ಕಾರವಾರ/ಬೀದರ್: ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಊಟಕ್ಕೆ ವಿಷ ಸೇರಿಸಿ ಪತ್ನಿಯನ್ನು ಪತಿ ಹತ್ಯೆಗೈದಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಚಿತ್ತಾಕುಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೀದರ್ ಮೂಲದ ಪರ್ವಿಂದ್ ಬೇಗಮ್ (45) ಹತ್ಯೆಯಾದ ಮಹಿಳೆ. ಆರೋಪಿಯನ್ನು ಇಸ್ಮಾಯಲ್ ದಫೆದಾರ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪರಿಸರ ಅಭಿವೃದ್ಧಿ ಸಂರಕ್ಷಣೆಗೆ ಮಾಧ್ಯಮಗಳು ಹೆಚ್ಚು ಒತ್ತು ನೀಡಬೇಕು: ಸಿದ್ದರಾಮಯ್ಯ
ಬೀದರ್‌ನ (Bidar) ಪರ್ವಿಂದ್ ಬೇಗಮ್ ಹಾಗೂ ಇಸ್ಮಾಯಲ್ ದಫೆದಾರ್‌ಗೆ ಆರು ಜನ ಮಕ್ಕಳಿದ್ದು, ಎಲ್ಲರಿಗೂ ಮದುವೆಯಾಗಿದೆ. ಹೀಗಾಗಿ ದಂಪತಿಗಳಿಬ್ಬರೇ ಉತ್ತರ ಕನ್ನಡದಲ್ಲಿ ವಾಸವಾಗಿದ್ದರು. ಇತ್ತೀಚಿಗೆ ಬೀದರ್‌ನಲ್ಲಿ ಪರಪುರುಷನ ಜೊತೆ ಬೇಗಮ್‌ಗೆ ಅಕ್ರಮ ಸಂಬಂಧವಿದೆ ಎಂದು ಇಸ್ಮಾಯಲ್‌ಗೆ ಶಂಕೆ ವ್ಯಕ್ತವಾಗಿತ್ತು. ಇದರಿಂದ ಪತ್ನಿಯ ವಿರುದ್ಧ ಸಿಟ್ಟಾಗಿದ್ದ ಇಸ್ಮಾಯಲ್ ಸ್ನೇಹಿತನ ಜೊತೆ ಸೇರಿಕೊಂಡು ಹತ್ಯೆಗೆ ಸ್ಕೆಚ್ ಹಾಕಿದ್ದ.
ಪ್ಲ್ಯಾನ್‌ನಂತೆ ಅನಾರೋಗ್ಯದ ಕಾರಣವನ್ನು ನೆಪವಾಗಿಟ್ಟುಕೊಂಡು ಹೆಂಡತಿಯನ್ನು ಪುಸಲಾಯಿಸಿ ಕಾರವಾರ ತಾಲೂಕಿನ ಹಳಗಕ್ಕೆ ಕರೆತಂದಿದ್ದ. ಬಳಿಕ ಸ್ನೇಹಿತ ಕೂಡ ಕಾರಿನಲ್ಲಿ ಅದೇ ಜಾಗಕ್ಕೆ ಬಂದಿದ್ದ. ಈ ವೇಳೆ ತನ್ನ ಸ್ನೇಹಿತನನ್ನು ಪರಿಚಯಿಸಿ, ಒಟ್ಟಿಗೆ ಕಾರಿನಲ್ಲಿ ಬೀದರ್‌ಗೆ ಹೋಗಲು ಆಕೆಯನ್ನು ಒಪ್ಪಿಸಿದ್ದಾನೆ. ಮಾರ್ಗಮಧ್ಯೆ ಊಟ ಮಾಡುವ ನೆಪದಲ್ಲಿ ಕಾರು ನಿಲ್ಲಿಸಿ, ಊಟಕ್ಕೆ ವಿಷ ಹಾಕಿ ನೀಡಿದ್ದಾರೆ. ಸ್ವಲ್ಪ ಹೊತ್ತಿನಲ್ಲಿ ಆಕೆ ಅಸ್ವಸ್ಥಳಾಗಿ ಸಾವನ್ನಪ್ಪಿದ್ದಳು. ಬಳಿಕ ಆಕೆಯ ಶವವನ್ನು ಅಣಶಿ ಘಟ್ಟದ ಅರಣ್ಯದಲ್ಲಿ ಎಸೆದಿದ್ದ. ಮಾರನೇ ದಿನ ಚಿತ್ತಾಕುಲ ಠಾಣೆಗೆ ಬಂದು ಪತ್ನಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದ.
ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಪತಿಯ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಆಗ ತಾನೇ ವಿಷವಿಕ್ಕಿ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಜೊತೆಗೆ ಆಕೆಯ ಶವವನ್ನು ಎಸೆದ ಜಾಗವನ್ನು ಕೂಡ ತೋರಿಸಿದ್ದಾನೆ.
ಘಟನೆ ಸಂಬಂಧ ಪತಿ ಇಸ್ಮಾಯಲ್ ದಫೆದಾರ್ ಹಾಗೂ ಆತನ ಸ್ನೇಹಿತನ ವಿರುದ್ಧ ಪ್ರಕರಣ ದಾಖಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಾರವಾರದ ಕ್ರಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ.ಇದನ್ನೂ ಓದಿ: ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಾಂತ ಧಾರಾಕಾರ ಮಳೆ – ಅಂಡರ್ ಪಾಸ್ ಮುಳುಗಡೆ; ಬೆಳೆಗಳು ಜಲಾವೃತ