– ಭಾರತದ ಸರ್ಕಾರದ ಕೋರಿಕೆ ಮೇಲೆ ಪಾಕ್‌ನಲ್ಲಿ ಉಗ್ರರ ಜೊತೆ ಸಭೆ
– ದೆಹಲಿ ಹೈಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಮಲಿಕ್ ಉಲ್ಲೇಖ
ನವದೆಹಲಿ: ಲಷ್ಕರ್-ಎ-ತೈಬಾ ((LeT) ಸಂಸ್ಥಾಪಕ ಮತ್ತು 26/11 ದಾಳಿಯ ಮಾಸ್ಟರ್‌ಮೈಂಡ್ ಹಫೀಜ್ ಸಯೀದ್‌ನನ್ನು (Hafiz Saeed) ಭೇಟಿಯಾದ ನಂತರ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ (Manmohan Singh) ವೈಯಕ್ತಿಕವಾಗಿ ತನಗೆ ಧನ್ಯವಾದ ಹೇಳಿದ್ದರು ಎಂದು ಭಯೋತ್ಪಾದಕ ಯಾಸಿನ್ ಮಲಿಕ್ (Yasin Malik) ಹೇಳಿದ್ದು ಈಗ ದೇಶದಲ್ಲಿ ಬಿರುಗಾಳಿ ಎಬ್ಬಿಸಿದೆ.
ಹೌದು. ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಸದ್ಯ ತಿಹಾರ್ ಜೈಲಿನಲ್ಲಿರುವ ಜಮ್ಮು ಮತ್ತು ಕಾಶ್ಮೀರ ಲಿಬರೇಷನ್ ಫ್ರಂಟ್ (JKLF) ಭಯೋತ್ಪಾದಕ ಯಾಸಿನ್ ಮಲಿಕ್ 2006 ರಲ್ಲಿ ಪಾಕಿಸ್ತಾನದಲ್ಲಿ ಹಫೀಜ್ ಸಯೀದ್‌ನನ್ನು ಭೇಟಿಯಾಗಿದ್ದ.
ಹಫೀಜ್ ಸಯೀದ್ ಭೇಟಿಯ ಬಳಿಕ ಮನಮೋಹನ್ ಸಿಂಗ್ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಹೇಳಿದ್ದರು ಎಂದು ಯಾಸಿನ್ ಮಲಿಕ್ ಆಗಸ್ಟ್ 25 ರಂದು ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾನೆ. ಈ ಭೇಟಿಯನ್ನು ನಾನು ನಿಗದಿ ಮಾಡಿರಲಿಲ್ಲ. ಬದಲಾಗಿ ಹಿರಿಯ ಭಾರತೀಯ ಗುಪ್ತಚರ ಅಧಿಕಾರಿಗಳ ಕೋರಿಕೆಯ ಮೇರೆಗೆ ಉಗ್ರರ ಜೊತೆ ಸಭೆ ಮಾಡಿದ್ದೆ ಎಂದು ತಿಳಿಸಿದ್ದಾನೆ.
ಅಫಿಡವಿಟ್‌ನಲ್ಲಿ ಹೇಳಿದ್ದೇನು?
2005 ರಲ್ಲಿ ಕಾಶ್ಮೀರದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಬಳಿಕ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೆ. ಈ ಭೇಟಿಗೂ ಮೊದಲು ಆಗಿನ ಗುಪ್ತಚರ ದಳದ (ಐಬಿ) ವಿಶೇಷ ನಿರ್ದೇಶಕ ವಿ.ಕೆ. ಜೋಶಿ ಅವರು ದೆಹಲಿಯಲ್ಲಿ ನನ್ನನ್ನು ಭೇಟಿ ಮಾಡಿದ್ದರು.
ಈ ಭೇಟಿಯ ಸಂದರ್ಭದಲ್ಲಿ ಪಾಕಿಸ್ತಾನ ರಾಜಕೀಯ ನಾಯಕರನ್ನು ಮಾತ್ರವಲ್ಲದೇ ಉಗ್ರ ಸಂಘಟನೆಗಳ ಜೊತೆ ಮಾತನಾಡಿ ಶಾಂತಿಗೆ ಸಹಕಾರ ನೀಡುವಂತೆ ಕೇಳಿಕೊಳ್ಳಬೇಕು ಎಂದು ಅವರು ನನ್ನ ಜೊತೆ ವಿನಂತಿ ಮಾಡಿದ್ದರು. ಪ್ರಧಾನಿ ಮನಮೋಹನ್ ಸಿಂಗ್ ಅವರ ಶಾಂತಿ ಪ್ರಯತ್ನದ ಭಾಗವಾಗಿ ಈ ಕೆಲಸ ಮಾಡಬೇಕು ಎಂದು ಕೇಳಿಕೊಂಡಿದ್ದರು. ಇದನ್ನೂ ಓದಿ: ಭಾರತದ ಸಿಂಧೂರ ದಾಳಿಗೆ ಮಸೂದ್ ಕುಟುಂಬ ಕಳೆದುಕೊಂಡ – ಪಾಕ್ ಉಗ್ರ ಇಲ್ಯಾಸ್ ಸಾಕ್ಷ್ಯ
ಉಗ್ರರ ಜೊತೆ ಸಭೆ ನಡೆಸಿ ನಾನು ಫೆಬ್ರವರಿ, 2006 ರಲ್ಲಿ ಭಾರತಕ್ಕೆ ಮರಳಿದೆ. ಮರಳಿದ ಬಳಿಕ ಐಬಿ ವಿಶೇಷ ನಿರ್ದೇಶಕ ವಿ ಕೆ ಜೋಶಿ ಅವರು ಮಾತುಕತೆಯ ಭಾಗವಾಗಿ ಹೋಟೆಲ್‌ನಲ್ಲಿ ನನ್ನನ್ನು ಭೇಟಿಯಾಗಿ ಪ್ರಧಾನಿಗೆ ತಕ್ಷಣ ವಿವರಿಸುವಂತೆ ವಿನಂತಿಸಿದರು. ಅಂದು ಸಂಜೆ ನಾನು ಆಗಿನ ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಅವರ ಸಮ್ಮುಖದಲ್ಲಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾದೆ.
Jammu & Kashmir Liberation Front (JKLF) terrorist Yasin Malik, serving a life sentence in a terror-funding case, has made a shocking claim.
In an affidavit filed in the Delhi High Court on August 25, Malik says:
•He met Lashkar-e-Taiba founder and 26/11 mastermind Hafiz Saeed… pic.twitter.com/D8xLdWDizG
— Amit Malviya (@amitmalviya) September 19, 2025
ಈ ಸಭೆಯಲ್ಲಿ ಪಾಕಿಸ್ತಾನದ ಉಗ್ರರ ಜೊತೆ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವಲ್ಲಿ ನಾನು ತೋರಿಸಿದ ಪ್ರಯತ್ನ, ತಾಳ್ಮೆ ಮತ್ತು ಸಮರ್ಪಣೆಗೆ ಸಿಂಗ್ ಅವರು ನನಗೆ ವೈಯಕ್ತಿಕವಾಗಿ ಧನ್ಯವಾದ ಅರ್ಪಿಸಿದರು. ಮನಮೋಹನ್ ಸಿಂಗ್ ನನ್ನ ಕೈ ಕುಲುಕಿ “ಕಾಶ್ಮೀರದಲ್ಲಿ ಅಹಿಂಸಾತ್ಮಕ ಚಳವಳಿಯ ಪಿತಾಮಹ” ಎಂದು ನನ್ನನ್ನು ಕರೆದರು.
ಮನ ಮೋಹನ್ ಸಿಂಗ್ ಮಾತ್ರವಲ್ಲ ಮಲಿಕ್ ತನ್ನ ಅಫಿಡವಿಟ್‌ನಲ್ಲಿ, ಅಟಲ್ ಬಿಹಾರಿ ವಾಜಪೇಯಿ, ಸೋನಿಯಾ ಗಾಂಧಿ, ಪಿ ಚಿದಂಬರಂ, ಐಕೆ ಗುಜ್ರಾಲ್ ಮತ್ತು ರಾಜೇಶ್ ಪೈಲಟ್ ಸೇರಿದಂತೆ ಹಲವಾರು ಉನ್ನತ ರಾಜಕೀಯ ನಾಯಕರೊಂದಿಗಿನ ಮಾತುಕತೆಯ ಬಗ್ಗೆ ಉಲ್ಲೇಖಿಸಿದ್ದಾನೆ.
1990 ರಲ್ಲಿ ನನ್ನ ಬಂಧನದ ನಂತರ, ವಿಪಿ ಸಿಂಗ್, ಚಂದ್ರಶೇಖರ್, ಪಿವಿ ನರಸಿಂಹ ರಾವ್, ಎಚ್‌ಡಿ ದೇವಗೌಡ, ಇಂದರ್ ಕುಮಾರ್ ಗುಜ್ರಾಲ್, ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗಲೂ ನಾನು ಸರ್ಕಾರದ ಜೊತೆ ಮಾತನಾಡುತ್ತಿದ್ದೆ. ಅಧಿಕಾರದಲ್ಲಿರುವ ಸರ್ಕಾರಗಳಿಂದ ನಾನು ಸಹಾಯ ಪಡೆದುಕೊಂಡಿದ್ದೆ ಮತ್ತು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡುತ್ತಿದ್ದೆ ಎಂದಿದ್ದಾನೆ.
1990 ರ ಜನವರಿಯಲ್ಲಿ ಶ್ರೀನಗರದಲ್ಲಿ ನಾಲ್ವರು ಭಾರತೀಯ ವಾಯುಪಡೆಯ ಅಧಿಕಾರಿಗಳನ್ನು ಕೊಂದ ಆರೋಪ ಮಲಿಕ್ ಮೇಲಿದೆ. ಮಾಜಿ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ ರುಬಿಯಾ ಸಯೀದ್ ಅವರ ಅಪಹರಣ, 1990 ರಲ್ಲಿ ಕಾಶ್ಮೀರದಲ್ಲಿ ಪಂಡಿತರ ನರಮೇಧ ಮಾಡಿರುವ ಆರೋಪವೂ ಈತನ ಮೇಲಿದೆ.
ಆಗಸ್ಟ್ 11 ರಂದು, ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣದಲ್ಲಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ಗೆ ಮರಣದಂಡನೆ ವಿಧಿಸುವಂತೆ ಕೇಳಿದೆ. ನ್ಯಾಯಾಲಯವು ಯಾಸಿನ್ ಮಲಿಕ್‌ಗೆ ಪ್ರತಿಕ್ರಿಯೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿ ಪ್ರಕರಣವನ್ನು ನವೆಂಬರ್ 10ಕ್ಕೆ ಮುಂದೂಡಿದೆ.
2022 ರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾದ ಯಾಸಿನ್ ಮಲಿಕ್, ದೇಶದ ಸಾರ್ವಭೌಮತ್ವಕ್ಕೆ ಬೆದರಿಕೆಯೊಡ್ಡುವ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರಗಾಮಿತ್ವಕ್ಕೆ ನಿಕಟ ಸಂಬಂಧ ಹೊಂದಿದ್ದಾನೆ ಎಂದು ಕೇಂದ್ರ ಸರ್ಕಾರ ಹೇಳಿದೆ.