ಪಾಟ್ನಾ: ಮತದಾರರ (Voter List) ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದ್ದ ಬಿಹಾರದ ಧೋರೈಯಾ ಬ್ಲಾಕ್‌ನ ಬಟ್ಸರ್ ಗ್ರಾಮದ ಐವರು ಮತದಾರರು ಅಧಿಕಾರಿಗಳ ಮುಂದೆ ಹಾಜರಾಗಿದ್ದಾರೆ.
ಬೂತ್ ಸಂಖ್ಯೆ 216ರ ಐವರು ಗ್ರಾಮಸ್ಥರು ಬಿಡಿಒ ಅರವಿಂದ್ ಕುಮಾರ್ ಅವರನ್ನು ಸಂಪರ್ಕಿಸಿ ʻನಾವು ಜೀವಂತವಾಗಿದ್ದೇವೆʼ ಎಂದು ಮನವಿ ಪತ್ರವನ್ನು ಸಲ್ಲಿಸಿದ್ದಾರೆ. ಬಿಹಾರ ಮೊದಲ ಹಂತದ ಚುನಾವಣೆ (Bihar Election) ಸಮಿಸುತ್ತಿರುವಾಗ ಈ ಬೆಳವಣಿಗೆ ನಡೆದಿದೆ. ಇದನ್ನೂ ಓದಿ: ಬಿಹಾರ ವಿಧಾನಸಭೆ ಚುನಾವಣೆ; ಎನ್‌ಡಿಎ-ಇಂಡಿಯಾ ಒಕ್ಕೂಟದ ನಡುವೆ ಸೀಟು ಹಂಚಿಕೆ ಲೆಕ್ಕಾಚಾರ
ಮತದಾರರಾದ ಮೋಹನ್ ಸಾ (ಸೀರಿಯಲ್ ಸಂಖ್ಯೆ 2), ಸಂಜಯ್ ಯಾದವ್ (ಸೀರಿಯಲ್ ಸಂಖ್ಯೆ 175), ರಾಮರೂಪ್ ಯಾದವ್ (ಸೀರಿಯಲ್ ಸಂಖ್ಯೆ 211), ನರೇಂದ್ರ ಕುಮಾರ್ ದಾಸ್ (ಸೀರಿಯಲ್ ಸಂಖ್ಯೆ 364), ಮತ್ತು ವಿಶ್ವವರ್ ಪ್ರಸಾದ್ (ಸೀರಿಯಲ್ ಸಂಖ್ಯೆ 380) ಇವರನ್ನು ಮತದಾರರ ಪಟ್ಟಿಯಲ್ಲಿ ಮೃತಪಟ್ಟಿದ್ದಾರೆ ಎಂದು ನಮೋದಿಸಲಾಗಿತ್ತು.
ಸಾಮಾಜಿಕ ಕಾರ್ಯಕರ್ತ ಇಂದ್ರದೇವ್ ಮಂಡಲ್ ನೇತೃತ್ವದಲ್ಲಿ, ಈ ಐವರು ಮತದಾರರ ಪಟ್ಟಿಯ ದೋಷವನ್ನು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ದೋಷವು ನಮ್ಮ ಮತ ಚಲಾಯಿಸುವ ಹಕ್ಕನ್ನು ತಡೆಯಬಹುದು ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಬಿಡಿಒ ತಕ್ಷಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ, ಬಿಎಲ್‌ಒಗೆ ದೋಷ ಸರಿಪಡಿಸುವಂತೆ ಸೂಚಿಸಿದರು. ಇದೇ ವೇಳೆ ಯಾವುದೇ ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಇದಕ್ಕೂ ಮೊದಲು ಚಂಪಾರಣ್‌ನ ಬಾಗಾಹಿ ಪಂಚಾಯತ್‌ನ ದುಮ್ರಿ ಗ್ರಾಮದ ಮತದಾರರ ಪಟ್ಟಿಯಲ್ಲಿ 15 ಜನ ಮೃತಪಟ್ಟಿದ್ದಾರೆ ಎಂದು ದಾಖಲಾಗಿತ್ತು. ಇನ್ನೂ 2018 ರಲ್ಲಿ ನಿಧನರಾಗಿದ್ದ ಸೋನಿಯಾ ಶರಣ್ ಮತ್ತು ಫೆಬ್ರವರಿ 2025 ರಲ್ಲಿ ನಿಧನರಾದ ಅವರ ಮಗ ಮಣಿತ್ ಮಣಿ ಅವರನ್ನು ಅರ್ಹ ಮತದಾರರೆಂದು ತಪ್ಪಾಗಿ ನಮೋದಿಸಲಾಗಿತ್ತು. ಅಲ್ಲದೇ 2016 ರವರೆಗೆ ನಿಧನರಾದ ಜನರು ಸಹ ಇನ್ನೂ ಮತದಾರರ ಪಟ್ಟಿಯಲ್ಲಿದ್ದಾರೆ.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದೆ. ನವೆಂಬರ್ 14 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: Bihar Election Dates 2025 | 69 ಲಕ್ಷ ಹೆಸರುಗಳು ಡಿಲೀಟ್, 21 ಲಕ್ಷ ಹೊಸ ಮತದಾರರ ಸೇರ್ಪಡೆ