ಮಂಗಳೂರು: ತುಳುನಾಡಿನಲ್ಲಿ ದೈವಾರಾಧಕರು ಹಾಗೂ ಕಾಂತಾರ ಚಾಪ್ಟರ್ 1 ಸಿನಿಮಾದ (Kantara Chapter 1) ನಡುವಿನ ಫೈಟ್ ತಾರಕಕ್ಕೇರಿದೆ. ಇದೀಗ ಕಾಂತಾರ ಚಾಪ್ಟರ್ 1 ಸಿನಿಮಾದಲ್ಲಿ ದೈವಾರಾಧನೆ (Daivaradhane) ಬಳಕೆ ವಿರುದ್ಧ ಸಿಡಿದೆದ್ದ ದೈವಾರಾಧಕರು ದೈವಸ್ಥಾನದ ಮೆಟ್ಟಿಲೇರಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ.
ಮಂಗಳೂರಿನ (Mangaluru) ಬಜಪೆ ಸಮೀಪ ಪೆರಾರ ಬ್ರಹ್ಮ ಬಲವಂಡಿ, ಪಿಲಿಚಂಡಿ ದೈವಸ್ಥಾನದಲ್ಲಿ ದೈವನರ್ತಕರು ಹಾಗೂ ದೈವಾರಾಧಕರು ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಕಾಂತಾರ ಚಾಪ್ಟರ್ 1 ಸಿನಿಮಾ ಹಾಗೂ ದೈವಾರಾಧನೆಯ ಅಪಹಾಸ್ಯದ ವಿರುದ್ಧ ದೈವಸ್ಥಾನದ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!
ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ, ಗುಳಿಗ, ಪಿಲಿ ದೈವದ ಆವೇಶ ಸೇರಿದಂತೆ ದೈವ ನರ್ತನದ ಬಳಕೆ ಮಾಡಲಾಗಿತ್ತು. ಸಿನಿಮಾ ಬಿಡುಗಡೆ ಬೆನ್ನಲ್ಲೇ ಥಿಯೇಟರ್ ಸೇರಿದಂತೆ ಅನೇಕ ಕಡೆ ಹಲವರು ದೈವಾರಾಧನೆಯ ಅನುಕರಣೆ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಯೂ ಜೋರಾಗಿದೆ.
ಇನ್ನು ಕೆಲವರು ಮೈಮೇಲೆ ದೈವ ಬಂದ ರೀತಿಯಲ್ಲಿ ವಿಕೃತಿ ಮೆರೆದಿದ್ದರು. ಇದೆಲ್ಲವನ್ನು ಖಂಡಿಸಿ ದೈವಾರಾಧಕರು ಇಂದು ದೈವಕ್ಷೇತ್ರದಲ್ಲೇ ಕಾಂತಾರ ಸಿನಿಮಾ ಮತ್ತು ದೈವಾರಾಧನೆಯ ಅಪಹಾಸ್ಯ ಮಾಡುವವರ ವಿರುದ್ಧ ಸಾಮೂಹಿಕ ಪ್ರಾರ್ಥನೆ ಮಾಡಿದ್ದಾರೆ.