ಮಧ್ಯಪ್ರದೇಶದಲ್ಲಿ ಮಾರಕ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತೆ 6 ಮಕ್ಕಳು ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವನ್ನಪ್ಪಿದ ಮಕ್ಕಳ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಕೆಮ್ಮಿಗೆ ತೆಗದುಕೊಂಡ ಸಿರಪ್ ಮಕ್ಕಳ ಪ್ರಾಣವನ್ನೇ ಕಸಿದುಕೊಂಡಿದೆ. ಮಕ್ಕಳಿಗೆ ಸಿರಪ್ ನೀಡುವ ಮುನ್ನ ಪೋಷಕರು ನೂರು ಬಾರಿ ಯೋಚಿಸುವ ಪರಿಸ್ಥಿತಿ ಬಂದೊದಗಿದೆ. ಹಾಗಿದ್ರೆ ಮಕ್ಕಳು ಸಾವನ್ನಪ್ಪಲು ಸಿರಪ್ ಕಾರಣವಾಗಿದ್ದು ಹೇಗೆ? ಮಕ್ಕಳಲ್ಲಿ ಕಿಡ್ನಿ ವೈಪಲ್ಯಗೊಳ್ಳಲು ಕಾರಣವೇನು? ಮಕ್ಕಳಿಗೆ ಸಿರಪ್ ನೀಡುವ ಮುನ್ನ ಪೋಷಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಮಧ್ಯಪ್ರದೇಶ ಸಿರಪ್ ದುರಂತ:
ಚೆನ್ನೈ ಮೂಲದ ಸ್ರೆಸನ್ ಫಾರ್ಮಾಸ್ಯುಟಿಕಲ್ಸ್ ತಯಾರಿಸಿದ ಮಕ್ಕಳ ಕೆಮ್ಮಿನ ಸಿರಪ್ ಸೇವನೆಯಿಂದಾಗಿ 20ಕ್ಕೂ ಹೆಚ್ಚು ಮಕ್ಕಳು ಸಾವನ್ನಪ್ಪಿರುವ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮಕ್ಕಳಿಗೆ ಕೆಮ್ಮು, ಶೀತ ಅಂತಾ ಸಿರಪ್ ಹಾಕಲು ಪೋಷಕರನ್ನು ನೂರು ಬಾರಿ ಯೋಚಿಸುವಂತೆ ಮಾಡಿದೆ. ಮಧ್ಯಪ್ರದೇಶದ ಚಿಂದ್ವಾರ ಜಿಲ್ಲೆಯಲ್ಲಿ, ಶೀತಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮಕ್ಕಳು, ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಕುಡಿದ ನಂತರ ಕಿಡ್ನಿ ವೈಪಲ್ಯದಿಂದ ಸಾವನ್ನಪ್ಪಿದ್ದಾರೆ. ಸಿರಪ್ ಮಾದರಿಗಳಲ್ಲಿ ವಿಷಕಾರಿ ದ್ರಾವಕವಾದ ಡೈಥಿಲೀನ್ ಗ್ಲೈಕೋಲ್ ಹೆಚ್ಚಿರುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಪ್ಟೆಂಬರ್ ಮೊದಲಾರ್ಧದಲ್ಲಿ, ಚಿಂದ್ವಾರ ಜಿಲ್ಲೆಯಲ್ಲಿ, ಕಿಡ್ನಿ ವೈಫಲ್ಯದಿಂದ ಮಕ್ಕಳು ಸಾವನ್ನಪ್ಪುತ್ತಿರುವ ಘಟನೆ ವರದಿಯಾಗಲು ಆರಂಭವಾಗಿತ್ತು. ಮೃತ ಮಕ್ಕಳ ಪೋಷಕರು ಒಂದೇ ರೀತಿಯ ಲಕ್ಷಣಗಳ ಬಗ್ಗೆ ಹೇಳಿದರು. ಈ ಸಿಪರ್ ಸೇವಿಸಿದ ನಂತರ ಮಕ್ಕಳಲ್ಲಿ ಮೊದಲಿಗೆ ಶೀತ ಕಡಿಮೆಯಾಗಿದೆ, ನಂತರ ಉಸಿರಾಟದ ತೊಂದರೆ ಕಂಡುಬಂದಿದೆ. ಕೊನೆಯಲ್ಲಿ ಮೂತ್ರ ವಿಸರ್ಜನೆಯಲ್ಲಿ ಹಠಾತ್ ಕುಸಿತ ಮತ್ತು ಮೂತ್ರಪಿಂಡ ವೈಫಲ್ಯಗೊಂಡು ಮಕ್ಕಳು ಸಾವನ್ನಪ್ಪಿದ್ದಾರೆ.
ಈ ಮೊದಲು ಮಧ್ಯಪ್ರದೇಶದ ಛಿಂದ್ವಾಡದ 14 ಮಕ್ಕಳು ವಿಷಕಾರಿ ಕೆಮ್ಮಿನ ಸಿರಪ್ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ದೃಢಪಡಿಸಿತ್ತು. ಅದಾದ ಬಳಿಕ ಮತ್ತೆ ಮಂಗಳವಾರ (ಅ.7) ಛಿಂದ್ವಾಡದಲ್ಲಿ 4 ಹಾಗೂ ಬೇತುಲ್‌ನಲ್ಲಿ 2 ಮಕ್ಕಳು ಸಾವನ್ನಪ್ಪಿದ್ದಾರೆ. ಇನ್ನೂ 6 ಮಕ್ಕಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 5 ಮಕ್ಕಳ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಸಿರಪ್ ಸೇವಿಸಿ ಅಸ್ವಸ್ಥರಾದ ಮಕ್ಕಳ ಚಿಕಿತ್ಸೆಯ ಖರ್ಚನ್ನು ತಾನೇ ಭರಿಸುವುದಾಗಿ ಮಧ್ಯಪ್ರದೇಶ ಸರ್ಕಾರ ಘೋಷಿಸಿದೆ. ಅತ್ತ ಕೋಲ್ಡ್ರಿಫ್‌ನಲ್ಲಿ ನರಸಂಬಂಧಿ ಕಾಯಿಲೆಗೆ ಕಾರಣವಾಗಬಹುದಾದ ಅಂಶ ಕಂಡುಬಂದದ್ದರಿಂದ, ಅದರ ಉತ್ಪಾದಕ ಸ್ರೆಸನ್ ಫಾರ್ಮಾಸುಟಿಕಲ್ಸ್ ಕಂಪನಿಯ ಮಾಲೀಕ ರಂಗನಾಥನ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಮಧ್ಯಪ್ರದೇಶದಲ್ಲಿ ಸಿರಪ್ ದುರಂತದ ಬಳಿಕ ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್ ಅನ್ನು ಹಲವು ರಾಜ್ಯಗಳಲ್ಲಿ ನಿಷೇಧಿಸಲಾಯಿತು. ಈ ಬೆನ್ನಲ್ಲೇ ಸ್ರೆಸನ್ ಫಾರ್ಮಾ ಕಂಪನಿಯ ಮಾಲೀಕ ರಂಗನಾಥನ್ ತಲೆಮರೆಸಿಕೊಂಡಿದ್ದ. ರಂಗನಾಥನ್ ಬಗ್ಗೆ ಮಾಹಿತಿ ನೀಡಿದವರಿಗೆ 20,000 ರೂ. ಬಹುಮಾನವನ್ನೂ ಘೋಷಿಸಲಾಗಿತ್ತು. ಅಂತಿಮವಾಗಿ ಚೆನ್ನೈನಲ್ಲಿ ರಂಗನಾಥನ್‌ನನ್ನು ಪೊಲೀಸರು ಸೆರೆಹಿಡಿದಿದ್ದಾರೆ.
ಡೈಥಿಲೀನ್ ಗ್ಲೈಕೋಲ್ ಪತ್ತೆ:
ಅಧಿಕಾರಿಗಳ ಪ್ರಕಾರ, ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ನಡೆಸಿದ ಪ್ರಯೋಗಾಲಯ ವಿಶ್ಲೇಷಣೆಯಲ್ಲಿ ಸಿರಪ್‌ನಲ್ಲಿ ಶೇ.48.6 ರಷ್ಟು ಡೈಥಿಲೀನ್ ಗ್ಲೈಕೋಲ್ ಇರುವುದು ಪತ್ತೆಯಾಗಿದೆ. ಎರಡೂ ರಾಸಾಯನಿಕಗಳು ಕೈಗಾರಿಕಾ ದ್ರಾವಕಗಳಾಗಿವೆ ಮತ್ತು ಔಷಧೀಯ ಬಳಕೆಗೆ ನಿಷೇಧಿಸಲಾಗಿದೆ. ಇದು ಸಣ್ಣ ಪ್ರಮಾಣದಲ್ಲಿ ಸಹ ಮಾರಕವಾಗಬಹುದು, ವಿಶೇಷವಾಗಿ ಮಕ್ಕಳಿಗೆ ಪ್ರಾಣಕ್ಕೆ ಕುತ್ತು ತರುವಂತಹ ಅಂಶ ಇದಾಗಿದೆ.
ಪರವಾನಗಿ ರದ್ದು:
ಘಟನೆಯ ನಂತರ, ಮಧ್ಯಪ್ರದೇಶ ಸರ್ಕಾರವು ಕೋಲ್ಡ್ರಿಫ್ ತಯಾರಿಸುವ ತಮಿಳುನಾಡು ಮೂಲದ ಕಾಂಚೀಪುರಂನಲ್ಲಿರುವ ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (CDSCO) ಸ್ರೆಸನ್ ಉತ್ಪಾದನಾ ಪರವಾನಗಿಯನ್ನು ರದ್ದುಗೊಳಿಸಲಾಗಿದೆ ಮತ್ತು ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದೆ. ಈ ಘಟನೆ ಬೆನ್ನಲ್ಲೇ, ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತ ಸಿರಪ್‌ಗಳನ್ನು ಶಿಫಾರಸು ಮಾಡಬಾರದು ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಲಹೆ ನೀಡಿದೆ.
ಸಿರಪ್ ತಯಾರಿಸಿದ ಕಂಪನಿ ಮತ್ತು ಕೋಲ್ಡ್ರಿಫ್ ಸಿರಪ್ ತೆಗೆದುಕೊಳ್ಳುವಂತೆ ಪ್ರಿಸ್ಕ್ರಿಪ್ಷನ್ ನೀಡಿದ ವೈದ್ಯ ಡಾ. ಸೋನಿ ವಿರುದ್ಧ ಪರಾಸಿಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಪ್ರವೀಣ್ ಸೋನಿಯನ್ನು ಬಂಧಿಸಲಾಗಿದೆ. ಇಬ್ಬರ ಮೇಲೂ, ಭಾರತೀಯ ನ್ಯಾಯ ಸಂಹಿತಾ (ಕಲಬೆರಕೆ ಔಷಧಿಗಳ ಮಾರಾಟ) ಸೆಕ್ಷನ್ 276 ಮತ್ತು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾಯ್ದೆ, 1940 ರ ಸೆಕ್ಷನ್ 27A ಅಡಿಯಲ್ಲಿ ಕೇಸ್ ದಾಖಲಾಗಿದೆ.
ಡೈಥಿಲೀನ್ ಗ್ಲೈಕಾಲ್, ಎಥಿಲೀನ್ ಗ್ಲೈಕಾಲ್ ಏಕೆ ಡೇಂಜರ್?
ಡೈಥಿಲೀನ್ ಗ್ಲೈಕಾಲ್ ಮತ್ತು ಎಥಿಲೀನ್ ಗ್ಲೈಕಾಲ್ ಸಿರಪ್ ದ್ರವಗಳಾಗಿವೆ. ಇವುಗಳನ್ನು ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ, ಆದರೆ ಸೇವನೆಗೆ ಸೂಕ್ತವಲ್ಲ. ಅದರಲ್ಲೂ ಮಕ್ಕಳಿಗೆ ಅಪಾಯಕಾರಿ. ದೇಹದಲ್ಲಿ, ಇವು ಚಯಾಪಚಯ ಆಮ್ಲವ್ಯಾಧಿಯನ್ನು ಪ್ರಚೋದಿಸಬಹುದು ಮತ್ತು ತ್ವರಿತ ಮೂತ್ರಪಿಂಡ ಮತ್ತು ಯಕೃತ್ತಿನ ವೈಫಲ್ಯ, ನರವೈಜ್ಞಾನಿಕ ಹಾನಿ ಮತ್ತು ಸಾವಿಗೆ ಕಾರಣವಾಗಬಹುದು. ಈ ಔಷಧಿ ಮಕ್ಕಳಿಗೆ ವಿಶೇಷವಾಗಿ ದುರ್ಬಲವಾಗಿದ್ದು, ಸ್ವಲ್ಪ ಪ್ರಮಾಣದ ಸೇವನೆ ಕೂಡ ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು.
ಛಿಂದ್ವಾರಾ ದುರಂತದ ಬಳಿಕ ಮಧ್ಯಪ್ರದೇಶವು ಕೋಲ್ಡ್ರಿಫ್ ಮತ್ತು ಸ್ರೆಸನ್ ಫಾರ್ಮಾಸ್ಯುಟಿಕಲ್ಸ್‌ನ ಎಲ್ಲಾ ಉತ್ಪನ್ನಗಳ ಮೇಲೆ ಸಂಪೂರ್ಣ ನಿಷೇಧ ಹೇರಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ʼತಪ್ಪಿತಸ್ಥರನ್ನು ಬಿಡುವುದಿಲ್ಲʼ ಎಂದು ಘೋಷಿಸಿದ್ದಾರೆ. ಅಲ್ಲದೇ ಕೆಮ್ಮಿನ ಸಿರಪ್ ಸೇವನೆಯಿಂದ ಸಾವನ್ನಪ್ಪಿದ ಮಕ್ಕಳ ಕುಟುಂಬಗಳಿಗೆ ತಲಾ 4 ಲಕ್ಷ ರೂ.ಗಳ ಆರ್ಥಿಕ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.
ತಮಿಳುನಾಡಿನಲ್ಲಿ, ಪ್ರಯೋಗಾಲಯ ಪರೀಕ್ಷೆಗಳಲ್ಲಿ ಶೇಕಡಾ 48.6 ರಷ್ಟು ಡೈಥಿಲೀನ್ ಗ್ಲೈಕೋಲ್ ಪತ್ತೆಯಾದ ನಂತರ ರಾಜ್ಯ ಸರ್ಕಾರ ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ ಅದರ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಿದೆ. ಅಲ್ಲದೇ ತಯಾರಕರ ಪರವಾನಗಿಯನ್ನು ರದ್ದುಗೊಳಿಸಿದೆ, ಕ್ರಿಮಿನಲ್ ಮೊಕದ್ದಮೆ ಹೇರಿದೆ ಮತ್ತು ಔಷಧ ನಿಯಂತ್ರಣ ಇಲಾಖೆಯು ಸಿರಪ್ ಮಾರಾಟ ಅಥವಾ ಸೇವನೆಯ ವಿರುದ್ಧ ಸಾರ್ವಜನಿಕ ಸೂಚನೆಯನ್ನು ನೀಡಿದೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತವು ಮಾರಾಟವನ್ನು ಸ್ಥಗಿತಗೊಳಿಸಿದೆ ಮತ್ತು ಸಂಬಂಧಿತ ಬ್ಯಾಚ್‌ನ ದಾಸ್ತಾನನ್ನು ವಶಪಡಿಸಿಕೊಂಡಿದೆ, ಕೇರಳವು ಕೂಡ ವಿತರಣೆಯನ್ನು ಸ್ಥಗಿತಗೊಳಿಸಿದೆ.
ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶಗಳಲ್ಲಿ ಕಾಫ್ ಸಿರಪ್ ಕುಡಿದ ಮಕ್ಕಳು ಸಾವನ್ನಪ್ಪಿದ ಹಿನ್ನೆಲೆ ಸಣ್ಣ ಮಕ್ಕಳಿಗೆ ಕಾಫ್ ಸಿರಪ್ ಕೊಡದಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಇದರ ನಡುವೆ ಮಧ್ಯಪ್ರದೇಶ, ತಮಿಳುನಾಡು, ಕೇರಳ, ರಾಜಸ್ಥಾನ, ತೆಲಂಗಾಣದಲ್ಲಿ ಕೋಲ್ಡ್ರಿಫ್ ಸಿರಪ್ ಮಾರಾಟ ನಿಷೇಧ ಮಾಡಲಾಗಿದೆ. ಕೋಲ್ಡ್ರಿಫ್ ಕೆಮ್ಮಿನ ಸಿರಪ್‌ನಿಂದ ಸಾವುಗಳು ಸಂಭವಿಸುತ್ತಿರುವ ಪರಿಣಾಮ ಅದರ ಮಾರಾಟ, ವಿತರಣೆ ಮತ್ತು ಬಳಕೆಯನ್ನು ಪಂಜಾಬ್ ಸರ್ಕಾರ ನಿಷೇಧಿಸಿದೆ. ಅಲ್ಲದೇ ಮಕ್ಕಳ ಸರಣಿ ಸಾವಿನ ಬಳಿಕ ಕರ್ನಾಟಕದಲ್ಲಿಯೂ ಆರೋಗ್ಯ ಇಲಾಖೆ ಮಹತ್ವದ ಸಭೆ ನಡೆಸಿ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಮಾರ್ಗಸೂಚಿಯಲ್ಲಿ ಏನಿದೆ?
ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೆಮ್ಮು, ಶೀತದಂತಹ ಯಾವುದೇ ಸಿರಪ್ ನೀಡಬಾರದು 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಸರಿಯಾದ ವೈದ್ಯಕೀಯ ಪರೀಕ್ಷೆ ನಂತರ ತಜ್ಞ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕಡಿಮೆ ಅವಧಿಗೆ ಕನಿಷ್ಠ ಡೋಸ್ ಬಳಸಿ:
5 ವರ್ಷದ ಮಕ್ಕಳಿಗೂ ಕೆಮ್ಮಿನ ಸಿರಪ್ ಅನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಬಳಸತಕ್ಕದ್ದು. ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಡೋಸ್ ಬಳಸಿ. ಬಹು ಔಷಧಿಗಳ ಸಂಯೋಜನೆ ಇರುವ ಸಿರಪ್ ಉಪಯೋಗಿಸಬಾರದು ಎಂದು ಗೈಡ್ಲೈನ್ನಲ್ಲಿ ತಿಳಿಸಲಾಗಿದೆ.
ಮನೆ ಮದ್ದುಗಳ ಬಳಕೆ ಉತ್ತಮ:
ಸುರಕ್ಷಿತ ಮನೆಮದ್ದುಗಳ ಬಳಕೆ ಉತ್ತಮವಾಗಿದೆ. ಹೆಚ್ಚಿನ ಸಂದರ್ಭದಲ್ಲಿ ಮಕ್ಕಳಲ್ಲಿ ಕೆಮ್ಮು , ಶೀತ ಸೌಮ್ಯವಾಗಿರುತ್ತದೆ. ಸುರಕ್ಷಿತ ಕ್ರಮಗಳಿಂದ ನಿಧಾನವಾಗಿ ಉತ್ತಮಗೊಳ್ಳುತ್ತದೆ. ಪೋಷಕರು ಮಕ್ಕಳಿಗೆ ಸಾಕಷ್ಟು ದ್ರವ ಪದಾರ್ಥಗಳನ್ನು ನೀಡುವುದು. ಸಾಕಷ್ಟು ವಿಶ್ರಾಂತಿ, ನಿದ್ದೆ ಮಾಡಲು ಅವಕಾಶ ನೀಡುವುದು, ಪೌಷ್ಟಿಕ ಆಹಾರ ನೀಡುವುದು ಉತ್ತಮ.
ಹಳೆಯ ಸಿರಪ್ ಬಳಸಬೇಡಿ:
ಸ್ವಯಂ ಔಷಧೋಪಚರ ಮಾಡಬೇಡಿ. ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೇ ಕೆಮ್ಮಿನ ಸಿರಪ್ ಖರೀದಿಸಬೇಡಿ, ಬಳಸಲೂಬೇಡಿ. ಈ ಹಿಂದೆ ಬಳಸಿ ಉಳಿದ ಔಷಧಿಗಳನ್ನು , ಇತರರು ಶಿಫಾರಸು ಮಾಡಿದ ಔಷಧಿಗಳನ್ನು ಬಳಸಬೇಡಿ. ಯಾವುದೇ ಅಸಹಜ ಪ್ರಕ್ರಿಯೆ, ನಿದ್ರಾವಸ್ಥೆ, ವಾಂತಿ, ಉಸಿರಾಟದ ತೊಂದರೆ ಇದ್ದರೆ ತಕ್ಷಣ ಹತ್ತಿರದ ವೈದ್ಯರನ್ನು ಸಂಪರ್ಕಿಸಿ. ಯಾವಾಗಲೂ ಔಷಧಗಳ ಎಕ್ಸ್‌ಪರಿ ಡೇಟ್ ಖಚಿತಪಡಿಸಿಕೊಳ್ಳಿ.
ಮಕ್ಕಳಿಗೆ ಉಸಿರಾಟದ ತೊಂದರೆ, ನಿರಂತರ ಕೆಮ್ಮು, ಅತಿಯಾದ ಜ್ವರ, ಆಹಾರ ತಿರಸ್ಕಾರ, ನಿದ್ರಾವಸ್ಥೆ ಈ ಗುಣಲಕ್ಷಣಗಳು ಕಂಡು ಬಂದರೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದು ಉತ್ತಮ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ ಎರಡು ಕೆಮ್ಮಿನ ಸಿರಪ್‌ಗಳು ಅಸುರಕ್ಷಿತ ಎಂಬುದು ಆರೋಗ್ಯ ಇಲಾಖೆಯ ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ 14 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌ನ ಬ್ಯಾಚ್ SR-13ರಲ್ಲಿ ವಿಷಕಾರಿ ಅಂಶ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಮಾತ್ರವಲ್ಲದೇ ವೈದ್ಯರ ಸಲಹೆಯನ್ನು ಕಡ್ಡಾಯಗೊಳಿಸಿದೆ.