ಲಕ್ನೋ: ಇನ್‌ಸ್ಟಾಗ್ರಾಮ್‌ನಲ್ಲಿ ಅರಳಿದ ಪ್ರೀತಿ ಪ್ರಿಯತಮೆಯ ಭೀಕರ ಕೊಲೆಯಲ್ಲಿ ಕೊನೆಯಾದ ಪ್ರಕರಣ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಆಕಾಂಕ್ಷಾ (20) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಸೂರಜ್ ಕುಮಾರ್ ಉತ್ತಮ್ ಎಂದು ಗುರುತಿಸಲಾಗಿದೆ. ಇಬ್ಬರೂ ಲಿವ್ ಇನ್ (Live in Relationship) ಸಂಬಂಧದಲ್ಲಿದ್ದರು. ಯುವತಿಗೆ ಮತ್ತೊಬ್ಬನಿಗೆ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಆರೋಪಿ ಹತ್ಯೆಗೈದಿದ್ದಾನೆ. ಎರಡು ತಿಂಗಳ ಹಿಂದೆಯೇ ಈ ಕೊಲೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದಾವಣಗೆರೆ | ಡಿವೋರ್ಸ್ ವಿವಾದ – ಕೋರ್ಟ್‍ನಲ್ಲೇ ಪತ್ನಿಗೆ ಚಾಕು ಇರಿದ ಪತಿ
ಜುಲೈ 21 ರಂದು ಯುವತಿ ಬೇರೊಬ್ಬನ ಜೊತೆ ಮಾತಾಡುತ್ತಿದ್ದಾಳೆ ಎಂದು ಆರೋಪಿ ಗಲಾಟೆ ಮಾಡಿದ್ದ. ಈ ವೇಳೆ ಆಕೆಯ ತಲೆಯನ್ನು ಗೋಡೆಗೆ ಅಪ್ಪಳಿಸಿ, ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದ. ನಂತರ ತನ್ನ ಸ್ನೇಹಿತ ಆಶಿಶ್ ಕುಮಾರ್‌ಗೆ ಕರೆ ಮಾಡಿ ವಿಚಾರ ತಿಳಿಸಿದ್ದ. ಬಳಿಕ ಇಬ್ಬರು ಸೇರಿ ಆಕಾಂಕ್ಷಾಳ ಮೃತದೇಹವನ್ನು ಬ್ಯಾಗಿನಲ್ಲಿ ತುಂಬಿಸಿ 100 ಕಿ.ಮೀ ದೂರದಲ್ಲಿರುವ ಬಂಡಾಗೆ ಬೈಕ್‌ನಲ್ಲಿ ತೆರಳಿ ಯಮುನಾ ನದಿಗೆ ಎಸೆದಿದ್ದರು. ಇದಕ್ಕೂ ಮುನ್ನ ಸೂರಜ್ ಉತ್ತಮ್ ಶವ ತುಂಬಿದ ಬ್ಯಾಗ್‌ನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಎಂದು ತಿಳಿದುಬಂದಿದೆ.
ಆ.8ರಂದು ಯುವತಿಯ ತಾಯಿ ಆಕಾಂಕ್ಷ ನಾಪತ್ತೆಯಾದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಳು. ದೂರಿನಲ್ಲಿ ಸೂರಜ್ ಉತ್ತಮ್ ತನ್ನ ಮಗಳನ್ನು ಅಪಹರಿಸಿದ್ದಾನೆ ಎಂದು ಉಲ್ಲೇಖಿಸಿದ್ದರು. ದೂರಿನ ಅನ್ವಯ ಇತ್ತೀಚೆಗೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ವಿಚಾರಣೆ ವೇಳೆ ಸೆಲ್ಫಿ ಬಗ್ಗೆಯೂ ಹೇಳಿದ್ದು, ಆತನ ಮೊಬೈಲ್‌ನಿಂದ ಫೋಟೋ ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಆರೋಪಿ ಹಾಗೂ ಆತನಿಗೆ ಸಹಕರಿಸಿದ ಸ್ನೇಹಿತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಸೂರಜ್ ಕುಮಾರ್ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ. ಆಕಾಂಕ್ಷಾ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಇಬ್ಬರ ನಡುವೆ ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಪರಿಚಯವಾಗಿ ಪ್ರೀತಿ ಚಿಗುರೊಡೆದಿತ್ತು. ನಂತರ ಕಾನ್ಪುರದ ಬಾರಾದಲ್ಲಿ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಆಕಾಂಕ್ಷಾ, ಅಲ್ಲಿಂದ ಬಂದು ಹನುಮಂತ್ ವಿಹಾರ್‌ನ ಬಾಡಿಗೆ ಮನೆಯಲ್ಲಿ ಉತ್ತಮ್ ಜೊತೆ ವಾಸವಾಗಿದ್ದಳು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ದುಷ್ಕರ್ಮಿಗಳಿಂದ ಪ್ರಿಯಕರನ ಹತ್ಯೆ – ಮನನೊಂದು ಆತ್ಮಹತ್ಯೆಗೆ ಶರಣಾದ ಯುವತಿ