ಮುಖ್ಯಾಂಶಗಳು
* ಕಂದಹಾರ್‌ನಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅಮೆರಿಕಕ್ಕೆ ಬಾಗ್ರಾಮ್ ವಾಯುನೆಲೆಯನ್ನು ಮರಳಿ ನೀಡಲು ತಾಲಿಬಾನ್ ನಿರಾಕರಿಸಿದೆ.
* ಬಾಗ್ರಾಮ್‌ನ್ನು ಮರಳಿ ಪಡೆಯಲು ಪ್ರಯತ್ನಿಸಿದರೆ ಯುದ್ಧಕ್ಕೆ ಸಂಪೂರ್ಣವಾಗಿ ಸಿದ್ಧರಾಗುವುದಾಗಿ ತಾಲಿಬಾನ್ ಪ್ರತಿಜ್ಞೆ ಮಾಡಿದೆ.
* ಪಾಕಿಸ್ತಾನ, ಅಮೆರಿಕಕ್ಕೆ ಸಹಕರಿಸಿದರೆ ʻಶತ್ರು ರಾಷ್ಟ್ರʼ ಪಟ್ಟಿಗೆ ಸೇರಿಸುವ ಎಚ್ಚರಿಕೆ
* ಬಾಗ್ರಾಮ್ ವಿಚಾರದಲ್ಲಿ ಟ್ರಂಪ್ ಬೆದರಿಕೆ ಉದ್ವಿಗ್ನ ಪರಿಸ್ಥಿತಿ ಉಂಟುಮಾಡುವ ಸಾಧ್ಯತೆ ಇದೆ.
* ಇದೆಲ್ಲದರ ನಡುವೆ ದೋಹಾ ಒಪ್ಪಂದವನ್ನುಅಮೆರಿಕಕ್ಕೆ ತಾಲಿಬಾನ್ ನೆನಪಿಸಿದೆ.
ದುರ್ಯೋದನ ಪಾಂಡವರಿಗೆ ಐದು ಸೂಜಿ ಮೊನೆ ಚುಚ್ಚುವಷ್ಟು ಜಾಗವನ್ನೂ ಕೊಡಲ್ಲ ಎಂದ ಹಾಗೇ ಬಾಗ್ರಾಮ್ ವಾಯುನೆಲೆ (Bagram Air Base) ಕೇಳಿದ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ (Donald Trump) ತಾಲಿಬಾನ್ ಸರ್ಕಾರ ಒಂದಿಂಚೂ ಜಾಗವನ್ನು ಕೊಡಲ್ಲ ಎಂದು ಎಚ್ಚರಿಸಿದೆ. ಈ ಮೂಲಕ ವಿಶ್ವ ಮಟ್ಟದಲ್ಲಿ ದೊಡ್ಡಣ್ಣ ಎಂದು ಬೀಗುತ್ತಿರುವ ಅಮೆರಿಕಕ್ಕೆ ತೀವ್ರ ಮುಖಭಂಗವಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಏನಾದ್ರೂ ಕೆಣಕಿದ್ರೆ ಅದಕ್ಕೂ ಸೈ ಎನ್ನುವಂತೆ ಯುದ್ಧಕ್ಕೂ ತಾಲಿಬಾನ್ ಸಿದ್ಧವಾಗಿಯೇ ಇದೆ.
ವಾಯುನೆಲೆ ಕೇಳಿದ ಅಮೆರಿಕಕ್ಕೆ ಅಫ್ಘಾನಿಸ್ತಾನದ (Afghanistan) ತಾಲಿಬಾನ್ ಸರ್ಕಾರದ (Taliban Government) ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ (Aamir Khan Muttaki) ಅವರು, ತಮ್ಮ ದೇಶದ ಸಾರ್ವಭೌಮತ್ವದ ವಿಷಯದಲ್ಲಿ ಯಾವುದೇ ರಾಜಿಗೂ ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ನಮ್ಮ ಭೂಮಿಯ ಒಂದೇ ಒಂದು ತುಂಡನ್ನೂ ಯಾರಿಗೂ ಬಿಟ್ಟುಕೊಡುವುದಿಲ್ಲ ಎನ್ನುವ ಮೂಲಕ ಟ್ರಂಪ್ ವಿರುದ್ಧ ಗುಡುಗಿದ್ದಾರೆ. ಇದರ ಜೊತೆ ಪಾಕಿಸ್ತಾನವೇನಾದ್ರೂ ಅಮೆರಿಕದ ಜೊತೆ ಕೈಜೊಡಿಸಿದ್ರೆ ಅದನ್ನು ಶತ್ರು ದೇಶವಾಗಿ ಘೋಷಿಸುವುದಾಗಿ ಅಫ್ಘಾನ್ ಎಚ್ಚರಿಸಿದೆ. ಇದನ್ನೂ ಓದಿ: ಒಂದಿಂಚು ಜಾಗವನ್ನೂ ಬಿಡಲ್ಲ – ಬಾಗ್ರಾಮ್ ವಾಯುನೆಲೆ ಹಿಂದಿರುಗಿಸುವ ಟ್ರಂಪ್ ಬೇಡಿಕೆ ತಿರಸ್ಕರಿಸಿದ ತಾಲಿಬಾನ್
ಅಫ್ಘಾನಿಸ್ತಾನದಿಂದ ಸೇನೆ ಹಿಂಪಡೆದ ಬಳಿಕ ಬಾಗ್ರಾಮ್ ವಾಯುನೆಲೆಯನ್ನು ಮರಳಿ ಪಡೆಯಲು ಅಮೆರಿಕ ಅಧ್ಯಕ್ಷ ಟ್ರಂಪ್ ಮುಂದಾಗಿದ್ದಾರೆ. ಈ ನೆಲೆಯನ್ನು ಮರಳಿಸದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕದ ಬೆದರಿಕೆಗೆ ತಾಲಿಬಾನ್ ಯಾವುದೇ ಸೊಪ್ಪು ಹಾಕದೇ, ಮುಲಾಜಿಲ್ಲದೇ ಕೊಡಲು ಸಾಧ್ಯವಿಲ್ಲ ಎಂದು ಹೇಳಿದೆ.
ಅಮೆರಿಕಕ್ಕೆ ಈ ವಾಯುನೆಲೆ ಏಕೆ ಮುಖ್ಯ?
ಈ ವಾಯುನೆಲೆಯನ್ನು ಅಮೆರಿಕ ನಿರ್ಮಾಣ ಮಾಡಿದ್ದು, ವಿಶ್ವದ ಶಕ್ತಿಶಾಲಿ ಪ್ರಮುಖ ವಾಯುನೆಲೆಗಳಲ್ಲಿ ಒಂದಾಗಿದೆ. ಇಲ್ಲಿ ಸೇನೆಗೆ ಬೇಕಾದ ಎಲ್ಲಾ ಮೂಲ ಸೌಕರ್ಯಗಳು ಇದ್ದು, ರಷ್ಯಾ ಮತ್ತು ಚೀನಾ ಮೇಲೆ ಅಮೆರಿಕಕ್ಕೆ ಕಣ್ಣಿಡಲು ಇದು ಮುಖ್ಯವಾಗಿದೆ.
ಸುಮಾರು 20 ವರ್ಷಗಳ ಕಾಲ ಅಮೆರಿಕ ಇಲ್ಲಿ ಮಿಲಿಟರಿಯನ್ನು ಇರಿಸಿ ನಿಯಂತ್ರಣದಲ್ಲಿಟ್ಟುಕೊಂಡಿತ್ತು. ತನ್ನ ಸೇನಾ ಪಡೆಯನ್ನು ಸಂಪೂರ್ಣವಾಗಿ ಹಿಂಪಡೆದುಕೊಂಡಿದ್ದ ಅಮೆರಿಕ ಮತ್ತೆ ವಾಯುನೆಲೆಯನ್ನು ಮರಳಿ ಕೇಳುತ್ತಿದೆ. ಈ ಬೇಡಿಕೆಯನ್ನು ತಾಲಿಬಾನ್ ಸಾರಾಸಗಟಾಗಿ ತಿರಸ್ಕರಿಸಿದೆ. ಇದು ಅಮೆರಿಕ ಹಾಗೂ ತಾಲಿಬಾನ್ ಮಧ್ಯೆ ಯುದ್ಧದ ಭೀತಿಯನ್ನು ಹೆಚ್ಚಿಸಿದೆ. ಆದರೂ ಸಹ ತಾಲಿಬಾನ್ ಮಾತ್ರ ಇಟ್ಟ ಹೆಜ್ಜೆ ಹಿಂದಿಡಲ್ಲ ಎಂದು ಧೈರ್ಯವಾಗಿ ಹೇಳಿಕೊಂಡಿದೆ.
ಟ್ರಂಪ್ ತಾಲಿಬಾನ್‌ಗೆ ಹೇಳಿದ್ದೇನು?
ವಾಯುನೆಲೆಯನ್ನು ಶೀಘ್ರದಲ್ಲೇ ಮರಳಿ ಪಡೆಯಲು ಬಯಸಿದ್ದೇವೆ. ಒಂದು ವೇಳೆ ಇದಕ್ಕೆ ತಾಲಿಬಾನ್ ಒಪ್ಪದಿದ್ದರೆ ನಾನು ಏನು ಮಾಡಲಿದ್ದೇನೆ ಎಂಬುದನ್ನು ನೀವೇ ನೋಡಲಿದ್ದೀರಿ ಎಂದು ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಅಮೆರಿಕದ ಪ್ರಭಾವ ಮರುಸ್ಥಾಪನೆಗೆ ಬಾಗ್ರಾಮ್ ಏಕೆ ಮುಖ್ಯ?
ಬಾಗ್ರಾಮ್ ವಾಯುನೆಲೆ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಸಮೀಪವೇ ಇದೆ. ಇದು ಇರಾನ್, ಪಾಕಿಸ್ತಾನ, ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತ್ಯ ಮತ್ತು ಮಧ್ಯ ಏಷ್ಯಾದ ನಡುವಿನ ಪ್ರಮುಖ ಕೇಂದ್ರವಾಗಿದೆ. ಈ ಪ್ರದೇಶದಲ್ಲಿ ತನ್ನ ಹಿಡಿತದಲ್ಲಿದ್ದರೆ ಅಮೆರಿಕದ ಪ್ರಭಾವ ಮರುಸ್ಥಾಪನೆಗೊಳ್ಳಲಿದೆ ಎಂಬುದು ಟ್ರಂಪ್ ಲೆಕ್ಕಾಚಾರ.
ದೋಹಾ ಒಪ್ಪಂದ
ಇದೆಲ್ಲದರ ನಡುವೆ ತಾಲಿಬಾನ್ ಸರ್ಕಾರ ಅಮೆರಿಕಕ್ಕೆ ದೋಹಾ ಒಪ್ಪಂದವನ್ನು ನೆನಪಿಸಿದೆ. 2020ರಲ್ಲಿ ಅಮೆರಿಕ ಮತ್ತು ತಾಲಿಬಾನ್ ನಡುವೆ ನಡೆದ ಒಪ್ಪಂದದ ಪ್ರಕಾರ, ಅಮೆರಿಕವು ಅಫ್ಘಾನಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದಾಗಿ ಮತ್ತು ಅದರ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಒಪ್ಪಿಕೊಂಡಿತ್ತು.
ಪಾಕ್‌ಗೂ ಎಚ್ಚರಿಕೆ ನೀಡಿದ ತಾಲಿಬಾನ್
ಬಾಗ್ರಾಮ್ ವಾಯುನೆಲೆ ವಿಚಾರವಾಗಿ ಅಮೆರಿಕಕ್ಕೆ ಪಾಕಿಸ್ತಾನವೇನಾದರೂ ಸಹಾಯ ಮಾಡಿದರೆ ಅದನ್ನು ಶತ್ರುರಾಷ್ಟ್ರವೆಂದು ಪರಿಗಣಿಸುವುದಾಗಿ ತಾಲಿಬಾನ್ ಎಚ್ಚರಿಕೆ ನೀಡಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಹಾಗೂ ಅಮೆರಿಕ ನಡುವಿನ ಸಂಬಂಧ ವೃದ್ಧಿಗೊಂಡಿದೆ. ಇದು ಅಲ್ಲಿನ ಖನಿಜ ಮತ್ತು ಕಚ್ಚಾ ತೈಲದ ಮೇಲೆ ಅಮೆರಿಕ ಕಣ್ಣಿಟ್ಟಿದ್ದಕ್ಕೆ ಮಾಡಿಕೊಂಡ ಸಂಬಂಧ ಎನ್ನಲಾಗುತ್ತಿದೆ. ಆದರೂ ಈ ಸಂಬಂಧ ಭಾರತ ಸೇರಿದಂತೆ ಬೇರೆ ರಾಷ್ಟ್ರಗಳಿಗೂ ಸಮಸ್ಯೆಯೇ ಆಗಿ ಕಾಣುತ್ತಿದೆ. ಇದನ್ನೂ ಓದಿ: ಅಮೆರಿಕ ವಿರೋಧದ ನಡ್ವೆ ಪ್ಯಾಲೆಸ್ಟೀನ್‌ಗೆ ದೇಶದ ಮಾನ್ಯತೆ ನೀಡಲು ಬ್ರಿಟನ್ ಸಿದ್ಧತೆ