ನವದೆಹಲಿ: ಪಾಕಿಸ್ತಾನಕ್ಕೆ (Pakistan) ಯಾವುದೇ ಹೊಸ ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳನ್ನು (AMRAAMs) ನೀಡುವುದಿಲ್ಲ ಎಂದು ಅಮೆರಿಕ (USA) ಸ್ಪಷ್ಟಪಡಿಸಿದೆ.
ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹೆಚ್ಚಳವಾಗುತ್ತಿದ್ದಂತೆ ಪಾಕಿಸ್ತಾನಕ್ಕೆ AMRAAMs ಕ್ಷಿಪಣಿಯನ್ನು ಅಮೆರಿಕ ನೀಡಲಿದೆ ಎಂದು ವರದಿಯಾಗಿತ್ತು. ಈ ವರದಿ ಪ್ರಕಟವಾದ ಬೆನ್ನಲ್ಲೇ ಭಾರತದಲ್ಲಿರುವ ರಾಯಭಾರ ಕಚೇರಿ ಈಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಅಮೆರಿಕದ ನಿಲುವು ತಿಳಿಸಿದೆ.
ಪಾಕಿಸ್ತಾನವು ಅಮೆರಿಕದಿಂದ AIM-120 ಸುಧಾರಿತ ಮಧ್ಯಮ-ಶ್ರೇಣಿಯ ಏರ್-ಟು-ಏರ್ ಕ್ಷಿಪಣಿಗಳನ್ನು ಪಡೆಯುವ ಸಾಧ್ಯತೆಯಿದೆ. ಟ್ರಂಪ್ (Donald Trump) ಅವಧಿಯಲ್ಲಿ ಯುದ್ಧ ಇಲಾಖೆಯಾಗಿ ಬದಲಾಗಿರುವ ಅಮೆರಿಕದ ರಕ್ಷಣಾ ಇಲಾಖೆ ಕ್ಷಿಪಣಿ ಖರೀದಿಸುವ ಒಟ್ಟು 35 ದೇಶಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಈ ಪಟ್ಟಿಯಲ್ಲಿ ಪಾಕಿಸ್ತಾನದ ಹೆಸರಿದೆ ಎಂದು ವರದಿಯಲ್ಲಿ ಉಲ್ಲೇಖವಾಗಿತ್ತು.
ಅಮೆರಿಕ ರಾಯಭಾರ ಕಚೇರಿ ಪ್ರತಿಕ್ರಿಯಿಸಿ, ಈ ಒಪ್ಪಂದವು ಈಗಾಗಲೇ ಅಸ್ತಿತ್ವದಲ್ಲಿರುವ ವಿದೇಶಿ ಮಿಲಿಟರಿ ಮಾರಾಟ ಒಪ್ಪಂದಕ್ಕೆ ಮಾಡಲಾಗಿರುವ ತಿದ್ದುಪಡಿಯಾಗಿದೆ ಎಂದು ಹೇಳಿದೆ. ಇದನ್ನೂ ಓದಿ: ಭಯೋತ್ಪಾದಕ ಗುಂಪು ಜೆಇಎಂ ಮಹಿಳಾ ವಿಭಾಗ ಆರಂಭ – ‘ಆಪರೇಷನ್ ಸಿಂಧೂರ’ದಲ್ಲಿ ಗಂಡನ ಕಳೆದುಕೊಂಡ ಮಹಿಳೆಗೆ ಚುಕ್ಕಾಣಿ
ಸೆಪ್ಟೆಂಬರ್‌ನಲ್ಲಿ ಯುದ್ಧ ಇಲಾಖೆಯು ಪ್ರಮಾಣಿತ ಒಪ್ಪಂದ ಪ್ರಕಟಣೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದು ಪಾಕಿಸ್ತಾನ ಸೇರಿದಂತೆ ಹಲವಾರು ದೇಶಗಳಿಗೆ ಸುಸ್ಥಿರತೆ ಮತ್ತು ಬಿಡಿಭಾಗಗಳಿಗಾಗಿ ಅಸ್ತಿತ್ವದಲ್ಲಿರುವ ವಿದೇಶಿ ಮಿಲಿಟರಿ ಮಾರಾಟ ಒಪ್ಪಂದವನ್ನು ತಿಳಿಸುತ್ತದೆ. ಈ ಒಪ್ಪಂದದ ಅನ್ವಯ ಬಹು ರಾಷ್ಟ್ರಗಳಲ್ಲಿ ನವೀಕರಣಗಳು, ಬಿಡಿಭಾಗಗಳು ಮತ್ತು ನಿರ್ವಹಣೆಯನ್ನು ಮಾಡಲಾಗುತ್ತದೆ ಎಂದು ಹೇಳಿದೆ.
ಒಪ್ಪಂದದ ಅನ್ವಯ ಯುನೈಟೆಡ್ ಕಿಂಗ್‌ಡಮ್, ಪೋಲೆಂಡ್, ಪಾಕಿಸ್ತಾನ, ಜರ್ಮನಿ, ಫಿನ್‌ಲ್ಯಾಂಡ್, ಆಸ್ಟ್ರೇಲಿಯಾ, ರೊಮೇನಿಯಾ, ಕತಾರ್, ಓಮನ್, ಕೊರಿಯಾ, ಗ್ರೀಸ್, ಸ್ವಿಟ್ಜರ್‌ಲ್ಯಾಂಡ್, ಪೋರ್ಚುಗಲ್, ಸಿಂಗಾಪುರ, ನೆದರ್‌ಲ್ಯಾಂಡ್ಸ್, ಜೆಕ್ ರಿಪಬ್ಲಿಕ್, ಜಪಾನ್, ಸ್ಲೋವಾಕಿಯಾ, ಡೆನ್ಮಾರ್ಕ್, ಕೆನಡಾ, ಬೆಲ್ಜಿಯಂ, ಬಹ್ರೇನ್, ಸೌದಿ ಅರೇಬಿಯಾ, ಇಟಲಿ, ನಾರ್ವೆ, ಸ್ಪೇನ್, ಕುವೈತ್, ಫಿನ್‌ಲ್ಯಾಂಡ್, ಸ್ವೀಡನ್, ತೈವಾನ್, ಲಿಥುವೇನಿಯಾ, ಇಸ್ರೇಲ್, ಬಲ್ಗೇರಿಯಾ, ಹಂಗೇರಿ ಮತ್ತು ಟರ್ಕಿಗೆ ಶಸ್ತ್ರಾಸ್ತ್ರ ನೀಡಲು ಅನುಮತಿ ನೀಡುತ್ತದೆ. ಇದನ್ನೂ ಓದಿ: ಕಾಬೂಲ್ ಮೇಲೆ ಪಾಕ್ ಏರ್‌ಸ್ಟ್ರೈಕ್ – ಇಸ್ಲಾಮಾಬಾದ್, ರಾವಲ್ಪಿಂಡಿಯಲ್ಲಿ ಇಂಟರ್‌ನೆಟ್ ಬಂದ್
ಪಾಕ್ ಬಳಿಯಿದೆ ಎಫ್ 16:
ವಿಶ್ವ ವಾಣಿಜ್ಯ ಕೇಂದ್ರದ ಅವಳಿ ಕಟ್ಟಡ ಉರುಳಿದ ಬಳಿಕ ಅಮೆರಿಕ ಅಫ್ಘಾನಿಸ್ತಾನದಲ್ಲಿರುವ ತಾಲಿಬಾನ್ (Taliban) ಮೇಲೆ ಯುದ್ಧ ಸಾರಿತ್ತು. ಈ ಯುದ್ಧಕ್ಕೆ ಪಾಕಿಸ್ತಾನ ತನ್ನ ಭೂಮಿ, ಬಂದರು, ವಾಯು ನೆಲೆಗಳ ನೆರವು ನೀಡಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕ ಪಾಕಿಸ್ತಾನಕ್ಕೆ ಎಫ್ 16 ಯುದ್ಧ ವಿಮಾನಗಳನ್ನು ನೀಡಿದೆ. ಸದ್ಯ ಪಾಕ್ ಬಳಿ 75 ಎಫ್-16 ಯುದ್ಧ ವಿಮಾನ ಇರಬಹುದು ಎಂದು ಅಂದಾಜಿಸಲಾಗಿದೆ.
ಭಯೋತ್ಪಾದನೆ ನಿಗ್ರಹ ಮತ್ತು ಆಂತರಿಕ ರಕ್ಷಣೆಗೆ ಮಾತ್ರ ಈ ಯುದ್ಧ ವಿಮಾನಗಳನ್ನು ಬಳಸಬೇಕು ಎಂದು ಅಮೆರಿಕ ಪಾಕಿಗೆ ಷರತ್ತು ವಿಧಿಸಿದೆ. ಹೀಗಿದ್ದರೂ 2019 ರಲ್ಲಿ ಬಾಲಾಕೋಟ್ ಏರ್‌ಸ್ಟ್ರೈಕ್ ಮಾಡಿದ ಬಳಿಕ ಭಾರತದ ಮೇಲೆ ದಾಳಿ ನಡೆಸಲು ಪಾಕ್ ಎಫ್-16 ಯುದ್ಧ ವಿಮಾನಗಳನ್ನು ಬಳಸಿತ್ತು. ಹೀಗಿದ್ದರೂ ಅಭಿನಂದನ್ ವರ್ಧಮಾನ್ ಅವರು ಹಳೆಯ ಮಿಗ್ 21 ಬೈಸನ್ ವಿಮಾನದ ಮೂಲಕ ಆಕಾಶದಲ್ಲೇ ಕಾದಾಟ(ಡಾಗ್ ಫೈಟ್) ನಡೆಸಿ ಎಫ್ 16 ಯುದ್ಧ ವಿಮಾನವನ್ನು ಹೊಡೆದು ಹಾಕಿದ್ದರು. ಪಾಕ್ ಎಫ್ 16 ವಿಮಾನದ ಮೂಲಕ AMRAAM ಕ್ಷಿಪಣಿಯನ್ನು ಭಾರತದ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿತ್ತು. ಇದಕ್ಕೆ ಸಾಕ್ಷ್ಯವಾಗಿ ಭಾರತ ಪಾಕ್ ಬಳಸಿದ್ದ AMRAAM ಕ್ಷಿಪಣಿಯ ಬಿಡಿ ಭಾಗವನ್ನು ಪ್ರದರ್ಶಿಸಿತ್ತು.
ಆಪರಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತ ಪಾಕಿಸ್ತಾನದ 11 ವಾಯುನೆಲೆಗಳ ಮೇಲೆ ದಾಳಿ ನಡೆಸಿತ್ತು. ಇದರಲ್ಲಿ ಮುಖ್ಯವಾಗಿ ರಾವಲ್ಪಿಂಡಿ ಬಳಿಯ ನೂರ್ ಖಾನ್ ವಾಯುನೆಲೆಯ ಮೇಲೆ ದಾಳಿ ನಡೆಸಿತ್ತು. ಈ ವಾಯುನೆಲೆಯಲ್ಲಿ ಅಮೆರಿಕ ನಿರ್ಮಿತ ಎಫ್16 ಯುದ್ಧ ವಿಮಾನಗಳು ಇದ್ದವು. ದಾಳಿಯ ಸಂದರ್ಭದಲ್ಲಿ ಹಲವು ಎಫ್16 ಯುದ್ಧ ವಿಮಾನಗಳಿಗೆ ಹಾನಿಯಾಗಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲದೇ ಇದನ್ನು ಅಮೆರಿಕದ ಅನಧಿಕೃತ ವಾಯು ನೆಲೆ ಎಂದೇ ಕರೆಯಲಾಗುತ್ತದೆ. ಈಗ ತನ್ನ ಎಫ್ 16 ವಿಮಾನಗಳ ರಕ್ಷಣೆಗೆ ಅಮೆರಿಕ AMRAAM ಕ್ಷಿಪಣಿಯನ್ನು ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.