– ವಾಹನ ಬಿಟ್ಟು ಪರಾರಿಯಾಗಿದ್ದ ಗ್ರಾಮದಲ್ಲೇ ಬ್ಯಾಗ್ ಪತ್ತೆ
ವಿಜಯಪುರ: ಚಡಚಣ ಎಸ್‌ಬಿಐ ಬ್ಯಾಂಕ್ ದರೋಡೆ (SBI Bank Robbery) ಪ್ರಕರಣದಲ್ಲಿ ದೋಚಿದ್ದ ಚಿನ್ನಾಭರಣ ಪತ್ತೆ ಹಚ್ಚುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಸದ್ಯ ಚಿನ್ನಾಭರಣ, ನಗದಿನ ಬ್ಯಾಗ್ ಪತ್ತೆಯಾಗಿದೆ. ದರೋಡೆಗೆ ಬಳಿಸಿದ ವಾಹನದಲ್ಲೂ ಸ್ವಲ್ಪ ಹಣ, ಚಿನ್ನಾಭರಣ ಪತ್ತೆಯಾಗಿದೆ.
ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ ಕಳೆದ 16 ರಂದು ಸಂಜೆ 6ರ ಸುಮಾರಿಗೆ ದರೋಡೆ ನಡೆದಿತ್ತು. ಐದು ಜನ ದರೋಡೆಕೋರರ ತಂಡ ಪಿಸ್ತೂಲ್ ತೋರಿಸಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಪರಾರಿಯಾಗುವ ವೇಳೆ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಂಗಳವಾಡೆ ತಾಲೂಕಿನ ಹುಲ್ಲಜಂತಿ ಗ್ರಾಮದಲ್ಲಿ ದರೋಡೆಕೊರರ ವಾಹನ ಬೈಕ್ ಒಂದಕ್ಕೆ ಡಿಕ್ಕಿಯಾಗಿ ಗಲಾಟೆ ನಡೆದಿತ್ತು. ಆಗ ವಾಹನವನ್ನು ಅಲ್ಲೆ ಬಿಟ್ಟು ದರೋಡೆಕೋರರು ನಗದು, ಚಿನ್ನಾಭರಣದ ಬ್ಯಾಗ್ ತೆಗೆದುಕೊಂಡು ಪರಾರಿಯಾಗಿದ್ದರು. ಆಗ ವಾಹನದಲ್ಲಿ ಚಿನ್ನಾಭರಣದ ಪ್ಯಾಕೆಟ್ ಸಿಕ್ಕಿದ್ದವು. ಆದರೆ, ಇದೀಗ ಮತ್ತೊಂದು ಬ್ಯಾಗ್ ಪತ್ತೆಯಾಗಿದೆ. ಇದನ್ನೂ ಓದಿ: 1 ಕೋಟಿ ನಗದು, 20 ಕೆಜಿ ಚಿನ್ನ ಸೇರಿ 21 ಕೋಟಿ ದರೋಡೆಯಾಗಿದೆ – ಎಸ್ಪಿ ಲಕ್ಷ್ಮಣ ನಿಂಬರಗಿ
ನಿನ್ನೆ ಮಧ್ಯಾಹ್ನ ಮಹಾರಾಷ್ಟ್ರ ಪೊಲೀಸರು ಹಾಗೂ ವಿಜಯಪುರ ಪೊಲೀಸರು ಹುಲ್ಲಜಂತಿ ಗ್ರಾಮದಲ್ಲಿ ಸಭೆ ನಡೆಸಿದ ಗ್ರಾಮಸ್ಥರಲ್ಲಿ ದರೋಡೆಕೋರನ ಹಾಗೂ ಕಳ್ಳತನ ಬ್ಯಾಗ್‌ಗಳ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದರು. ಇದಾದ ನಂತರ ಪೊಲೀಸರು ಹುಲ್ಲಜಂತಿ ಗ್ರಾಮದ ತೀವ್ರ ಶೋಧ ಕಾರ್ಯ ಮಾಡಿದ್ದರು. ಸಂಜೆ 5 ಗಂಟೆ ಸುಮಾರಿಗೆ ಗ್ರಾಮದ ಒಂದು ಪಾಳುಬಿದ್ದ ಮನೆಯ ಮೇಲ್ಛಾವಣಿಯಲ್ಲಿ ಒಂದು ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್‌ನಲ್ಲಿ 41.04 ಲಕ್ಷ ನಗದು, 6.54 ಕೆಜಿ ಚಿನ್ನಾಭರಣ ಪತ್ತೆಯಾಗಿದೆ. ಇನ್ನು ಪೊಲೀಸರ 8 ತಂಡಗಳನ್ನು ಮಾಡಿ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಸ್ಪಷ್ಟನೆ ನೀಡಿದ್ದಾರೆ.