ಬಾಗಲಕೋಟೆ: ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ (Jaya Mruthyunjaya Swamiji) ಅವರನ್ನ ಪೀಠದಿಂದಲೇ ಉಚ್ಚಾಟನೆ ಮಾಡಲಾಗಿದೆ.
ಕಳೆದ ಕೆಲ ದಿನಗಳಿಂದ ಸ್ವಾಮೀಜಿ ಮತ್ತು ಕಾಶಪ್ಪನವರ ನಡುವೆ ನಡೆಯುತ್ತಿದ್ದ ವಿವಾದ ಇದೀಗ ಉಚ್ಚಾಟನೆ ಹಂತಕ್ಕೆ ಬಂದುನಿಂತಿದೆ. ಕೂಡಲಸಂಗಮ (Kudala Sangama) ಪಂಚಮಸಾಲಿ ಟ್ರಸ್ಟ್‌ನ ಕಾರ್ಯಕಾರಣಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದ್ದು, ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಶ್ರೀಗಳ ಬಗ್ಗೆ ಸಾಕಷ್ಟು ದೂರುಗಳು ಇವೆ. ಟ್ರಸ್ಟ್‌ನ ಮಾತು ಕೇಳಲ್ಲ, ಅವರ ವಿರುದ್ಧ ದೊಡ್ಡ ಕಡತವೇ ಇದೆ. ಅದಕ್ಕೆ ಪೀಠದಿಂದ ಉಚ್ಛಾಟಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಅವರ ವಿರುದ್ಧ ದೂರಗಳ ಪಟ್ಟಿ ಬಹಳ ಇದೆ. ಅದನ್ನು ಇಲ್ಲಿ ಬಹಿರಂಗ ಪಡೆಸಲು ಆಗಲ್ಲ. ಸ್ವಾಮೀಜಿ ತಮಗೆ ಸ್ವಂತ ಆಸ್ತಿ ಮಾಡಿಕೊಳ್ಳಬಾರದು ಅಂತ ನಮ್ಮ ಬೈಲಾದಲ್ಲಿ ಇದೆ. ಆದ್ರೆ, ಸ್ವಾಮೀಜಿ ಸ್ವಂತಕ್ಕೆ ಆಸ್ತಿ ಮಾಡಿದ್ದಾರೆ ಎಂದು ದೂರಿದರು.
ಮುಂದುವರಿದು.. ಸಮಾಜ ಸಂಘಟನೆ ಬದಲಿಗೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಣಕಾಸು ವಿಚಾರದಲ್ಲಿ ಹತ್ತಾರು ದೂರುಗಳು ಇವೆ. ಈ ಬಗ್ಗೆ ಸ್ವಾಮೀಜಿಗೆ ಹಿಂದೆ 2014ರಲ್ಲೇ ನೋಟಿಸ್ ಕೊಟ್ಟಿದ್ದೇವು. ಇವತ್ತು ಕೂಡಲಸಂಗಮದಲ್ಲಿ ನಡೆದ ಟ್ರಸ್ಟಿಗಳ ಸಭೆಯಲ್ಲಿ ಸ್ವಾಮೀಜಿಯನ್ನ ಪೀಠದಿಂದ ಉಚ್ಛಾಟಿಸಲು 30 ಜನ ಟ್ರಸ್ಟಿಗಳ ಪೈಕಿ ಬಹುಮತದ ಟ್ರಸ್ಟಿಗಳು ಒಪ್ಪಿಗೆ ನೀಡಿದರು ತಿಳಿಸಿದರು.