ಭಾರತ ಕೇವಲ ಪ್ರಕೃತಿದತ್ತವಾದ ಹಾಗೂ ಆಧ್ಯಾತ್ಮಿಕತೆಯಿಂದ ಕೂಡಿರುವ ಸ್ಥಳಗಳಿಗೆ ಮಾತ್ರ ಫೇಮಸ್ ಅಲ್ಲ, ಬದಲಾಗಿ ವಿಶ್ವದ ಸಾಹಸಿಗರನ್ನು ರೋಮಾಂಚಕಗೊಳಿಸುವ ಸಾಹಸ ತಾಣಗಳನ್ನು ಕೂಡ ನಮ್ಮ ದೇಶ ಹೊಂದಿದೆ. ಅಂತಹದೇ ಒಂದು ಸಾಹಸಮಯವಾದ ಕೋಟೆ ಎಂದರೆ ಅದು ಹರಿಹರ ಕೋಟೆ. ಈ ಕೋಟೆಯನ್ನು ಭಾರತದ ಮೋಸ್ಟ್ ಡೇಂಜರಸ್ ಫೋರ್ಟ್ ಎಂದು ಕರೆಯಲಾಗುತ್ತದೆ. ಡಬಲ್ ಗುಂಡಿಗೆ ಇರುವವರು ಮಾತ್ರ ಈ ಕೋಟೆಯನ್ನು ಹತ್ತಲು ಸಾಧ್ಯ. ಟ್ರೆಕ್ಕಿಂಗ್ ಮಾಡುವವರಿಗೆ ಈ ಕೋಟೆ ನೆಚ್ಚಿನ ತಾಣವಾಗಿದೆ. ಹಾಗಿದ್ರೆ ಎಲ್ಲಿದೆ ಈ ಹರಿಹರ ಫೋರ್ಟ್? ತಲುಪುವುದು ಹೇಗೆ? ಇತಿಹಾಸವೇನು ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.
ಹರಿಹರ ಕೋಟೆ ಎಲ್ಲಿದೆ?
ಹರಿಹರ ಕೋಟೆಯನ್ನು ಹರ್ಷಗಡ್ ಕೋಟೆ ಎಂದು ಕೂಡ ಕರೆಯುತ್ತಾರೆ. ಇದು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಘೋಟಿಯಿಂದ ಕೇವಲ 40 ಕಿ.ಮೀ ದೂರದಲ್ಲಿದೆ. ಬಂಡೆಯಿಂದ ಕತ್ತರಿಸಿದ ವಿಶಿಷ್ಟವಾದ ಮೆಟ್ಟಿಲುಗಳನ್ನು ಈ ಕೋಟೆ ಹೊಂದಿದೆಯಾದರೂ, ಸ್ವಲ್ಪ ಅಜಾಗರೂಕತೆಯಿಂದ ಕಾಲು ಜಾರಿದರೆ ಪಾತಾಳಕ್ಕೆ ಬೀಳುವ ಸಾಧ್ಯತೆಯಿದೆ. ಟ್ರೆಕ್ಕಿಂಗ್ ಮಾಡಲು ತೆರಳಿದ ಹಲವಾರು ಮಂದಿ ಈ ಕೋಟೆ ಹತ್ತುವ ಸಮಯದಲ್ಲಿ ಆಯತಪ್ಪಿ ಬಿದ್ದು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಇತಿಹಾಸವೇನು?
ಹರಿಹರ ಕೋಟೆಯನ್ನು ದೊಡ್ಡದಾದ ಪರ್ವತದ ಮೇಲೆ ನಿರ್ಮಿಸಲಾಗಿದೆ. ಇದು ಬ್ರಿಟಿಷರು ನೆಲಸಮ ಮಾಡಲು ಬಯಸಿದ ಕೋಟೆಯಾಗಿತ್ತು. ಆ ಸಮಯದಲ್ಲಿ ಬ್ರಿಟಿಷರು ಈ ಕೋಟೆಯ ಬಾಗಿಲನ್ನು ಫಿರಂಗಿಗಳಿಂದ ಸ್ಫೋಟಿಸೋದಕ್ಕೆ ಪ್ಲ್ಯಾನ್ ಮಾಡಿದ್ದರಂತೆ. ಆದರೆ ಅದು ಸಾಧ್ಯವಾಗಲಿಲ್ಲ, ಏಕೆಂದರೆ ಈ ಕೋಟೆಯನ್ನು ಅಷ್ಟೊಂದು ಸ್ಟ್ರಾಂಗ್ ಆಗಿ ನಿರ್ಮಿಸಲಾಗಿದೆ. ಹಾಗಾಗಿಯೇ ಸಾವಿರಾರು ವರ್ಷಗಳ ನಂತರವೂ ಈ ಕೋಟೆ ಇನ್ನೂ ಭದ್ರವಾಗಿ ನಿಂತಿದೆ. ಇತಿಹಾಸದ ಪ್ರಕಾರ, ಶಿವಾಜಿ ಮಹಾರಾಜರು ತಮ್ಮ ಅಮೂಲ್ಯವಾದ ಆಯುಧಗಳು, ಸಂಪತ್ತನ್ನು ಈ ಕೋಟೆಯಲ್ಲಿ ಇಡುತ್ತಿದ್ದರು ಎನ್ನಲಾಗಿದೆ. ಯಾದವ ರಾಜವಂಶದ ಅವಧಿಯಲ್ಲಿ ಈ ಕೋಟೆಯನ್ನು ನಿರ್ಮಿಸಲಾಯಿತು ಎಂದು ಇತಿಹಾಸ ಹೇಳುತ್ತದೆ. ಕೋಟೆಯ ಮೇಲ್ಭಾಗದಲ್ಲಿ ಶಿವನಿಗೆ ಸಮರ್ಪಿತವಾದ ಆಲಯವಿದೆ. ಹರಿಹರವನ್ನು ʼದಕ್ಷಿಣ ಕಾಶಿʼ ಎಂದೇ ಕರೆಯುತ್ತಾರೆ.
ಕಠಿಣ ಚಾರಣ:
ಹರಿಹರ ಕೋಟೆಯ ಚಾರಣವು ಸಮುದ್ರಮಟ್ಟದಿಂದ ಸುಮಾರು 3,676 ಅಡಿ ಎತ್ತರದಲ್ಲಿದೆ. ಬಂಡೆಯಿಂದ ಕತ್ತರಿಸಿದ ಮೆಟ್ಟಿಲುಗಳನ್ನು ಈ ಕೋಟೆ ಒಳಗೊಂಡಿವೆ. ಇಲ್ಲಿನ ಅನೇಕ ಮೆಟ್ಟಿಲುಗಳು ಸವೆದುಹೋಗಿವೆ. ನೀವು ಮುಖ್ಯ ದ್ವಾರವನ್ನು ತಲುಪಿದ ನಂತರ ಸುರುಳಿಯಾಕಾರದ ಬಂಡೆಗಳನ್ನು ಕತ್ತರಿಸಿದ ಮೆಟ್ಟಿಲುಗಳನ್ನು ಹತ್ತಬೇಕಾಗುತ್ತದೆ. ಒಂದು ಸಮಯದಲ್ಲಿ ಒಬ್ಬ ವ್ಯಕ್ತಿ ಮಾತ್ರ ಈ ಕೋಟೆಯ ಮೆಟ್ಟಿಗಳನ್ನು ಹತ್ತಬಹುದಾಗಿದೆ. ಹರಿಹರ ಕೋಟೆಯು ಕ್ಲಿಷ್ಟಕರವಾದ ಟ್ರೆಕ್ಕಿಂಗ್ ತಾಣವಾಗಿದೆ. ಮಳೆಗಾಲದಲ್ಲಿ ಇಲ್ಲಿಗೆ ಭೇಟಿ ನೀಡುವುದನ್ನು ಆದಷ್ಟು ತಪ್ಪಿಸಬೇಕು.
ಈ ಹರಿಹರ ಕೋಟೆ ಚಾರಣವು ಸಾಮಾನ್ಯವಾಗಿ 3.5 ರಿಂದ 4 ಕಿಲೋಮೀಟರ್‌ಗಳಷ್ಟಿದ್ದು,ಒಟ್ಟು 7 ರಿಂದ 8 ಕಿ.ಮೀ ಇದೆ. ನೀವು ಆಯ್ಕೆಮಾಡುವ ಮೂಲ ಗ್ರಾಮವನ್ನು ಅವಲಂಬಿಸಿ ಚಾರಣದ ಅವಧಿ ನಿರ್ಧರಿಸಲಾಗುತ್ತದೆ. ನೀವು ನಿರ್ಗುಡ್‌ಪದಾ ಅಥವಾ ಕೋಟಂವಾಡಿಯಿಂದ ಚಾರಣ ಪ್ರಾರಂಭಿಸಿದರೆ ಸುಮಾರು 3.4 ರಿಂದ 3.5 ಕಿಲೋಮೀಟರ್ ದೂರ ಚಾರಣ ಮಾಡಬೇಕಾಗುತ್ತದೆ. ಒಂದು ವೇಳೆ ನೀವು ಹರ್ಷೇವಾಡಿಯಿಂದ ಚಾರಣ ಮಾಡಲು ಬಯಸಿದರೆ ಸುಮಾರು 2.5 ಕಿಲೋಮೀಟರ್ ದೂರ ಚಾರಣ ಮಾಡಬೇಕಾಗುತ್ತದೆ.
ಹರಿಹರ ಕೋಟೆ ತಲುಪೋದು ಹೇಗೆ?
ಹರಿಹರ ಕೋಟೆಯನ್ನು ತಲುಪಲು, ಮೊದಲು ನೀವು ಮಹಾರಾಷ್ಟ್ರದ ನಾಸಿಕ್ ರೈಲ್ವೆ ನಿಲ್ದಾಣಕ್ಕೆ ಬರಬೇಕು. ನಂತರ ಇಲ್ಲಿಂದ ಸರ್ಕಾರಿ ಬಸ್ ಹಿಡಿಯಬೇಕು. ಅದು ನಿಮ್ಮನ್ನು ನೇರವಾಗಿ ಬ್ರಹ್ಮಕೇಶ್ವರ ದೇವಸ್ಥಾನಕ್ಕೆ ಕರೆದೊಯ್ಯುತ್ತದೆ. ದೇವಾಲಯದ ಬಳಿ ಲಾಕರ್ ಕೊಠಡಿಗಳು ಲಭ್ಯವಿದೆ. ಅಲ್ಲಿ ನೀವು ನಿಮ್ಮ ವಸ್ತುಗಳನ್ನು ಇಡಬಹುದು.ಆಹಾರದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ, ಯಾಕಂದ್ರೆ ಇಲ್ಲಿ ಸಾಲು ಸಾಲು ಹೊಟೇಲ್‌ಗಳು ಕಾಣಸಿಗುತ್ತವೆ.
ಬ್ರಹ್ಮಕೇಶ್ವರ ದೇವಸ್ಥಾನದಿಂದ ನೇರವಾಗಿ ಆಟೋ ಮೂಲಕ ಹರ್ಸೆವಾಡಿಯನ್ನು ತಲುಪಿ. ಬಳಿಕ ಹರಿಹರ ಕೋಟೆಗೆ ಟಿಕೆಟ್ ತೆಗೆದುಕೊಳ್ಳಬೇಕು. ಅದರ ನಂತರ ನೀವು ಹರಿಹರ ಕೋಟೆಗೆ ಟ್ರೆಕ್ಕಿಂಗ್ ಪ್ರಾರಂಭಿಸಬಹುದು. ಈ ಕೋಟೆಯು ಎರಡು ಬದಿಗಳಿಂದ ನೇರವಾಗಿ 90 ಡಿಗ್ರಿಗಳಷ್ಟು ದೂರದಲ್ಲಿದೆ. ಕೋಟೆಯ ದ್ವಾರವನ್ನು ತಲುಪಲು, ಒಂದು ಮೀಟರ್ ಅಗಲದ 117 ಮೆಟ್ಟಿಲುಗಳನ್ನು ಹತ್ತಬೇಕು.
ಜನಪ್ರಿಯ ಟ್ರೆಕ್ಕಿಂಗ್ ತಾಣ:
ಪ್ರತಿಯೊಂದು ಕೋಟೆಯೂ ತನ್ನದೇ ಆದ ವಿಶೇಷತೆಗಳನ್ನ ಹೊಂದಿದೆ. ಸದ್ಯ ಸೋಶಿಯಲ್ ಮೀಡಿಯಾದಿಂದಾಗಿ ಈ ಹರಿಹರ ಕೋಟೆಯು ಚಾರಣ ತಾಣವಾಗಿ ಮಾರ್ಪಟ್ಟಿದೆ. ಮಳೆಗಾಲದಲ್ಲಿ ಇಲ್ಲಿಗೆ ಹೋಗುವುದನ್ನು ತಪ್ಪಿಸಬೇಕು. ಯಾಕಂದರೆ ಈ ಕೋಟೆ ಮಳೆಗಾಲದಲ್ಲಿ ತುಂಬಾ ಜಾರುವುದರಿಂದ ಬಿದ್ದು ಕೈಕಾಲು ಮುರಿದುಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಈ ಹರಿಹರ ಕೋಟೆ ಸಾಹಸ ಪ್ರಿಯರ ನೆಚ್ಚಿನ ತಾಣಗಳಲ್ಲಿ ಒಂದಾಗಿದೆ.
ಹರಿಹರ ಕೋಟೆ ಹತ್ತೋವಾಗ ಬಹಳಷ್ಟು ಕೋತಿಗಳು ಕಾಣಸಿಗುತ್ತವೆ. ಆದ್ದರಿಂದ ಯಾವುದೇ ಆಹಾರ ಪದಾರ್ಥಗಳನ್ನು ನಿಮ್ಮೊಂದಿಗೆ ತೆಗೆದುಕೊಂಡು ಹೋಗಬೇಡಿ ಮತ್ತು ಕೋತಿಗಳಿಂದ ಸಾಧ್ಯವಾದಷ್ಟು ದೂರವಿರಬೇಕು. ಏಕೆಂದರೆ ಕೋತಿಗಳಿಂದಾಗಿ ಟ್ರೆಕ್ಕಿಂಗ ವೇಳೆ ನೀವು ಬ್ಯಾಲೆನ್ಸ್ ತಪ್ಪಿ ಕೆಳಗೆ ಬೀಳುವ ಚಾನ್ಸ್ ಕೂಡ ಇದೆ.
ಈ ಕೋಟೆಯ ತುತ್ತ ತುದಿ ತಲುಪಿದ ಮೇಲೆ ಪರ್ವತಗಳನ್ನು ಸುತ್ತಲೂ ಪೋಣಿಸಿಟ್ಟಂತೆ ಕಾಣುತ್ತದೆ. ಹರಿಹರ ಕೋಟೆಯ ತುತ್ತ ತುದಿಯನ್ನು ತಲುಪಿದರೆ, ನೀವು ಮೋಡಗಳ ನಡುವೆ ಇದ್ದಂತೆ ಭಾಸವಾಗುತ್ತದೆ. ಆದರೆ ಪರ್ವತಾರೋಹಣದ ಸಮಯದಲ್ಲಿ ನೀವು ಕೆಲವು ಸವಾಲುಗಳನ್ನು ಸಹ ಎದುರಿಸಬೇಕಾಗುತ್ತದೆ. ಪರ್ವತದ ಮೆಟ್ಟಿಲುಗಳು ನೇರವಾಗಿವೆ, ಇದರಿಂದ ಮೆಟ್ಟಿಲು ಏರುವುದು ಕಷ್ಟ. ಆದ್ದರಿಂದ ಕೋಟೆಯನ್ನು ಹತ್ತಬೇಕಾದರೆ ಬಹಳಷ್ಟು ಎಚ್ಚರಿಕೆಯಿಂದ ಇರಬೇಕು.