿಸಿಕೊಡಿ. ನಿಮ್ಮ ಔತಣ ಕೂಟವನ್ನು ನಿಲ್ಲಿಸಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಸಾಕಷ್ಟು ಗೊಂದಲ ಇದೆ. ಕ್ಯಾಬಿನೆಟ್ ನಲ್ಲಿ ಒಬ್ಬರಿಗೊಬ್ಬರು ಬಡಿದಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಕೈಕೈ ಮಿಲಾಯಿಸುವ ಹಂತಕ್ಕೆ ಬಂದಿದ್ದಾರೆ ಅಂತಾ ವ್ಯಂಗ್ಯವಾಡಿದ್ದಾರೆ.
ಒಟ್ನಲ್ಲಿ `ಕೈ’ ಮನೆಯೊಳಗೆ ಕ್ರಾಂತಿ ಕಂಪನ ಜೋರಾಗಿದ್ದು, ಕ್ರಾಂತಿಗೆ ಬ್ರೇಕ್ ಹಾಕಲು ಒಂದು ಗುಂಪು ಒಟ್ಟೊಟ್ಟಿಗೆ ಮೂರು ಅಸ್ತ್ರ ಪ್ರಯೋಗಿಸ್ತಿದ್ರೆ, ಒಂದು ಗುಂಪು ಸೈಲೈಂಟ್ ಆಗಿ ಹೈಕಮಾಂಡ್ ಮುಂದೆ ಕ್ಲೈಮ್ ಮಾಡಲು ಮುಂದಾಗಿದ್ದು, ಕ್ರಾಂತಿ ಕಡೆಗೋ? ಪುನಾರಚನೆಗಷ್ಟೇ ಸೀಮಿತವೋ..? ಕಾದುನೋಡಬೇಕಿದೆ.