ಈಗಂತೂ ಎಲ್ಲರ ಬಾಯಲ್ಲೂ ಒಂದೇ ಪದ.. ಅದೇನೆಂದರೆ ಮೈಸೂರು ದಸರಾ (Mysuru Dasara). ಆದರೆ ನಮ್ಮ ಕರಾವಳಿ ಭಾಗದ ಜನರಲ್ಲಿ ನವರಾತ್ರಿ (Navratri) ಅಂದರೆ ನೆನಪಾಗೋದೇ ಹುಲಿವೇಷ (Hulivesha). ಹೌದು, ನವರಾತ್ರಿಯಲ್ಲಿ ಮಂಗಳೂರು, ಉಡುಪಿ ಭಾಗದಲ್ಲಂತೂ ಠಾಸೆ, ಡೋಲುಗಳದ್ದೇ ಸದ್ದು. ಮತ್ತೊಂದೆಡೆ ಹುಲಿ ವೇಷಗಳದ್ದೇ ದರ್ಬಾರ್.
ತುಳುನಾಡಿನ ಸಂಪ್ರದಾಯಗಳಲ್ಲಿ ಪಿಲಿ ವೇಷವೂ ಒಂದು. ಮಂಗಳೂರು ದಸರಾದಲ್ಲಿ (Mangaluru Dasara) ಈ ಹುಲಿಗಳ ನರ್ತನವೇ ಒಂದು ಆಕರ್ಷಣೆ. ಮೊದಲೆಲ್ಲ ಬರೀ ಕರಾವಳಿ ಭಾಗದ ಜನರಿಗೆ ಮಾತ್ರ ಇದರ ಬಗ್ಗೆ ಗೊತ್ತಿತ್ತು. ಆದರೆ ಈ ಹುಲಿವೇಷಗಳನ್ನು ಸಿನಿಮಾ, ರಿಯಾಲಿಟಿ ಶೋಗಳಿಂದ ದೇಶ ವಿದೇಶದ ಜನರಿಗೂ ಈ ಹುಲಿವೇಷ ಚಿರಪರಿಚಿತವಾಗಿದೆ. ಇಷ್ಟೆಲ್ಲ ಹೇಳಿದ ಮೇಲೆ ಈ ಹುಲಿ ಕುಣಿತ ಹೇಗೆ ಶುರು ಆಯ್ತು ಅಂತ ತಿಳ್ಕೋಬೇಕು ಅಂದ್ರೆ ಮುಂದೆ ಓದಿ..
ಹುಲಿವೇಷ ಹುಟ್ಟಿಕೊಂಡಿದ್ದು ಹೇಗೆ?
ಇಷ್ಟಾರ್ಥ ಸಿದ್ಧಿಗಾಗಿ ಜನರು ದೇವರಿಗೆ ನಾನಾ ರೀತಿಯ ಹರಕೆಯನ್ನು ಹೊರುತ್ತಾರೆ. ಇದೇ ರೀತಿ ಹರಕೆಯ ರೂಪವಾಗಿ ಹುಲಿವೇಷ ಧರಿಸುವ ಸಂಪ್ರದಾಯದ ಹಿಂದೆಯೂ ಐಹಿತ್ಯಗಳಿವೆ. ತಾಯಿಯೊಬ್ಬರು ತನ್ನ ಮಗು ಹುಷಾರಾಗಿ ನಡೆಯಲು ಆರಂಭಿಸಿದರೆ ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ನೃತ್ಯ ಮಾಡಿಸುವುದಾಗಿ ಹರಕೆ ಹೊತ್ತಿದ್ದರು ನಂಬಿಕೆಯಿದೆ.
ದೈಹಿಕ ಸಮಸ್ಯೆಯ ಕಾರಣ ಮಗು ಕಾಲುಗಳಿದ್ದರೂ ನಡೆದಾಡಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ಚಿಂತೆಗೊಳಗಾದ ತಾಯಿ ಮಂಗಳಾದೇವಿ ದೇವಾಲಯಕ್ಕೆ ಬಂದು ಕೈ ಮುಗಿದು, ನನ್ನ ಮಗು ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದರೆ ಮುಂದಿನ ವರ್ಷ ನವರಾತ್ರಿ ಹಬ್ಬಕ್ಕೆ ಮಗುವಿಗೆ ಹುಲಿ ವೇಷ ಹಾಕಿಸಿ ಇದೇ ದೇವಸ್ಥಾನದ ಅಂಗಳದಲ್ಲಿ ಮಗುವಿನಿಂದ ಪಿಲಿ ನಲಿಕೆಯನ್ನು ಹರಕೆ ರೂಪದಲ್ಲಿ ಸಲ್ಲಿಸುವುದಾಗಿ ಪ್ರಾರ್ಥನೆ ಸಲ್ಲಿಸಿದ್ದರು.
ಇದಾದ ಕೆಲ ದಿನಗಳ ಬಳಿಕ ಆ ಮಗು ಸಂಪೂರ್ಣವಾಗಿ ಗುಣಮುಖವಾಗಿ ನಡೆದಾಡಲು ಪ್ರಾರಂಭಿಸಿದನಂತೆ. ತಾಯಿ ತಾನು ಕೊಟ್ಟ ಮಾತಿನಂತೆ ಮರು ವರ್ಷವೇ ನವರಾತ್ರಿ ಹಬ್ಬದ ಸಮಯದಲ್ಲಿ ತಮ್ಮ ಮಗನಿಗೆ ಹುಲಿ ವೇಷವನ್ನು ಹಾಕಿಸಿ ಮಂಗಳಾದೇವಿ ದೇವಾಲಯದಲ್ಲಿ ಹುಲಿವೇಷದ ಹರಕೆಯನ್ನು ಸಲ್ಲಿಸಿದರು. ಅಂದಿನಿಂದ ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಗೆ ಗೌರವ ಸಲ್ಲಿಸಲು ಯುವಕರಿಂದ ಹಿಡಿದು ಪುಟ್ಟ ಮಕ್ಕಳವರೆಗೆ ಭಕ್ತಿ ಹಾಗೂ ಶ್ರದ್ಧಾಪೂರ್ವಕವಾಗಿ ಹುಲಿವೇಷವನ್ನು ಹಾಕುವ ಸಂಪ್ರದಾಯ ನಡೆದುಕೊಂಡು ಬಂದಿದೆ.
ನವರಾತ್ರಿ ಬಂತೆಂದರೆ ಕರಾವಳಿಗರ ಕಣ್ಣಿಗಂತು ಹಬ್ಬವೇ ಸರಿ. ಎತ್ತ ನೋಡಿದರೂ ಹುಲಿಕುಣಿತ ಮೆರುಗು. ಈಗಂತೂ ಪಿಲಿಗೊಬ್ಬು, ಪಿಲಿಪಜ್ಜೆ, ಪಿಲಿನಲಿಕೆ ಎಂದು ನವರಾತ್ರಿಯಲ್ಲೇ ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಬೇರೆ ಬೇರೆ ಕಡೆಯಿಂದ ಹುಲಿವೇಷದ ತಂಡಗಳು ಭಾಗವಹಿಸಿ, ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುತ್ತಾರೆ. ಇಲ್ಲಿ ಕಿನ್ನಿ ಪಿಲಿಯಿಂದ ಹಿಡಿದು ದೊಡ್ಡವರು ಸಹ ಈ ಹುಲಿವೇಷ ಧರಿಸಿ ನರ್ತಿಸುತ್ತಾರೆ.