– ಅರ್ಜಿದಾರರ ವಾದದಲ್ಲಿ ಹುರುಳಿರುವಂತಿದೆ: ಹೈಕೋರ್ಟ್
– ಜನಗಣತಿ ಮಾಡುತ್ತಿಲ್ಲ ಕೇವಲ ಸರ್ವೆ ಮಾಡುತ್ತಿದ್ದೇವೆ: ರಾಜ್ಯ ಸರ್ಕಾರ
– ರಾಜ್ಯ ಸರ್ಕಾರ ಹೊಸ ಜಾತಿಯನ್ನು ಸೃಷ್ಟಿಸಿದೆ
ಬೆಂಗಳೂರು:ಕರ್ನಾಟಕ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಗೆ ಮಧ್ಯಂತರ ತಡೆ ನೀಡುವಂತೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ.
ಮುಖ್ಯ ನ್ಯಾ.ವಿಭು ಬಖ್ರು ಮತ್ತು ನ್ಯಾ.ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠದಲ್ಲಿ ವೀರಶೈವ ಲಿಂಗಾಯತ ಮಹಾಸಭಾ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಮತ್ತು ರಾಜ್ಯ ಒಕ್ಕಲಿಗರ ಸಂಘ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು.ಕೇಂದ್ರ ಸರ್ಕಾರ ಈ ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದರೆ ರಾಜ್ಯ ಸರ್ಕಾರ ಬಲವಾಗಿ ಸಮರ್ಥಿಸಿಕೊಂಡಿತು.
ವಿಚಾರಣೆ ಸಂದರ್ಭದಲ್ಲಿ ನಾವು ಅಮಿಕಸ್ ಕ್ಯೂರಿಯನ್ನು ನೇಮಿಸುವ ಚಿಂತನೆ ಮಾಡಿದ್ದೇವೆ ಎಂದು ಕೋರ್ಟ್ ಹೇಳಿತು.
ವೀರಶೈವ ಲಿಂಗಾಯತ ಮಹಾಸಭಾದ ಪರವಾಗಿ ಪ್ರಭುಲಿಂಗ ನಾವದಗಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಪರ ವಿವೇಕ್ ಸುಬ್ಬಾರೆಡ್ಡಿ, ರಾಜ್ಯ ಒಕ್ಕಲಿಗರ ಸಂಘದ ಪರವಾಗಿ ಅಶೋಕ್ ಹಾರನಹಳ್ಳಿ ವಾದಿಸಿದರು.ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಅರವಿಂದ ಕಾಮತ್, ರಾಜ್ಯ ಸರ್ಕಾರದ ಪರವಾಗಿ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿದರು.
ಯಾರ ವಾದ ಏನು?
ವೀರಶೈವ ಲಿಂಗಾಯತ ಮಹಾಸಭಾ
ರಾಜ್ಯ ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಎಂದು ಹೇಳಿ ಸಮೀಕ್ಷೆ ಪ್ರಾರಂಭ ಮಾಡಿದೆ. ಹಿಂದುಳಿದ ವರ್ಗದ ಆಯೋಗದ ಮೂಲಕ ಸಂವಿಧಾನದ 342 ವಿಧಿಯನ್ನು ತಳ್ಳಿ ಸಮೀಕ್ಷೆಯನ್ನು ಮಾಡುತ್ತಿದೆ. ಅಷ್ಟೇ ಅಲ್ಲದೇ ಸಮೀಕ್ಷೆ ನಡೆಸುವಾಗ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ.
ಈ ಹಿಂದೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿದೆ. ಆ ಸಮೀಕ್ಷೆಯ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದ ಕಾರಣ ಈಗ ಮತ್ತೊಮ್ಮೆ ಸಮೀಕ್ಷೆ ನಡೆಸುತ್ತಿದೆ. ಇದು ಕೇವಲ ಸಾಮಾಜಿಕ, ಶೈಕ್ಷಣಿಕ ಗಣತಿಯಲ್ಲ. ಇಲ್ಲಿ ಜನ, ಜಾತಿ ಎಲ್ಲವನ್ನೂ ಕೂಡ ಲೆಕ್ಕ ಹಾಕುತ್ತಿದ್ದಾರೆ.ಕೇಂದ್ರ ಸರ್ಕಾರದ ಅಧಿಕಾರವನ್ನು ರಾಜ್ಯ ಸರ್ಕಾರ ಬಳಸುತ್ತಿದೆ.
ರಾಜ್ಯ ಒಕ್ಕಲಿಗರ ಸಂಘ
ಸರ್ಕಾರ ಜನಗಣತಿಯನ್ನು ಮಾಡುವುದರ ಜೊತೆಗೆ ಜಾತಿ ಲೆಕ್ಕಾಚಾರವೂ ನಡೆಯುತ್ತಿದೆ. ಇದರಿಂದಾಗಿ ಒಂದು ಜಾತಿ ಜನಸಂಖ್ಯೆ ಹೆಚ್ಚಾಗಬಹುದು ಕಡಿಮೆಯಾಗಬಹುದು. ಈ ಹಿಂದೆ ರಾಜ್ಯ ಸರ್ಕಾರ ಸಮೀಕ್ಷೆ ನಡೆಸಿತ್ತು. ಆದರೆ ಆ ಸಮೀಕ್ಷೆಯ ಬಗ್ಗೆ ಇಲ್ಲಿಯವರೆಗೆ ಯಾವುದೇ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ.
ಒಕ್ಕಲಿಗ ಕ್ರಿಶ್ಚಿಯನ್, ಬ್ರಾಹ್ಮಣ ಕ್ರಿಶ್ಚಿಯನ್ ಹೆಸರಿನಲ್ಲಿ ರಾಜ್ಯ ಸರ್ಕಾರ ಹೊಸ ಜಾತಿಗಳನ್ನು ಸೃಷ್ಟಿ ಮಾಡಿದೆ. ಯಾವುದೇ ಅಂಕಿ ಅಂಶದ ವಿಶ್ಲೇಷಣೆ ಇಲ್ಲದೆ ಜನಗಣತಿ ಮಾಡಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ.ಇದು ಕೇವಲ ಸಾಮಾಜಿಕ, ಶೈಕ್ಷಣಿಕ ಗಣತಿಯಲ್ಲ. ಕೇಂದ್ರ ಸರ್ಕಾರದ ಅಧಿಕಾರವನ್ನು ರಾಜ್ಯ ಸರ್ಕಾರ ಬಳಸುತ್ತಿರುವುದರಿಂದ ಸಮೀಕ್ಷೆಗೆ ತಡೆ ನೀಡಬೇಕು.
ಕರ್ನಾಟಕ ಸರ್ಕಾರ ವಾದ ಏನು?
ಇವತ್ತಿನಿಂದ ಸಮೀಕ್ಷೆ ಪ್ರಾರಂಭ ಆಗುತ್ತಿದ್ದು ಅಕ್ಟೋಬರ್ 6 ರವರೆಗೆ ನಡೆಯಲಿದೆ.ಕೋರ್ಟ್ ರಜಾವಧಿ ಮುಕ್ತಾಯವಾಗುವ ಒಳಗಡೆ ಸಮೀಕ್ಷೆ ಮುಗಿಯಲಿದೆ. ಇದೇ ರೀತಿಯ ಪ್ರಕರಣದಲ್ಲಿ ಹಿಂದೆಯೂ ಮಧ್ಯಂತರ ತಡೆ ನೀಡಿಲ್ಲ. ಜನಗಣತಿ ಮಾಡುತ್ತಿಲ್ಲ ಕೇವಲ ಸರ್ವೆ ಮಾಡುತ್ತಿದ್ದೇವೆ. ಈಗ ರಾಜ್ಯ ಸರ್ಕಾರ ನಡೆಸುತ್ತಿರುವುದು ಹಿಂದುಳಿದ ವರ್ಗಗಳ ಕಾಯ್ದೆ ಅಡಿ ಸಮೀಕ್ಷೆ.ಇಂದಿರಾ ಸಾಹ್ನಿ ಪ್ರಕರಣದಲ್ಲಿ ದತ್ತಾಂಶ ಸಂಗ್ರಹಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಕೋರ್ಟ್ ಹೇಳಿದೆ. ಈಗಾಗಲೇ ರಾಜ್ಯ ಸರ್ಕಾರ 450 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ.
ಸಾಮಾಜಿಕ ಮತ್ತು ಆರ್ಥಿಕ ಹಿಂದುಳಿದಿರುವಿಕೆ ಪತ್ತೆ ಮಾಡುವ ತಿದ್ದುಪಡಿಯನ್ನು 11 ವರ್ಷಗಳ ಬಳಿಕ ಪ್ರಶ್ನಿಸಲಾಗಿದೆ. 2014ರಲ್ಲಿ ಸಮೀಕ್ಷೆ ಆರಂಭಿಸಿ, 2016ರಲ್ಲಿ ಸಮೀಕ್ಷೆ ಮುಗಿದಿದ್ದು 2024ರಲ್ಲಿ ವರದಿ ನೀಡಲಾಗಿತ್ತು. ಹಿಂದಿನ ದತ್ತಾಂಶವನ್ನು ಅಪ್‌ಡೇಟ್ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ. ದಸರಾ ರಜೆ ಇರುವುರಿಂದ ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರನ್ನು ಸಮೀಕ್ಷೆಗೆ ಬಳಸಲಾಗುತ್ತಿದೆ. ಈಗಾಗಲೇ ಕೆಲಸ ಆರಂಭವಾಗಿರುವ ಕಾರಣ ಯಾವುದೇ ಕಾರಣಕ್ಕೂ ಮಧ್ಯಂತರ ಆದೇಶ ನೀಡಬಾರದು.
ಕೇಂದ್ರದ ವಾದ ಏನು?
ಈ ಸಮೀಕ್ಷೆಯಲ್ಲಿ ಹೊಸದೇನು ಇಲ್ಲ. ಇದರ ಉದ್ದೇಶ, ಜಾತಿ, ಜನಗಣತಿಯಾಗಿದ್ದು ನಮ್ಮ ವಿರೋಧವಿದೆ.
ಕೋರ್ಟ್ ಹೇಳಿದ್ದೇನು?
ದತ್ತಾಂಶ ಸಂಗ್ರಹಿಸುವುದು ಮುಗಿದರೆ ಅರ್ಜಿ ಅನೂರ್ಜಿತವಾಗುತ್ತವೆ ಎಂಬುದು ಅರ್ಜಿದಾರರ ಆತಂಕವಾಗಿದೆ. ಅರ್ಜಿದಾರರ ವಾದದಲ್ಲಿ ಹುರುಳಿರುವಂತಿದೆ. ಈಗ ಸರ್ವೆಗೆ ಅವಕಾಶ ನೀಡಿದರೆ ಅಂಕಿ ಅಂಶ ಸಂಗ್ರಹವಾಗುತ್ತದೆ. ಅಂಕಿ ಅಂಶ ಸರ್ವೆ ಕೂಡಾ ಗಣತಿಯ ಸ್ವರೂಪದಲ್ಲಿದೆ. ಒಮ್ಮೆ ಅಂಕಿ ಅಂಶ ಸಂಗ್ರಹವಾದರೆ, ಮರಳಿಸಲು ಸಾಧ್ಯವಿಲ್ಲ. ಹೀಗಾಗಿ ನಾಳೆ ಮಧ್ಯಾಹ್ನ 2:30 ಕ್ಕೆ ಮಧ್ಯಂತರ ತಡೆಯಾಜ್ಞೆ ಬಗ್ಗೆ ವಿಚಾರಣೆ ನಡೆಸಲಾಗುವುದು.