– ನಿನ್ನೆ ಸಂಜೆಯಿಂದ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆ
ಬೆಂಗಳೂರು: ಸಿಲಿಕಾನ್ ಸಿಟಿ ಮಳೆಯಿಂದ ತೊಯ್ತು ತೊಪ್ಪೆಯಾಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಸಂಚರಿಸಲು ಪರದಾಡುವಂತಾಗಿದೆ. ಗುರುವಾರ ಸಂಜೆಯಿಂದ ಶುರುವಾದ ಮಳೆ ಜಿಟಿಜಿಟಿ ಸುರಿಯುತ್ತಿದೆ.
ಎಲೆಕ್ಟ್ರಾನಿಕ್ ಸಿಟಿ, ಕೆ.ಆರ್ ಮಾರ್ಕೆಟ್, ಯಲಹಂಕ, ಓಕಳಿಪುರ, ಸರ್ಜಾಪುರ, ಹೆಬ್ಬಾಳ ಸೇರಿದಂತೆ ಹಲವು ಕಡೆ ಮಳೆಯಿಂದ ತೊಂದರೆಯಾಗಿದೆ. ಹಲವು ಕಡೆ ಮರಗಳು ಧರೆಗುರುಳಿವೆ. ಚಾಮರಾಜಪೇಟೆಯ ಸಂಗಮ ಸರ್ಕಲ್ ಬಳಿ ಮರ ಧರೆಗುರುಳಿದೆ. ಹೊಸೂರು ರಸ್ತೆ, ಮೈಸೂರು ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ, ಓಕಳಿಪುರ ಜಂಕ್ಷನ್, ಗೊರಗುಂಟೆಪಾಳ್ಯ ಜಂಕ್ಷನ್, ಕೆ.ಆರ್. ಸರ್ಕಲ್, ಬನ್ನೇರುಘಟ್ಟ ರಸ್ತೆ, ಕಸ್ತೂರಿ ನಗರ, ಹೆಬ್ಬಾಳ ಜಂಕ್ಷನ್ ಸೇರಿ ಹಲವೆಡೆ ರಸ್ತೆಗಳು ಜಲಾವೃತಗೊಂಡಿವೆ. ಪರಿಣಾಮ ವಾಹನ ಸವಾರರು ಸಂಚಾರಕ್ಕೆ ಪರದಾಡಿದರು.
ಎಲ್ಲೆಲ್ಲಿ ಎಷ್ಟು ಮಳೆ?
ಅರಕೆರೆ-33 ಮಿಮೀ, ಬೊಮ್ಮನಹಳ್ಳಿ-29 ಮಿಮೀ, HHRB ಲೇಔಟ್- 22 ಮಿಮೀ, ಕೋರಮಂಗಲ-22 ಮಿಮೀ, ನಾಯಂಡಹಳ್ಳಿ-21 ಮಿಮೀ, BTM ಲೇಔಟ್- 20 ಮಿಮೀ, ಸಂಪಂಗಿರಾಮನಗರ- 19 ಮಿಮೀ, ವಿದ್ಯಾಪೀಠ- 15 ಮಿಮೀ, ಚಾಮರಾಜಪೇಟೆ-11 ಮಿಮೀ ಮಳೆಯಾಗಿದೆ.
ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆ 6 ಗಂಟೆವರೆಗೆ ಮಳೆ ಮುಂದುವರಿದೆ. ನಗರದಲ್ಲಿ 66.0 ಮಿಮೀ ಮಳೆ ದಾಖಲಾಗಿದೆ. ಚಿಕ್ಕಬಳ್ಳಾಪುರದಲ್ಲಿ 130 ಮಿಮೀ ಹಾಗೂ ಬೀದರ್ ಜಿಲ್ಲೆಯಲ್ಲಿ 112 ಮಿಮೀ ಮಳೆ ಸುರಿದಿದೆ. ಸೆಪ್ಟೆಂಬರ್ 24 ರ ವರೆಗೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.