ಮೈಸೂರು: ಯಾವುದೋ ರಾಜಕೀಯಕ್ಕಾಗಿ, ದ್ವೇಷ ಮಾಡುವುದಕ್ಕಾಗಿ, ಯಾರನ್ನೋ ಓಲೈಸಲು ರಾಜಕೀಯ ಮಾಡಬಾರದು. ಓಲೈಕೆ ರಾಜಕಾರಣ ಅಪಾಯಕಾರಿ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದರು.
ಚಾಮುಂಡಿ ಬೆಟ್ಟದಲ್ಲಿ ದಸರಾ (Mysuru Dasara 2025) ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ವೇಳೆ, ಶ್ರೀರಂಗಪಟ್ಟಣದಲ್ಲಿ ಹೈದರಾಲಿ, ಟಿಪ್ಪು ಸುಲ್ತಾನ್ ದಸರಾ ಮಾಡಿದ್ದರು. ಈ ಇತಿಹಾಸ ಎಲ್ಲರಿಗೂ ಗೊತ್ತಿರಬೇಕು. ಸ್ವಾರ್ಥಕ್ಕಾಗಿ ರಾಜಕೀಯಕ್ಕಾಗಿ ಇತಿಹಾಸ ತಿರುಚುವುದು ಅಕ್ಷ್ಮಮ್ಯ ಅಪರಾಧ ಎಂದು ವಿರೋಧಿಗಳನ್ನು ದೂರಿದರು. ಇದನ್ನೂ ಓದಿ: ದಸರೆ ಹಬ್ಬ ಮಾತ್ರ ಅಲ್ಲ, ಎಲ್ಲರನ್ನು ಒಳಗೊಳ್ಳುವ ಸಮನ್ವಯದ ಮೇಳ: ಬಾನು ಮುಷ್ತಾಕ್
ರಾಜಕೀಯ ಮಾಡುವುದಾದರೆ ಚುನಾವಣೆ ಇದೆ. ಆಗ ಮಾಡೋಣಾ, ಗೋಡಾ ಹೈ ಮೈದಾನಾ ಹೈ. ರಾಜಕೀಯ ಮಾಡುವುದಾದರೆ ಅಲ್ಲಿ ಮಾಡೋಣಾ. ಸಾಹಿತಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟಿಸಲು ಆಯ್ಕೆ ಮಾಡಿದ ನಿರ್ಧಾರವನ್ನು ರಾಜ್ಯದ ಬಹುತೇಕ ಜನ ಒಪ್ಪಿದ್ದಾರೆ. ಅವರು ಹುಟ್ಟಿನಿಂದ ಮುಸ್ಲಿಂ ಆಗಿರಬಹುದು, ಆದರೆ ಅವರು ಮನುಷ್ಯರು. ಮನುಷ್ಯರು ಧರ್ಮದ ಆಧಾರದ ಮೇಲೆ ದ್ವೇಷಿಸಬಾರದು. ಧರ್ಮದ ಆಧಾರದ ಮೇಲೆ ದ್ವೇಷ ಮಾಡಿದರೆ ಅದು ಮನುಷ್ಯತ್ವದ ಲಕ್ಷಣ ಅಲ್ಲ ಎಂದು ಬಾನು ಮುಷ್ತಾಕ್ ಆಯ್ಕೆ ವಿರೋಧಿಸಿದವರಿಗೆ ತಿರುಗೇಟು ಕೊಟ್ಟರು.
ಬಾನು ಮುಷ್ತಾಕ್ (Banu Mushtaq) ಅವರನ್ನು ಆಯ್ಕೆ ಮಾಡಿದ್ದರ ವಿರುದ್ಧ ಸಲ್ಲಿಸಿದ್ದ ಅರ್ಜಿಗಳನ್ನು ಕೋರ್ಟ್ ತಿರಸ್ಕರಿಸಿದೆ. ಇದರಿಂದ ನಮ್ಮ ಸಂವಿಧಾನದ ಶಕ್ತಿ ತಿಳಿಯುತ್ತದೆ. ಎಲ್ಲರೂ ಸಂವಿಧಾನವನ್ನು ಅರಿತುಕೊಳ್ಳಬೇಕು. ಮೇಲೂ ಕೀಳು ಅಸಮಾನತೆ ತೊಲಗಬೇಕು. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ (Congress) ಕೆಲಸ ಮಾಡುತ್ತಿದೆ ಎಂದು ಸಮರ್ಥಿಸಿಕೊಂಡರು.
ಭಾಷಣದ ಆರಂಭದ ವೇಳೆ ಕಾರ್ಯಕ್ರಮದಿಂದ ಎದ್ದು ಹೋಗುತ್ತಿದ್ದ ಜನರ ಮೇಲೆ ಸಿಎಂ ಗರಂ ಆದರು. ಸ್ವಲ್ಪ ಹೊತ್ತು ಕುಳಿತು ಕೊಳ್ಳಲು ಆಗಲ್ವಾ? ಕುಳಿತು ಕೊಳ್ಳಲು ಆಗದವರು ಯಾಕೆ ಕಾರ್ಯಕ್ರಮಕ್ಕೆ ಬರ್ತಿರಾ? ಎಂದು ರೇಗಿದ್ದಾರೆ. ಇದನ್ನೂ ಓದಿ: ಚಾಮುಂಡಿ ತಾಯಿ ಪೂಜೆ ವೇಳೆ ಬಾನು ಮುಷ್ತಾಕ್ ಭಾವುಕ