ನವದೆಹಲಿ: ದೇಶದ ಜನತೆಗೆ Next Gen GST ಕೊಡುಗೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಇದೀಗ ಕರ್ನಾಟಕ (Karnataka) ಸೇರಿದಂತೆ ಎಲ್ಲಾ ರಾಜ್ಯಗಳಿಗೂ ದಸರಾ-ದೀಪಾವಳಿ ಹಬ್ಬದ ವೇಳೆ ಹೆಚ್ಚುವರಿ ತೆರಿಗೆ ಹಂಚಿಕೆಯ (Tax Devolution) ಉಡುಗೊರೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಆಶಯದಂತೆ ಕರ್ನಾಟಕ ಸೇರಿದಂತೆ ಎಲ್ಲಾ 28 ರಾಜ್ಯ ಸರ್ಕಾರಗಳಿಗೂ ಕೇಂದ್ರ ಹಣಕಾಸು ಸಚಿವಾಲಯ ಒಟ್ಟಾರೆ 1,01,603 ಕೋಟಿ ರೂ. ಹೆಚ್ಚುವರಿ ತೆರಿಗೆ ಹಂಚಿಕೆ ಹಣವನ್ನು ಬಿಡುಗಡೆ ಮಾಡಿದೆ. ದಸರಾ-ದೀಪಾವಳಿ ಹಬ್ಬಗಳ ಋತುವಿನಲ್ಲಿ ಕೇಂದ್ರ ಸರ್ಕಾರ ಮಹತ್ತರ ನಿರ್ಣಯ ಕೈಗೊಂಡು ಎಲ್ಲಾ ರಾಜ್ಯಗಳಿಗೂ ನೆರವಾಗುವಂತೆ ತೆರಿಗೆ ಹಂಚಿಕೆಯ ಒಂದು ಮುಂಗಡ ಕಂತು ಬಿಡುಗಡೆ ಮಾಡಿದೆ. ಇದರಲ್ಲಿ ಕರ್ನಾಟಕಕ್ಕೆ 3705 ಕೋಟಿ ರೂ. ಹೆಚ್ಚುವರಿ ತೆರಿಗೆ ಪಾಲನ್ನು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ತೆರಿಗೆ ಪಾಲು| ಕರ್ನಾಟಕಕ್ಕೆ 3,705 ಕೋಟಿ, ಬಿಹಾರಕ್ಕೆ ಬಂಪರ್- ಯಾವ ರಾಜ್ಯಕ್ಕೆ ಎಷ್ಟು?
The Central Government, under the leadership of Hon’ble PM Shri @narendramodi ji, has released an advance tax devolution of ₹1,01,603 crores to States, of which Karnataka will receive ₹3,705 crores.
This will help accelerate growth, strengthen welfare measures and spread… pic.twitter.com/qFaU8hEAmL
— Pralhad Joshi (@JoshiPralhad) October 1, 2025
ಸಮರ್ಪಕವಾಗಿ ರಾಜ್ಯಗಳು ಬಳಸಿಕೊಳ್ಳಲಿ: ರಾಜ್ಯಗಳ ಬಂಡವಾಳ ವೆಚ್ಚವನ್ನು ವೇಗಗೊಳಿಸಲು ಹಾಗೂ ಅಭಿವೃದ್ಧಿ, ಕಲ್ಯಾಣ ಕಾರ್ಯಗಳ ವೆಚ್ಚಕ್ಕೆ ಆರ್ಥಿಕ ನೆರವು ಒದಗಿಸುವ ದಿಸೆಯಲ್ಲಿ ಕೇಂದ್ರ ಸರ್ಕಾರ ದೇಶದ ಎಲ್ಲಾ 28 ರಾಜ್ಯ ಸರ್ಕಾರಗಳಿಗೂ ಬುಧವಾರ ರಾತ್ರಿ ಒಟ್ಟಾರೆ 1,01,603 ಕೋಟಿ ರೂ. ತೆರಿಗೆ ಹಂಚಿಕೆಯನ್ನು ಮುಂಗಡ ಕಂತಾಗಿ ಬಿಡುಗಡೆ ಮಾಡಲಾಗಿದೆ. ಅಕ್ಟೋಬರ್ 10ರಂದು ಬಿಡುಗಡೆ ಆಗಬೇಕಾದ ಸಾಮಾನ್ಯ ಮಾಸಿಕ ಹಂಚಿಕೆ ಜೊತೆಗೇ ಈ ಹೆಚ್ಚುವರಿ ತೆರಿಗೆ ಪಾಲಿನ ಹಣವೂ ಬಿಡುಗಡೆಯಾಗಲಿದೆ. ರಾಜ್ಯ ಸರ್ಕಾರಗಳು ಅಭಿವೃದ್ಧಿ ಕಾರ್ಯಗಳಿಗೆ ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಲಿ ಎಂದು ಅವರು ಸಲಹೆ ನೀಡಿದ್ದಾರೆ.
ರೈತರಿಗೆ ಬೆಂಬಲ ಬೆಲೆ ತಲುಪಿಸಿ: ಅತಿವೃಷ್ಟಿಯಿಂದಾಗಿ ರಾಜ್ಯದ ರೈತರು ತತ್ತರಿಸಿದ್ದಾರೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯಾದ್ಯಾಂತ ವಿಪರೀತ ಮಳೆಯಿಂದ ರೈತರು ಬೆಳೆಹಾನಿಗೆ ಒಳಗಾಗಿದ್ದಾರೆ. ಈ ಸಂಕಷ್ಟ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ವಿವಿಧ ಬೆಳೆಗಳಿಗೆ ಬೆಂಬಲ ಬೆಲೆಯ ನೆರವು ಕಲ್ಪಿಸಿದೆ. ರಾಜ್ಯ ಸರ್ಕಾರ ಅನ್ನದಾತರಿಗೆ ಇದನ್ನು ಸಮರ್ಪಕವಾಗಿ ತಲುಪಿಸಲಿ ಎಂದು ಒತ್ತಾಯಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವಿಶೇಷವಾಗಿ ಕರ್ನಾಕಟದ ರೈತರಿಗಾಗಿಯೇ ಬೆಂಬಲ ಬೆಲೆಯಲ್ಲಿ ಹೆಸರು, ಉದ್ದಿನಕಾಳು, ಸೋಯಾಬಿನ್, ಶೇಂಗಾ ಮತ್ತು ಸೋಯಾಬಿನ್ ಖರೀದಿಗೆ ಸೂಚಿಸಿದ್ದ ಕೇಂದ್ರ ಸರ್ಕಾರ, ಇದೀಗ ಹಿಂಗಾರು ಹಂಗಾಮಿನ ದ್ವಿದಳ ಧಾನ್ಯಗಳು ಸೇರಿದಂತೆ ವಿವಿಧ ಬೆಳೆಗಳ ಬೆಂಬಲ ಬೆಲೆಯನ್ನೂ ಹೆಚ್ಚಿಸಿ ರೈತರ ನೆರವಿಗೆ ಬಂದಿದೆ.
ಮುಂಬರುವ ಹಿಂಗಾರು ಹಂಗಾಮಿನ ಮಾರುಕಟ್ಟೆಯಲ್ಲಿ ಖರೀದಿಸುವ ಗೋಧಿ, ಕುಸುಬೆ, ಬಾರ್ಲಿ, ಮಸೂರ್, ಸಾಸಿವೆ, ಕಡಲೆ ಹೀಗೆ ವಿವಿಧ ಧಾನ್ಯಗಳಿಗೆ ಕೇಂದ್ರ ಸರ್ಕಾರ ಈ ಬಾರಿ ಅತಿ ಹೆಚ್ಚಿನ ಬೆಂಬಲ ಬೆಲೆಯನ್ನು ಘೋಷಿಸಿದೆ. ರಾಜ್ಯ ಸರ್ಕಾರ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದ ರೈತರಿಗೆ ಇದರ ಲಾಭವನ್ನು ಸಮರ್ಪಕವಾಗಿ ಒದಗಿಸುವ ಕೆಲಸ ಮಾಡಲಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ದಸರಾ ಗಿಫ್ಟ್ – ಡಿಎ 3% ಏರಿಕೆ