ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಡಾರ್ಜಿಲಿಂಗ್‌ನಲ್ಲಿ (Darjeeling) ಸುರಿಯುತ್ತಿರುವ ರಣಭೀಕರ ಮಳೆಗೆ ಹಲವೆಡೆ ಭೂಕುಸಿತ “(Landslide) ಉಂಟಾಗಿದ್ದು, ಸಾವಿನ ಸಂಖ್ಯೆ 23ಕ್ಕೆ ಏರಿಕೆಯಾಗಿದೆ.
ಭಾನುವಾರ (ಸೆ.6) ಸುರಿದ ಭಾರೀ ಮಳೆಯಿಂದಾಗಿ ಭೂಕುಸಿತ ಸಂಭವಿಸಿ, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. 23 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಸರ್ಸಾಲಿ, ಜಸ್ಬೀರ್‌ಗಾಂವ್, ನಾಗರಕಟಾ, ಮಿರಿಕ್ ಬಸ್ತಿ, ಧಾರ್‌ಗಾವ್ (ಮೆಚಿ), ಮತ್ತು ಮಿರಿಕ್ ಲೇಕ್ ಪ್ರದೇಶ ಸೇರಿದಂತೆ ಹಲವೆಡೆ ಜನ ಪ್ರಾಣಕಳೆದುಕೊಂಡಿದ್ದಾರೆ.ಇದನ್ನೂ ಓದಿ: Darjeeling Flood | 24/7 ಕಂಟ್ರೋಲ್ ರೂಮ್ ಓಪನ್ – ನಾಳೆ ಡಾರ್ಜಿಲಿಂಗ್‌ಗೆ ದೀದಿ ಭೇಟಿ
ಕೇವಲ 12 ಗಂಟೆಯಲ್ಲಿ 300 ಮಿ.ಮೀ ಮಳೆಯಾಗಿದ್ದರಿಂದ ಪ್ರವಾಹ, ಭೂಕುಸಿತ ಉಂಟಾಗಿದೆ ಎನ್ನಲಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ರಕ್ಷಣಾ ಕಾರ್ಯಚರಣೆ ನಡೆಸುತ್ತಿವೆ. ನಾಗರಕಟಾದ ಧಾರ್‌ಗಾವ್‌ನಲ್ಲಿ ಭೂಕುಸಿತದಿಂದಾಗಿ ನೆಲಸಮವಾದ ಮನೆಗಳ ಅವಶೇಷಗಳಡಿಯಿಂದ ಕನಿಷ್ಠ 40 ಜನರನ್ನು ರಕ್ಷಿಸಲಾಗಿದೆ.
ಇನ್ನೂ ಬಂಗಾಳ-ಸಿಕ್ಕಿಂ ಡಾರ್ಜಿಲಿಂಗ್-ಸಿಲಿಗುರಿ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಸಂಭವಿಸಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಹಿತಕರ ಘಟನೆಗಳನ್ನು ತಡೆಗಟ್ಟುವ ಸಲುವಾಗಿ, ಗೂರ್ಖಾಲ್ಯಾಂಡ್ ಪ್ರಾದೇಶಿಕ ಆಡಳಿತವು ಡಾರ್ಜಿಲಿಂಗ್‌ನ ಟೈಗರ್‌ಹಿಲ್ ಮತ್ತು ರಾಕ್ ಗಾರ್ಡನ್ ಸೇರಿದಂತೆ ಪ್ರವಾಸಿ ತಾಣಗಳನ್ನು ಮುಚ್ಚಲು ನಿರ್ಧರಿಸಿದೆ. ಜೊತೆಗೆ ರೈಲು ಸೇವೆಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಸೋಮವಾರದವರೆಗೂ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ರೆಡ್ ಅಲರ್ಟ್ ಘೋಷಿಸಿದೆ. ಸ್ಥಳೀಯರು ಮತ್ತು ಪ್ರವಾಸಿಗರಿಗಾಗಿ 9147889078 ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಲಾಗಿದೆ.
ಸಾರ್ವಜನಿಕರ ಸಹಾಯಕ್ಕಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ 24/7 ಕಂಟ್ರೋಲ್ ರೂಮ್ ತೆರೆದಿದ್ದಾರೆ. ಈಗಾಗಲೇ ಪರಿಸ್ಥಿತಿಯನ್ನು ಕಂಟ್ರೋಲ್ ರೂಮ್ ಮೂಲಕ ಮೇಲ್ವಿಚಾರಣೆ ಮಾಡುತ್ತಿದ್ದು, ಇಂದು (ಅ.6) ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.
ಸಿಕ್ಕಿಂ ಸಂಪರ್ಕ ಕಡಿತ:
ಡಾರ್ಜಿಲಿಂಗ್‌ನಲ್ಲಿ ಸಂಭವಿಸಿದ ಈ ವಿಪತ್ತು ಹಿಮಾಲಯ ರಾಜ್ಯವಾದ ಸಿಕ್ಕಿಂ ಜೊತೆಗಿನ ಸಂಪರ್ಕ ಕಡಿತಗೊಳಿಸಿದೆ. ಮಿರಿಕ್ ಮತ್ತು ಸುಖಿಯಾ ಪೋಖಾರಿಯಂತಹ ಪ್ರದೇಶಗಳಲ್ಲಿ ಭೂಕುಸಿತ ಉಂಟಾಗಿದ್ದು, ಪೊಲೀಸರು ಮತ್ತು ಸ್ಥಳೀಯ ಆಡಳಿತವು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬಂಗಾಳ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸುವ ರಸ್ತೆ, ಡಾರ್ಜಿಲಿಂಗ್ ಮತ್ತು ಸಿಲಿಗುರಿಯನ್ನು ಸಂಪರ್ಕಿಸುವ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಭೂಕುಸಿತಗಳು ರಸ್ತೆ ತಡೆಗಳಿಗೆ ಕಾರಣವಾಗಿವೆ. ದುರ್ಗಾ ಪೂಜೆಯ ನಂತರ ಕೋಲ್ಕತ್ತಾ ಮತ್ತು ಬಂಗಾಳದ ಇತರ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಾರ್ಜಿಲಿಂಗ್‌ಗೆ ಪ್ರಯಾಣಿಸುತ್ತಾರೆ. ಈ ವಿಪತ್ತಿನಲ್ಲಿ ಅನೇಕ ಪ್ರವಾಸಿಗರು ಸಿಲುಕಿಕೊಳ್ಳುವ ಸಾಧ್ಯತೆಯಿದೆ.ಇದನ್ನೂ ಓದಿ: ಜೈಪುರ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಅವಘಡ – 6 ರೋಗಿಗಳು ಸಜೀವ ದಹನ