– ಇಲ್ಲಿನ ತೋಳಗಳು ನರಭಕ್ಷಕಗಳಾಗಿದ್ದು ಹೇಗೆ? – ದಾಳಿಯ ʻಸೇಡಿನ ಕಥೆʼ
ಲಕ್ನೋ: ರುದ್ರಪ್ರಯಾಗದಲ್ಲಿ ನರಭಕ್ಷಕ ಚಿರತೆಗೆ ಹೆದರಿದ್ದ ಜನ ಸಂಜೆ ಹೊತ್ತಾದ್ರೆ ಸಾಕು ಮನೆಯಿಂದಾಚೆಗೆ ಕಾಲಿಡುವುದಕ್ಕೂ ಹೆದರುತ್ತಿದ್ದರು. ಅದೇ ಪರಿಸ್ಥಿತಿ ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನಲ್ಲಿ ಮತ್ತೆ ಶುರುವಾಗಿದೆ. ನರಭಕ್ಷಕ ತೋಳಗಳ ಹಾವಳಿ ಮುಂದುವರಿದಿದ್ದು, ಬ್ರಹ್ರೈಚ್‌ನ ಕೈಸರ್‌ಗಂಜ್ ಮತ್ತು ಮಹ್ಸಿ ತಹಸಿಲ್‌ಗಳಲ್ಲಿರುವ ಹಳ್ಳಿಗಳ ಜನರಲ್ಲಿ ಭೀತಿ ಉಂಟುಮಾಡಿದೆ.
ಕಳೆದ 20 ದಿನಗಳಲ್ಲಿ 11 ದಾಳಿ ನಡೆದಿದ್ದು, ಇಬ್ಬರು ಹುಡುಗಿಯರು ಸಾವನ್ನಪ್ಪಿದ್ದಾರೆ. 9 ಮಂದಿ ತೋಳಗಳ ದಾಳಿಗೆ ಸಿಕ್ಕಿ ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ನರಭಕ್ಷಕ ತೋಳಗಳನ್ನ (Wolf) ಸೆರೆ ಹಿಡಿಯಲು ಪೊಲೀಸರು, ಅರಣ್ಯ ಇಲಾಖೆ ಅಧಿಕಾರಿಗಳು (Forest Department Officers) ಹಾಗೂ ಅಂತಾರಾಜ್ಯ ತಜ್ಞರು ಸೇರಿದಂತೆ 100ಕ್ಕೂ ಹೆಚ್ಚು ಸಿಬ್ಬಂದಿಯನ್ನ ನಿಯೋಜಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ದೇವಿಪಟನ್ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ ಸಿಮ್ರಾನ್, ಕಾರ್ಯಾಚರಣೆ ಹಾಗೂ ಸಾರ್ವಜನಿಕರ ಮಾಹಿತಿಗಾಗಿ ಕಂಟ್ರೋಲ್ ರೂಮ್ ಸ್ಥಾಪಿಸಲಾಗಿದೆ. ಜೊತೆಗೆ ಡ್ರೋನ್ (Drone), ನೈಟ್ ವಾಚ್‌ಕ್ಯಾಮೆರಾಗಳನ್ನೂ ಕಣ್ಗಾವಲಿಗೆ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬಂದಿದ್ದು ಯಾವಾಗ?
ಕಳೆದ ವರ್ಷ ಸೆಪ್ಟಂಬರ್‌ನಲ್ಲೇ ನರಭಕ್ಷಕ ತೋಳಗಳು ಬಹ್ರೈಚ್‌ನ (Bahraich) ಜನರನ್ನ ಕಾಡಿದ್ದವು. ಈ ವರ್ಷ ಸೆಪ್ಟೆಂಬರ್‌ನಲ್ಲಿ ಮತ್ತೆ ತೋಳಗಳ ಹಾವಳಿ ಹೆಚ್ಚಾಗಿದೆ. ಇದೇ ಸೆ.9ರಂದು ಜ್ಯೋತಿ ಎಂಬ ನಾಲ್ಕು ವರ್ಷದ ಬಾಲಕಿಯನ್ನ ತೋಳವೊಂದು ಹೊತ್ತೊಯ್ದಿತ್ತು. ಮರುದಿನ ಬೆಳಗ್ಗೆ ಆಕೆಯ ಮೃತದೇಹ ಪತ್ತೆಯಾಗಿತ್ತು. ನಂತ್ರ ಸೆ.11ರಂದು ಮೂರು ತಿಂಗಳ ಸಂಧ್ಯಾ ಎಂಬ ಹೆಣ್ಣು ಮಗುವನ್ನು ಆಕೆಯ ತಾಯಿ ಕಂಕುಳಲ್ಲಿ ಇರಿಸಿಕೊಂಡಿದ್ದಾಗಲೇ ಕಚ್ಚಿಕೊಂಡು ಎಳೆದೊಯ್ದಿತ್ತು. ಆ ನಂತರ ತೋಳಗಳ ಹಾವಳಿ ಮತ್ತೆ ಶುರುವಾಗಿರುವುದು ಕಂಡುಬಂದಿತು. ಅಧಿಕಾರಿಗಳು ಡ್ರೋನ್ ಕಾರ್ಯಾಚರಣೆ ವೇಳೆ 2 ತೋಳಗಳ ದೃಶ್ಯ ಸೆರೆಯಾಗಿತ್ತು. ಆದ್ರೆ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ವಿಫಲರಾದ್ರು.
ಇಲ್ಲಿನ ತೋಳಗಳು ನರಭಕ್ಷಕಗಳಾಗಿದ್ದು ಹೇಗೆ?
ಇಲ್ಲಿನ ಸಾಯಿ ನದಿ ತಟದ ಜಾನ್ ಪುರ, ಪ್ರತಾಪ್‌ಗಢ ಮತ್ತು ಸುಲ್ತಾನ್ ಪುರದ ಗಡಿಗೆ ಹೊಂದಿಕೊಂಡಂತಿರುವ ಅರಣ್ಯ ಪ್ರದೇಶಗಳು ಅಂದು ತೋಳಗಳ ಆವಾಸಸ್ಥಾನವಾಗಿತ್ತು. ನರಿಗಳೂ ಸಹ ಇಲ್ಲಿ ವಾಸಿಸುತ್ತಿದ್ದವು. ಸಾಮಾನ್ಯವಾಗಿ ಸುಲಭವಾಗಿ ಆಹಾರ ಹುಡುಕಾಟದಲ್ಲಿದ್ದಾಗ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ಅದೇ ರೀತಿ ಇಲ್ಲಿಯೂ ಆಗಿದೆ. ಇಲ್ಲಿನ ಹೆಣ್ಣು ತೋಳವೊಂದು ಮರಿಗಳಿಗೆ ಜನ್ಮ ನೀಡಿತ್ತು. ಈ ಸಮಯದಲ್ಲಿ ಹೆಣ್ಣು ತೋಳಗಳು ಬೇಟೆಯಾಡಲು ಸಾಧ್ಯವಿರಲಿಲ್ಲ. ಹಾಗಾಗಿ ಗಂಡು ತೋಳದ ಆಶ್ರಯ ಬಯಸಿತ್ತು. ಒಮ್ಮೆ ಆಹಾರ ಹುಡುಕಿಕೊಂಡು ಹೊರಟಿದ್ದ ಗಂಡು ತೋಳ ಮಗುವೊಂದನ್ನು ಬೇಟೆಯಾಡಿ, ಭಾಗಶಃ ತಾನು ತಿಂದು ಉಳಿದ ಮಾಂಸವನ್ನು ಮರಿಗಳಿಗಾಗಿ ಹೊತ್ತೊಯ್ದಿತ್ತು. ಆದ್ರೆ ಮರಿಗಳು ಮನುಷ್ಯನ ಆಹಾರ ತಿನ್ನುತ್ತಿದ್ದಂತೆ ವಾಂತಿ ಮಾಡಿಕೊಂಡಿದ್ದವು, ಕ್ರಮೇಣ ಅದೇ ಆಹಾರಕ್ಕೆ ಒಗ್ಗಿಕೊಂಡವು. ಆ ನಂತರದಲ್ಲಿ ತೋಳಗಳು ಮಕ್ಕಳನ್ನು ಬೇಟೆಯಾಟಲು ಮುಂದುವರಿಸಿದವು.
ತೋಳಗಳು ನರಭಕ್ಷಕವೇ?
ಭಾರತೀಯ ತೋಳಗಳು ಪ್ರಾಚೀನ ವಂಶಾವಳಿ ಹೊಂದಿವೆ ಎಂದು ವನ್ಯಜೀವಿ ತಜ್ಞರು ಹೇಳುತ್ತಾರೆ. ತೋಳಗಳಲ್ಲಿ ಬೂದು ತೋಳ ಹಾಗೂ ನಾಯಿ ತೋಳ ಎಂಬ ಸಂತತಿಗಳಿವೆ. ಅವುಗಳನ್ನು ದೇಹದ ಆಕಾರ, ಬಣ್ಣಗಳಿಂದ ಪ್ರತ್ಯೇಕಿಸಬಹುದು. ಈ ಎರಡು ಉಪಜಾತಿಗಳ ಪೈಕಿ ನಾಯಿ ತೋಳಗಳು ನರಭಕ್ಷಕ ತೋಳಗಳಾಗಿವೆ. ಇವು ಅತ್ಯಂತ ಚುರುಕು ಬುದ್ಧಿ ಹೊಂದಿರುತ್ತವೆ. ಇವುಗಳನ್ನು ಸೆರೆ ಹಿಡಿಯುವಾಗ ಮೀನಿಗೆ ಗಾಳ ಹಾಕಿದಂತೆ, ಮಾಂಸವನ್ನು ಬಳಸಿ ಎಚ್ಚರಿಕೆಯಿಂದ ಹಿಡಿಯಬೇಕಾಗುತ್ತದೆ ಎನ್ನುತ್ತಾರೆ ತಜ್ಞರು.
ದಾಳಿ ಹಿಂದಿದೆ ʻಸೇಡಿನ ಕಥೆʼ:
ಬಹ್ರೈಚ್ ಜಿಲ್ಲೆಯ ಕತರ್ನಿಯಾಘಾಟ್ ವನ್ಯಜೀವಿ ವಿಭಾಗದ ನಿವೃತ್ತ ಭಾರತೀಯ ಅರಣ್ಯ ಸೇವೆ ಅಧಿಕಾರಿ ಜ್ಞಾನ್ ಪ್ರಕಾಶ್ ಸಿಂಗ್ ತೋಳಗಳ ದಾಳಿಯ ಬಗ್ಗೆ ರೋಚಕ ಸಂಗತಿಯೊಂದನ್ನ ಈ ಹಿಂದೆಯೇ ಬಿಚ್ಚಿಟ್ಟಿದ್ದರು. ತೋಳಗಳು ಇತರ ಕಾಡು ಪ್ರಾಣಿಗಳಿಗಿಂತ ಭಿನ್ನವಾಗಿ ಸೇಡು ತೀರಿಸಿಕೊಳ್ಳುವ ಪ್ರವೃತ್ತಿಯನ್ನು ಹೊಂದಿವೆ. ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದ್ರೆ, ತೋಳಗಳು ಸೇಡು ತೀರಿಸಿಕೊಳ್ಳುತ್ತವೆ. ಈ ಹಿಂದೆ ಮನುಷ್ಯರು ತೋಳಗಳಿಗೆ ಯಾವುದೋ ಒಂದು ರೀತಿಯಲ್ಲಿ ತೊಂದರೆ ಕೊಟ್ಟಿರುವುದರಿಂದ ಈ ದಾಳಿಗಳು ನಡೆಯುತ್ತಿವೆ ಎಂದಿದ್ದಾರೆ.
ಸುಮಾರು 25 ವರ್ಷಗಳ ಹಿಂದೆ ಉತ್ತರ ಪ್ರದೇಶದ ಚೌನ್‌ಪುರ ಮತ್ತು ಪ್ರತಾಪ್ ಗಢ ಜಿಲ್ಲೆಗಳ ಸಾಯಿ ನದಿಯ ಜಲಾನಯನ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಮಕ್ಕಳನ್ನು ತೋಳಗಳು ಕೊಂದಿದ್ದವು. ಈ ಬಗ್ಗೆ ತನಿಖೆ ಮಾಡಿದ ನಂತರ ಕೆಲವು ಮಕ್ಕಳು ಎರಡು ತೋಳದ ಮರಿಗಳನ್ನು ಗುಹೆಯಲ್ಲಿ ಕೊಂದಿರುವುದು ಕಂಡುಬಂದಿತು. ಬಳಿಕ ತೋಳದ ಮರಿಗಳ ಪೋಷಕರು ತುಂಬಾ ಆಕ್ರಮಣಕಾರಿಯಾದವು ಮತ್ತು ಆ ಪ್ರದೇಶದಲ್ಲಿ ವಾಸಿಸುವ ಮನುಷ್ಯರ ಮೇಲೆ ದಾಳಿ ಮಾಡಲು ಪ್ರಾರಂಭಿಸಿದವು. ಈ ಸಂದರ್ಭದಲ್ಲಿ ಅರಣ್ಯ ಇಲಾಖೆ ಕಾರ್ಯಾಚರಣೆಯನ್ನು ಪ್ರಾರಂಭಿಸಿ, ಕೆಲವು ತೋಳಗಳನ್ನು ಹಿಡಿಯಲಾಯಿತು ಆದರೆ, ಎರಡು ನರಭಕ್ಷಕ ತೋಳಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದವು. ಅಂತಿಮವಾಗಿ ಆ ತೋಳಗಳನ್ನು ಗುರುತಿಸಿ, ಗುಂಡಿಕ್ಕಿ ಕೊಲ್ಲಲಾಯಿತು ಎಂದು ಜ್ಞಾನ್ ಪ್ರಕಾಶ್ ಸಿಂಗ್ ಹೇಳಿದ್ದರು.