ಬೆಂಗಳೂರು: ಯಾವುದೇ ಕಾರಣಕ್ಕೂ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲ್ಲ, ದಿನಕ್ಕೆ 10% ಸಮೀಕ್ಷೆ ಕಾರ್ಯ (Caste Census) ಮುಗಿಯಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸಿಎಂ (Siddaramaiah) ಟಾರ್ಗೆಟ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮಂದಗತಿ ಸರ್ಕಾರಕ್ಕೆ ತಲೆನೋವಾಗಿದ್ದು, ಚುರುಕು ಮುಟ್ಟಿಸಲು ಸ್ವತಃ ಸಿಎಂ ಸಿದ್ದರಾಮಯ್ಯ ಅಖಾಡಕ್ಕಿಳಿದಿದ್ದಾರೆ. ಗೃಹ ಕಚೇರಿ ಕೃಷ್ಣಾದಿಂದ 5 ಇಲಾಖೆಗಳ ಸಚಿವರು, ಜಿಲ್ಲಾಧಿಕಾರಿಗಳು, ಸಿಇಓಗಳ ಜೊತೆ ಸಿಎಂ, ಡಿಸಿಎಂ ವೀಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು. ಸಮೀಕ್ಷೆಯಲ್ಲಿ ಆಗುತ್ತಿರುವ ಲೋಪದೋಷಗಳಿಗೆ ಪರಿಹಾರ, ಸಮೀಕ್ಷೆ ನಿರಾಕರಿಸುವವರಿಗೆ ದಂಡಂ ದಶಗುಣಂ ಅಸ್ತ್ರ ಪ್ರಯೋಗದ ಬಗ್ಗೆ ಚರ್ಚಿಸಿದರು. ಇದನ್ನೂ ಓದಿ: ಭಾರತದ 38 ಬ್ಯಾಂಕುಗಳ ಮೂರು ಲಕ್ಷ ವಹಿವಾಟುಗಳ ದತ್ತಾಂಶ ಲೀಕ್?

ಇನ್ನು ಸಭೆ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾಲ್ಕು ದಿನಗಳಿಂದ ತಾಂತ್ರಿಕ ದೋಷ ಸಮಸ್ಯೆಯಿಂದ ಸರ್ವೇ ಕಾರ್ಯ ಕುಂಠಿತ ಆಗಿದೆ. ಈಗ ತಾಂತ್ರಿಕ ಸಮಸ್ಯೆಗಳು 90% ಪರಿಹಾರ ಆಗಿವೆ. ಉಳಿದ ಸಮಸ್ಯೆಗಳು ಇವತ್ತು ಪರಿಹಾರ ಆಗಲಿವೆ. ಹಿಂದುಳಿದ ವರ್ಗಗಳ ಆಯೋಗಕ್ಕೂ ಸೂಚಿಸಿದ್ದೇನೆ. ಇವತ್ತಿನಿಂದಲೇ ಸರ್ವೇ ಕೆಲಸ ಚುರುಕು ಆಗಲಿದೆ. ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರೊಳಗೆ ಸರ್ವೇ ಕೆಲಸ ಮುಗಿಸಬೇಕು ಎಂದು ತೀರ್ಮಾನಿಸಿದ್ದೇವೆ. ಯಾವುದೇ ಕಾರಣಕ್ಕೂ ದಿನಾಂಕ ವಿಸ್ತರಣೆ ಮಾಡಲ್ಲ ಎಂದರು. ಇದನ್ನೂ ಓದಿ: ‘ಹಣದ ಆಸೆಗೆ ಬಲಿಯಾಗಿದ್ದೇನೆ, ದಯಾಮಾಡಿ ಬಚಾವ್ ಮಾಡಿ’ – ಸುಂದರ ಗೌಡರ ಕಾಲಿಗೆ ಬಿದ್ದು ಗೋಗರೆದಿದ್ದ ಚಿನ್ನಯ್ಯ
ಇಲ್ಲಿ ತನಕ ದಿನಕ್ಕೆ 2%,3%,4% ಸರ್ವೇ ಆಗಿದೆ. ಈಗ ಪ್ರತಿದಿನ 10% ಸರ್ವೇ ಆಗಬೇಕು ಅಂತಾ ಸೂಚಿಸಿದ್ದೇನೆ. ಹಿಂದಿನ ಸರ್ವೇಯ ಗಣತಿದಾರರ ಗೌರವಧನ ಬಿಡುಗಡೆ ಮಾಡಿದ್ದೇವೆ. ಈಗಿನ ಗೌರವಧನವನ್ನ ಬಿಡುಗಡೆ ಮಾಡಿದ್ದೇವೆ, ಯಾರೂ ಸಂಶಯ ಪಡುವ ಅಗತ್ಯ ಇಲ್ಲ. ಶಿಕ್ಷಕರು ತಪ್ಪು ಕಲ್ಪನೆಯಿಂದ ತಿರಸ್ಕರಿಸುತ್ತಿದ್ದರು. ಎಲ್ಲರೂ ಒಪ್ಪಿ ಇವತ್ತಿನಿಂದ ಸರ್ವೇ ಕೆಲಸ ಪೂರ್ಣ ಆಗುತ್ತಿದೆ. ಗಣತಿಗೆ ಶಿಕ್ಷಕರು ಒಪ್ಪದಿದ್ದರೆ ಶಿಕ್ಷಕರ ಮೇಲೆ ಕಾನೂನು ಪ್ರಕಾರ ಕ್ರಮಕ್ಕೂ ಸೂಚಿಸಿದ್ದೇನೆ ಎಂದು ಎಚ್ಚರಿಕೆ ಕೊಟ್ಟರು. ಇದನ್ನೂ ಓದಿ: ಎಸ್‌ಐಟಿ ತನಿಖೆಗೆ ವೀರೇಂದ್ರ ಹೆಗಡೆ ಸ್ವಾಗತ: ನಾವು ಯಾವಾಗಲೂ ಒಳ್ಳೆಯದನ್ನೇ ಮಾಡೋದು ಎಂದ ಸಿಎಂ
ಆನ್‌ಲೈನ್‌ನಲ್ಲೂ ಕೂಡ ಸರ್ವೇಯಲ್ಲಿ ಭಾಗವಹಿಸಬಹುದು. ಮನೆಗಳು ಬೀಗ ಹಾಕಿ ಕೆಲಸಕ್ಕೆ ಹೋಗಿ ಅವರ ಮನೆಗೆ ಸ್ಟಿಕ್ಕರ್ ಅಂಟಿಸಿ ಮುಂದಿನ ಡೇಟ್ ಕೊಡ್ತಾರೆ, ಮನೆಯವರಿಗೆ ಮಾಹಿತಿ ಕೊಡುತ್ತಾರೆ. ಕೋರ್ಟ್ ಆದೇಶ ಪಾಲಿಸಿಯೇ ಸರ್ವೇ ಮಾಡುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರು, ಪ್ರಾದೇಶಿಕ ಆಯುಕ್ತರು, ಜಿಲ್ಲಾಧಿಕಾರಿಗಳು ನಿತ್ಯ ಮಾನಿಟರ್ ಮಾಡುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ದೀಪಾವಳಿ ಸಮಯದಲ್ಲಿ ಮಾಲಿನ್ಯ ಭೀತಿ – ದೆಹಲಿಯಲ್ಲಿ ಪಟಾಕಿ ಮಾರಾಟ ನಿಷೇಧ
ಸಿಎಂ ಸಭೆಯ ಹೈಲೈಟ್ಸ್:
*ಇಂದಿನಿಂದ ಸಮೀಕ್ಷೆ ಕಾರ್ಯವನ್ನ ಚುರುಕುಗೊಳಿಸಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ.
*ಸಮೀಕ್ಷೆ ಕಾರ್ಯಕ್ಕೆ ಯಾವುದೇ ತಾಂತ್ರಿಕ ತೊಂದರೆಗಳು ಉಂಟಾಗದಂತೆ ಎಚ್ಚರಿಕೆ ವಹಿಸಬೇಕು.
*ರಾಜ್ಯದಲ್ಲಿ ಒಟ್ಟು 1,43,81,702 ಕುಟುಂಬಗಳ ಸಮೀಕ್ಷೆ ಕಾರ್ಯವನ್ನು ನಡೆಸಬೇಕಾಗಿದೆ.
*ಇದುವರೆಗೆ 2,76,016 ಕುಟುಂಬಗಳ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಲಾಗಿದೆ.
*ಸಮೀಕ್ಷೆ ಕಾರ್ಯಕ್ಕೆ ಒಟ್ಟು 1,20,728 ಗಣತಿದಾರರನ್ನು ನಿಯೋಜಿಸಲಾಗಿದೆ. ಒಟ್ಟು 1,22,085 ಗಣತಿ ಬ್ಲಾಕ್‌ಗಳನ್ನು ಗುರುತಿಸಲಾಗಿದೆ.
*ಅಕ್ಟೋಬರ್ 7ರ ಒಳಗಾಗಿ ಗಣತಿ ಕಾರ್ಯ ಪೂರ್ಣಗೊಳ್ಳಬೇಕು.
*ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಶಿಕ್ಷಕರು ತಮಗೆ ವಹಿಸಲಾಗಿರುವ ಕಾರ್ಯವನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು.
*ಯಾವುದೇ ಶಿಕ್ಷಕರು ಗಣತಿ ಕಾರ್ಯಕ್ಕೆ ಅಸಹಕಾರ ತೋರಿಸಬಾರದು. ಇದು ಸರ್ಕಾರಿ ಕೆಲಸವಾಗಿದ್ದು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಬಾರದು.
*ನಿರ್ಲಕ್ಷ್ಯ ವಹಿಸುವ ಗಣತಿದಾರರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು.
*ಶಿಕ್ಷಕರಿಗೆ ಗೌರವಧನದ ಬಗ್ಗೆ ಯಾವುದೇ ಅನುಮಾನ ಬೇಡ, ಈಗಾಗಲೇ ಗೌರವಧನವನ್ನು ಬಿಡುಗಡೆ ಮಾಡಿದ್ದೇವೆ.
*ಯಾವುದೇ ಕಾರಣಕ್ಕೂ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲ್ಲ ಎಂದಿರುವ ಸಿಎಂ.
*ಜಿಲ್ಲಾ ಉಸ್ತುವಾರಿ ಸಚಿವರು, ಪ್ರಾದೇಶಿಕ ಆಯುಕ್ತರು ನಿತ್ಯ ಮಾನಿಟರ್ ಮಾಡಬೇಕು.

