ಭೋಪಾಲ್: ಮಧ್ಯಪ್ರದೇಶದ (Madhya Pradesh) ಛಿಂದ್ವಾರಾದಲ್ಲಿ ಮಕ್ಕಳಿಗೆ ಕೋಲ್ಡ್ರಿಫ್ ಸಿರಪ್ (Coldrif Syrup) ಶಿಫಾರಸು ಮಾಡಿದ ವೈದ್ಯನನ್ನು ಬಂಧಿಸಲಾಗಿದೆ.
ಕಲುಷಿತ ಕೆಮ್ಮಿನ ಸಿರಪ್ ಸೇವಿಸಿದ 11 ಮಕ್ಕಳ ಸಾವಿಗೆ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಹೆಚ್ಚಿನ ಮಕ್ಕಳಿಗೆ ಪರಾಸಿಯಾದ ಮಕ್ಕಳ ತಜ್ಞ ಡಾ. ಪ್ರವೀಣ್ ಸೋನಿ ಅವರ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್ – ಕೇಂದ್ರ ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ
ಮಧ್ಯಪ್ರದೇಶ ಸರ್ಕಾರವು ಕೋಲ್ಡ್ರಿಫ್ ಕೆಮ್ಮಿನ ಸಿರಪ್ ತಯಾರಿಸಿದ ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿರುವ ಶ್ರೀಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ವಿರುದ್ಧವೂ ಪ್ರಕರಣ ದಾಖಲಿಸಿದೆ. ಸರ್ಕಾರವು ಈ ಹಿಂದೆ ಕೋಲ್ಡ್ರಿಫ್ ಮಾರಾಟವನ್ನು ನಿಷೇಧಿಸಿತ್ತು. ಔಷಧದ ಮಾದರಿಗಳಲ್ಲಿ 48.6% ಡೈಥಿಲೀನ್ ಗ್ಲೈಕೋಲ್ ಇದೆ. ಇದು ಅತ್ಯಂತ ವಿಷಕಾರಿ ವಸ್ತುವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಚೆನ್ನೈನ ಔಷಧ ಪರೀಕ್ಷಾ ಪ್ರಯೋಗಾಲಯದಲ್ಲಿ ಸರ್ಕಾರಿ ಔಷಧ ವಿಶ್ಲೇಷಕರು ಪರೀಕ್ಷಿಸಿದ ಸಿರಪ್‌ನ ಮಾದರಿಯನ್ನು ತಮಿಳುನಾಡು ಔಷಧ ನಿಯಂತ್ರಣ ನಿರ್ದೇಶನಾಲಯವು ಪ್ರಮಾಣಿತ ಗುಣಮಟ್ಟದಲ್ಲಿಲ್ಲ ಎಂದು ಘೋಷಿಸಿತು.
ಮುನ್ನೆಚ್ಚರಿಕೆ ಕ್ರಮವಾಗಿ, ಸ್ಥಳೀಯ ಆಡಳಿತವು ಸೋಮವಾರ ಕೋಲ್ಡ್ರಿಫ್ ಮತ್ತು ಇನ್ನೊಂದು ಕೆಮ್ಮಿನ ಸಿರಪ್ ‘ನೆಕ್ಟ್ರೋ-ಡಿಎಸ್’ ಮಾರಾಟವನ್ನು ನಿಷೇಧಿಸಿತು. ಕೋಲ್ಡ್ರಿಫ್‌ನ ಪರೀಕ್ಷಾ ವರದಿ ಶನಿವಾರ ಬಂದಿದ್ದು, ನೆಕ್ಸ್ಟ್ರಾ-ಡಿಎಸ್‌ನ ವರದಿಗಾಗಿ ಕಾಯಲಾಗಿದೆ. ಇದನ್ನೂ ಓದಿ: ಕೆಮ್ಮಿನ ಸಿರಪ್ ಸೇವನೆ – 15 ದಿನಗಳ ಅಂತರದಲ್ಲಿ ಕಿಡ್ನಿ ವೈಫಲ್ಯದಿಂದ 6 ಮಕ್ಕಳು ಸಾವು
ಮಕ್ಕಳು ಶೀತ, ಜ್ವರದ ಲಕ್ಷಣಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಕೆಮ್ಮಿನ ಸಿರಪ್‌ಗಳು ಸೇರಿದಂತೆ ನಿಯಮಿತ ಔಷಧಿಗಳನ್ನು ಶಿಫಾರಸು ಮಾಡಲಾಗಿತ್ತು. ಅದನ್ನು ಸೇವಿಸಿ ಮಕ್ಕಳು ಆರಂಭದಲ್ಲಿ ಚೇತರಿಕೆ ಕಂಡಿದ್ದವು. ಆದರೆ, ಕೆಲವೇ ದಿನಗಳಲ್ಲಿ ಮತ್ತೆ ಲಕ್ಷಣಗಳು ಮರಳಿವೆ. ಮೂತ್ರ ವಿಸರ್ಜನೆ ಸರಿಯಾಗಿ ಆಗದೇ ಆರೋಗ್ಯ ಸ್ಥಿತಿಯು ಹದಗೆಟ್ಟಿದೆ. ಮೂತ್ರಪಿಂಡದಲ್ಲಿ ಸೋಂಕು ಕಾಣಿಸಿಕೊಂಡು ಕೊನೆಗೆ ಅನೇಕ ಮಕ್ಕಳು ಸಾವನ್ನಪ್ಪಿವೆ. ಈ ಬಗ್ಗೆ ಮಕ್ಕಳನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳು ಹೇಳಿಕೊಂಡಿವೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು, ಈ ಸಾವುಗಳು ಅತ್ಯಂತ ದುರಂತ ಎಂದು ವಿಷಾದಿಸಿದ್ದಾರೆ. ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.