ರಿಷಬ್ ಶೆಟ್ಟಿ (Rishab Shetty) ನಟಿಸಿ ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 (Kantara Chapter 1) ಸಿನಿಮಾ ವಿಶ್ವದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಾಲು ಸಾಲು ರಜೆ ಇರೋ ಕಾರಣ ಕಾಂತಾರ ಸಿನಿಮಾ ಹೌಸ್‌ಫುಲ್ ಆಗುತ್ತಿದೆ ಎನ್ನುವ ಭ್ರಮೆಯಲ್ಲಿದ್ದವರು ಸೋಮವಾರದ ನಂತರ ನೋಡಿ ಹಾಗಾಗುತ್ತೆ, ಹೀಗಾಗುತ್ತೆ ಅನ್ನೋ ಲೆಕ್ಕಾಚಾರ ಹಾಕುತ್ತಿದ್ದರು. ಅಂತವರ ಲೆಕ್ಕಾಚಾರವನ್ನೇ ಲೆಕ್ಕಕ್ಕಿಲ್ಲದಂತೆ ಮಾಡಿದ ಕಾಂತಾರ ಹೌಸ್‌ಫುಲ್ ಪ್ರದರ್ಶನ ವಿಷಯವನ್ನ ತುಂಬಾನೇ ವಿಭಿನ್ನವಾಗಿ ಹೇಳಿದ್ದಾರೆ ನಟ ಹಾಗೂ ನಿರ್ದೇಶಕ ದುನಿಯಾ ವಿಜಯ್.
`ಸೋಮವಾರದ್ ಮೇಲ್ ನೋಡ್ರೀ.. ಹೆಂಗ್ ಬಿದ್ದೋಗುತ್ತೆ ಅಂದೋರಿಗೆ.. ವರ್ಷಪೂರ್ತಿ ನೋಡ್ತಾಯಿರಿ.. ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ.. ಎಂದು ಸಾರಿ.. ಮತ್ತೆ ಇಡೀ ದೇಶವೇ ಹೆಮ್ಮೆ ಪಡುವಂತಹ ಸಿನಿಮಾ ಕೊಟ್ಟ ರಿಷಬ್ ಶೆಟ್ಟಿಯವರಿಗೆ ಅಭಿನಂದನೆಗಳು’ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಟ ದುನಿಯಾ ವಿಜಯ್ ಬರೆದುಕೊಂಡಿದ್ದಾರೆ. ಈ ಮೂಲಕ ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಿರ್ಮಾಣ ಸಂಸ್ಥೆ ಹೊಂಬಾಳೆಯವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ದುನಿಯ ವಿಜಯ್ ಪೋಸ್ಟ್‌ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯಿಸಿ ಧನ್ಯವಾದಗಳು ಎಂದಿದ್ದಾರೆ.
ಸೋಮವಾರದ್ ಮೇಲ್ ನೋಡ್ರೀ… ಹೆಂಗ್ ಬಿದ್ದೋಗುತ್ತೆ ಅಂದೋರಿಗೆ..
ವರ್ಷಪೂರ್ತಿ ನೋಡ್ತಾಯಿರಿ.. ನಿಮಗ್ ಕತ್ ನೋವುತ್ತೇ ಹೊರತು ಬಿದ್ದೋಗಲ್ಲ… ಎಂದು ಸಾರಿ.. ಮತ್ತೆ ಇಡೀ ದೇಶ ಹೆಮ್ಮ ಪಡುವಂತಹ ಯಶಸ್ವಿ ಚಿತ್ರ ಕೊಟ್ಟ ರಿಷಬ್ ಶೆಟ್ಟಿಯವರಿಗೆ ಅಭಿನಂದನೆಗಳು…@shetty_rishab @hombalefilms
— Duniya Vijay (@OfficialViji) October 6, 2025
ವಿಭಿನ್ನ ರೀತಿಯ ಹಾಗೂ ಹೊಸ ಬಗೆಯ ಸಿನಿಮಾಗಳು ಬಂದಾಗ ಕನ್ನಡಿಗರು ಮಾತ್ರವಲ್ಲ ಇಡೀ ದೇಶವೇ ಕೊಂಡಾಡುತ್ತೆ ಅನ್ನೋದು ಮತ್ತೊಮ್ಮೆ ಪ್ರೂವ್ ಆಗಿದೆ. ಕಾಂತಾರದಂತೆ ಕಾಂತಾರ ಚಾಪ್ಟರ್-1 ಸಿನಿಮಾ ವಿಶ್ವವ್ಯಾಪಿ ತನ್ನ ಯಶಸ್ಸಿನ ಬಳ್ಳಿಯನ್ನ ಚಾಚಿದೆ. ಸಿನಿಮಾ ಅಭಿಮಾನಿಗಳು, ಪ್ರೇಕ್ಷಕರು, ಸೆಲೆಬ್ರಿಟಿಗಳು ಸಿನಿಮಾವನ್ನ ನೋಡಿ ಮೆಚ್ಚಿಕೊಂಡು ತಮ್ಮ ಅಭಿಪ್ರಾಯವನ್ನ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.