ನವರಾತ್ರಿಯ 9 ದಿನ ಅಥವಾ ವಿಜಯ ಆಚರಣೆ ನಡೆಯುವ ಜಾಗದಲ್ಲಿ ಸಾಮೂಹಿಕ ದುರ್ಗಾ ನಮಸ್ಕಾರ ಪೂಜೆಯನ್ನು ಮಾಡಲಾಗುತ್ತದೆ.
ದಸರಾ ಸಮಯದಲ್ಲೇ ಮಾಡಬೇಕು ಎಂದು ಏನಿಲ್ಲ. ಮಂಗಳವಾರ ಅಥವಾ ಶುಕ್ರವಾರವೂ ಮಾಡಬಹುದು. ಕೆಲವೊಮ್ಮೆ ಮನೆಯಲ್ಲಿ ಬೆಳಗ್ಗೆ ಗಣಹೋಮ, ಮಧ್ಯಾಹ್ನ ಸತ್ಯನಾರಾಯಣ ಪೂಜೆ, ರಾತ್ರಿ ದುರ್ಗಾ ನಮಸ್ಕಾರ ಪೂಜೆಯನ್ನು ಮಾಡುತ್ತಾರೆ.
ಯಾಕೆ ಈ ಪೂಜೆ?
ದುರ್ಗಾ ದೇವು ತುಂಬಾ ಶಕ್ತಿಶಾಲಿ ಮತ್ತು ಕರುಣಾಮಯಿ ತಾಯಿ. ಅವಳು ದುಷ್ಟಶಕ್ತಿಗಳನ್ನು ನಾಶಮಾಡುವವಳು. ದುರ್ಗಾ ನಮಸ್ಕಾರ ಪೂಜೆ ಮಾಡುವುದರಿಂದ ಎಲ್ಲಾ ನಕಾರಾತ್ಮಕ ಶಕ್ತಿ ಹೋಗುತ್ತದೆ ಎಂಬ ನಂಬಿಕೆ. ಜಾತಕ ದೋಷಕ್ಕೆ ಪರಿಹಾರ, ವ್ಯವಹಾರ ನಷ್ಟವನ್ನು ಕಡಿಮೆ ಮಾಡಿ ಆರ್ಥಿಕ ಅಭಿವೃದ್ಧಿ..ಹೀಗೆ ನಾನಾ ಕಾರಣಕ್ಕೆ ಈ ಪೂಜೆಯನ್ನು ಮಾಡಲಾಗುತ್ತದೆ.
ಈ ಪೂಜೆ ಮಾಡುವ ಮೊದಲು ಮಂಡಲವನ್ನು ರಚಿಸಲಾಗುತ್ತದೆ. ಮಂಡಲದ ಮಧ್ಯ ಭಾಗದಲ್ಲಿ ಕಾಲುದೀಪವನ್ನು ಇಡಲಾಗುತ್ತದೆ. ನಂತರ ಸುತ್ತಲು ಹೂವುಗಳಿಂದ ಅಲಂಕರಿಸಲಾಗುತ್ತದೆ. ದುರ್ಗಾ ದೇವಿಯನ್ನು ಮಾತೃಕ-ನ್ಯಾಸ ಮಾಡುವ ಮೂಲಕ ದೊಡ್ಡ ದೀಪದಲ್ಲಿ ಆವಾಹಿಸಿ ಅಲ್ಲಿ ಅವಳ ಪ್ರತಿಯೊಂದು ಭಾಗವನ್ನು ವಿಭಿನ್ನ ಅಕ್ಷರಗಳಿಂದ ಪೂಜಿಸಲಾಗುತ್ತದೆ. ದುರ್ಗಾ ದೇವಿಯನ್ನು ಮಹಾಕಾಳಿ, ಮಹಾಲಕ್ಷ್ಮಿ ಮತ್ತು ಮಹಾಸರಸ್ವತಿಯ ರೂಪದಲ್ಲಿ ಆವಾಹಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ದೀಪಕ್ಕೆ ಪ್ರದಕ್ಷಿಣೆ ಹಾಕಿ ನಮಸ್ಕಾರ ಮಾಡಲಾಗುತ್ತದೆ.
ದುರ್ಗಾ ದೇವಿ ಪರಾಕ್ರಮ, ಶಕ್ತಿ ಮತ್ತು ಜ್ಞಾನದ ದೇವತೆ. ಈ ಪೂಜೆಯ ಮೂಲಕ ಅವಳ ದೈವಿಕ ಶಕ್ತಿಯನ್ನು ಮನೆಗೆ ಆಹ್ವಾನಿಸಿ, ಕುಟುಂಬದ ಸದಸ್ಯರನ್ನು ರಕ್ಷಿಸುವುದು ಮತ್ತು ಅವರಿಗೆ ಆಶೀರ್ವಾದಗಳನ್ನು ನೀಡುವುದು ಈ ಪೂಜೆಯ ಮುಖ್ಯ ಉದ್ದೇಶ. ಈ ಪೂಜೆಯ ಮೂಲಕ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ದೂರವಿಡಬಹುದು ಎಂದು ನಂಬಲಾಗಿದೆ.
ದುರ್ಗಾ ದೇವಿಯನ್ನು ಸಂಪತ್ತು ಮತ್ತು ಸಮೃದ್ಧಿಯ ದೇವತೆಯಾಗಿಯೂ ಪೂಜಿಸಲಾಗುತ್ತದೆ. ದುರ್ಗಾ ದೇವಿಯು ಆರೋಗ್ಯ ಮತ್ತು ಸುಖವನ್ನು ನೀಡುವ ದೇವತೆ. ಪೂಜೆಯ ಮೂಲಕ ಕುಟುಂಬದ ಎಲ್ಲ ಸದಸ್ಯರು ಆರೋಗ್ಯವಾಗಿ ಮತ್ತು ಸುಖವಾಗಿ ಇರುತ್ತಾರೆ ಎಂಬ ನಂಬಿಕೆಯಿದೆ.