ಮುಂಬೈ: ಇದೇ ಅಕ್ಟೋಬರ್ 19ರಿಂದ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ 5 ಪಂದ್ಯಗಳ ಟಿ20 ಸರಣಿಗೆ ಬಿಸಿಸಿಐ ಟೀಂ ಇಂಡಿಯಾದ ಬಲಿಷ್ಠ ತಂಡವನ್ನ ಪ್ರಕಟಿಸಿದೆ.
ಟಿ20 ಸರಣಿಗೆ ನಿರೀಕ್ಷೆಯಂತೆ ಸೂರ್ಯಕುಮಾರ್ ಯಾದವ್ ನಾಯಕನಾಗಿದ್ದಾರೆ. ಆದ್ರೆ ರೋಹಿತ್, ಕೊಹ್ಲಿ ತಂಡದಲ್ಲಿದ್ದರೂ ಏಕದಿನ ಕ್ರಿಕೆಟ್ಗೆ ನೂತನ ನಾಯಕನಾಗಿ ಶುಭಮನ್ ಗಿಲ್ ಅವರನ್ನ ಆಯ್ಕೆ ಮಾಡಿದೆ. ಹೀಗಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರ ನಿವೃತ್ತಿಯ ವಿಷಯ ಮತ್ತೆ ಮುನ್ನೆಲೆಗೆ ಬಂದಿದೆ.
🚨 India’s squad for Tour of Australia announced
Shubman Gill named #TeamIndia Captain for ODIs
The #AUSvIND bilateral series comprises three ODIs and five T20Is against Australia in October-November pic.twitter.com/l3I2LA1dBJ
— BCCI (@BCCI) October 4, 2025
ಸರಣಿ ಬಳಿಕ ನಿವೃತ್ತಿ ಹೇಳ್ತಾರಾ ರೊ-ಕೊ?
ಈಗಾಗಲೇ ಟೆಸ್ಟ್ ಹಾಗೂ ಟಿ20 ಕ್ರಿಕೆಟ್ಗೆ (T20 Cricket) ನಿವೃತ್ತಿ ಘೋಷಿಸಿರುವ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಇದೀಗ ಏಕದಿನ ಕ್ರಿಕೆಟ್ ವೃತ್ತಿ ಜೀವನಕ್ಕೂ ತೆರೆ ಎಳೆಯುವ ಸನಿಹದಲ್ಲಿದ್ದಾರೆ. ಮೂಲಗಳ ಹೇಳುವಂತೆ, 2027ರ ಏಕದಿನ ವಿಶ್ವಕಪ್ ತಂಡದಲ್ಲಿ ಈ ಜೋಡಿ ಸ್ಥಾನ ಪಡೆಯುವುದು ಖಚಿತವಿಲ್ಲ. ಏಕೆಂದ್ರೆ ಈಗಾಗಲೇ ಇಬ್ಬರೂ ದಿಗ್ಗಜರು ಟೆಸ್ಟ್ ಹಾಗೂ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಕಾರಣ ಮುಂಬರುವ ವರ್ಷಗಳಲ್ಲಿ ಪಂದ್ಯದ ಸಮಯವೂ ಸೀಮಿತವಾಗಿರಲಿದೆ. ಹೀಗಾಗಿ ಭಾರತೀಯ ಕ್ರಿಕೆಟ್ (Indian Cricket) ನಿಯಂತ್ರಣ ಮಂಡಳಿ ಕೂಡ ಇವರಿಬ್ಬರ ಆಯ್ಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ. ಈ ಅಕ್ಟೋಬರ್ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ಅತ್ಯಂತ ನಿರ್ಣಾಯಕವಾಗಿದೆ.
ರೋಹಿತ್ ಮತ್ತು ಕೊಹ್ಲಿ 2027ರ ಏಕದಿನ ವಿಶ್ವಕಪ್ (World Cup 2027) ರೇಸ್ನಲ್ಲಿ ಉಳಿಯಬೇಕಾದ್ರೆ ಈ ವರ್ಷ ಡಿಸೆಂಬರ್ನಲ್ಲಿ ಶುರುವಾಗಲಿರುವ ದೇಸಿ ಕ್ರಿಕೆಟ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಬೇಕಾಗುತ್ತೆ. ಇಲ್ಲದಿದ್ದರೆ, ಬಹುತೇಕ ಏಕದಿನ ಕ್ರಿಕೆಟ್ನಿಂದಲೂ ಔಟ್ ಆಗಲಿದ್ದಾರೆ. ಇದಕ್ಕೆ ವಯಸ್ಸಿನ ಮಿತಿಯೂ ಒಂದು ಕಾರಣವಾಗಿರಲಿದೆ.
ಅಯ್ಯರ್ ಕಂಬ್ಯಾಕ್
ಇನ್ನೂ ಏಷ್ಯಾಕಪ್ ಟೂರ್ನಿಯಿಂದ ಕಡೆಗಣಿಸಲ್ಪಟ್ಟಿದ್ದ ಶ್ರೇಯಸ್ ಅಯ್ಯರ್ಗೆ ಮುಂಬರುವ ಟೂರ್ನಿಗಳನ್ನ ಗಮನದಲ್ಲಿಟ್ಟಿಕೊಂಡು ಉಪನಾಯಕನ ಸ್ಥಾನ ನೀಡಲಾಗಿದೆ. ಚಾಂಪಿಯನ್ಸ್ ಟ್ರೋಫಿ ಟೂರ್ನಿ ಬಳಿಕ ಏಕದಿನ ಕ್ರಿಕೆಟ್ಗೆ ಕನ್ನಡಿಗ ಕೆ.ಎಲ್ ರಾಹುಲ್ ಕೂಡ ಕಂಬ್ಯಾಕ್ ಮಾಡಿದ್ದಾರೆ. ಇದರೊಂದಿಗೆ ಇದೇ ಮೊದಲಬಾರಿಗೆ ಏಕದಿನ ಕ್ರಿಕೆಟ್ಗೆ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಪದಾರ್ಪಣೆ ಮಾಡಲಿದ್ದಾರೆ. ಆದ್ರೆ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರನ್ನು ಏಕದಿನ ತಂಡದಿಂದ ಕೈಬಿಟ್ಟು, ಟಿ20 ತಂಡಕ್ಕೆ ಮಾತ್ರ ಆಯ್ಕೆ ಮಾಡಿರೋದು ಅಚ್ಚರಿ ಮೂಡಿಸಿದೆ. ಅಲ್ಲದೇ ಧ್ರುವ್ ಜುರೆಲ್, ನಿತೀಶ್ ಕುಮಾರ್ ರೆಡ್ಡಿ ಹೊಸ ಮುಖಗಳಿಗೆ ಬಿಸಿಸಿಐ ಮಣೆ ಹಾಕಿದೆ.
ಭಾರತ ಏಕದಿನ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ಉಪನಾಯಕ), ಅಕ್ಷರ್ ಪಟೇಲ್, ಕೆ.ಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್ದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ, ಧ್ರುವ್ ಜುರೆಲ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್.
ಭಾರತ ಟಿ20 ತಂಡ
ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಶುಭಮನ್ ಗಿಲ್ (ಉಪನಾಯಕ), ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ, ಅರ್ಷ್ದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್.
ಅ.19ರಿಂದ ನವೆಂಬರ್ 8ರ ವರೆಗೆ ಮೂರು ಏಕದಿನ ಪಂದ್ಯಗಳು ಹಾಗೂ 5 ಟಿ20 ಪಂದ್ಯಗಳ ಸರಣಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇದಕ್ಕಾಗಿ ಭಾರತ ತಂಡ ಶೀಘ್ರವೇ ಆಸ್ಟ್ರೇಲಿಯಾಕ್ಕೆ ಪ್ರವಾಸ ತೆರಳಲಿದ್ದು, ಅಭ್ಯಾಸ ಆರಂಭಿಸಲಿದೆ.
ಗಿಲ್ ಮೇಲೆ ಹೆಚ್ಚಿದ ಭರವಸೆ
ಕೆಲ ದಿನಗಳ ಹಿಂದೆ ಇಂಗ್ಲೆಂಡ್ನಲ್ಲಿ ನಡೆದ ʻಆಂಡರ್ಸನ್-ತೆಂಡೂಲ್ಕರ್ʼ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾದ ಯುವ ನಾಯಕನಾಗಿದ್ದ ಗಿಲ್ ಅವರ ಯಶಸ್ಸು ಆಯ್ಕೆ ಸಮಿತಿಗೆ ನಂಬಿಕೆ ತಂದುಕೊಟ್ಟಿದೆ. ಹೀಗಾಗಿ 2027ರ ವಿಶ್ವಕಪ್ಗೆ ಹೊಸ ಪ್ರತಿಭೆಗಳೊಂದಿಗೆ ಮುನ್ನಡೆಯಲು ಬಿಸಿಸಿಐ ನಿರ್ಧರಿಸಿದ್ದು, ಶುಭಮನ್ ಗಿಲ್ ಅವರನ್ನೇ ಟೀಂ ಇಂಡಿಯಾದ ದೀರ್ಘಾವಧಿ ನಾಯಕನ್ನಾಗಿ ಆಯ್ಕೆ ಮಾಡಲು ನಿರ್ಧರಿಸಿದೆ. ಆದ್ದರಿಂದ ರೋಹಿತ್, ಕೊಹ್ಲಿ ಅಂತಹ ದಿಗ್ಗಜರು ಇರುವಾಗಲೇ ಗಿಲ್ಗೆ ನಾಯಕನ ಹೊಣೆ ನೀಡಲಾಗಿದೆ.