ದುಬೈ: ಏಷ್ಯಾಕಪ್ ಟೂರ್ನಿಯಲ್ಲಿ ಇದೀಗ ಹ್ಯಾಂಡ್‌ಶೇಕ್ ವಿವಾದ (Handshake Row) ತಾರಕಕ್ಕೇರಿದ್ದು, ಇಂದಿನ ಯುಎಇ ವಿರುದ್ಧದ ಗುಂಪುಹಂತದ ಪಂದ್ಯವನ್ನು ಬಹಿಷ್ಕರಿಸಲು ಪಾಕಿಸ್ತಾನ (Pakistan) ನಿರ್ಧರಿಸಿದೆ ಎಂದು ವರದಿಗಳು ತಿಳಿಸಿವೆ.
ಪಾಕಿಸ್ತಾನ ಮತ್ತು ಯುಎಇ (UAE) ವಿರುದ್ಧ ಗುಂಪುಹಂತದ ಪಂದ್ಯ ಇಂದು ರಾತ್ರಿ ನಿಗದಿಯಾಗಿದೆ. ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಪಂದ್ಯ ಶುರುವಾಗಬೇಕಿದೆ. ಯುಎಇ ತಂಡ ಈಗಾಗಲೇ ಪಂದ್ಯವನ್ನಾಡಲು (Asia Cup Match) ಮೈದಾನದಲ್ಲಿ ಸಕಲ ತಯಾರಿ ಮಾಡಿಕೊಂಡಿದೆ. ಆದ್ರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ತಮ್ಮ ತಂಡವನ್ನು ಇನ್ನೂ ಹೋಟೆಲ್‌ನಲ್ಲಿಯೇ ಇರಿಸಿದ್ದು, ಸ್ಥಳಕ್ಕೆ ಹೋಗದಂತೆ ಸೂಚಿಸಿದೆ.
ಮುಂದಿನ ನಿರ್ದೇಶನ ಬರುವವರೆಗೆ ತಮ್ಮ ರೂಮ್‌ನಲ್ಲೇ ಇರಲು ಆಟಗಾರರಿಗೆ ಸೂಚಿಸಿದೆ. ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದು, ಅಲ್ಲಿ ತನ್ನ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಪಾಕಿಸ್ತಾನ ಇಂದಿನ ಪಂದ್ಯ ಬಹಿಷ್ಕರಿಸಿದ್ರೆ ಯುಎಇ ಸೂಪರ್ ಫೋರ್ ಹಂತ ಪ್ರವೇಶಿಸಲಿದೆ.
ಪಂದ್ಯ ಬಹಿಷ್ಕರಿಸಲು ಪಾಕ್ ಮುಂದಾಗಿದ್ದೇಕೆ?
ಇತ್ತೀಚೆಗೆ ನಡೆದ ಭಾರತ – ಪಾಕ್ ನಡುವಿನ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಸೂರ್ಯ ಕುಮಾರ್ ಯಾದವ್ (Surya Kumar Yadav) ಟಾಸ್ ವೇಳೆ ಪಾಕ್ ನಾಯಕ ಸಲ್ಮಾನ್ ಅಲಿ ಅಘಾ ಅವರ ಕೈಕುಲುಕಲಿಲ್ಲ. ಅಷ್ಟೇ ಅಲ್ಲದೇ ಪಂದ್ಯದ ಕೊನೆಯಲ್ಲೂ ಭಾರತದ ಆಟಗಾರರು ಪಾಕಿಸ್ತಾನದ ತಂಡದ ಆಟಗಾರರ ಹ್ಯಾಂಡ್ ಶೇಕ್ ಮಾಡಿರಲಿಲ್ಲ.
ಟಾಸ್ ಸಮಯದಲ್ಲಿ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ನಾಯಕ ಸಲ್ಮಾನ್ ಅಲಿ ಆಘಾ ಅವರ ಬಳಿ ಭಾರತ ತಂಡದ ನಾಯಕನ ಜೊತೆ ಕೈ ಕುಲುಕದಂತೆ ಕೇಳಿಕೊಂಡಿದ್ದರು. ಈ ನಡವಳಿಕೆ ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ ಎಂದು ಆರೋಪಿಸಿ ಪಿಸಿಬಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ಇದೇ ಕಾರಣಕ್ಕೆ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಅವರನ್ನು ವಜಾಗೊಳಿಸಬೇಕೆಂದು ಪಿಸಿಬಿ ಒತ್ತಾಯಿಸಿತ್ತು. ಆದ್ರೆ ಪಾಕ್ ಮನವಿಯನ್ನ ಐಸಿಸಿ ತಿರಸ್ಕರಿಸಿ, ಇಂದಿನ ಯುಎಇ-ಪಾಕ್ ಪಂದ್ಯಕ್ಕೆ ರೆಫರಿಯಾಗಿ ಆಂಡಿ ಪೈಕ್ರಾಫ್ಟ್ ಅವರನ್ನೇ ನಿಯೋಜಿಸಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಪಾಕ್ ಇಂದಿನ ಪಂದ್ಯ ಬಹಿಷ್ಕರಿಸಲು ಮುಂದಾಗಿದೆ.
ಸದ್ಯ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಸಿ ನಿರ್ಧಾರ ಪ್ರಕಟಿಸಿರುವುದಾಗಿ ಹೇಳಿರುವ ಪಾಕ್, ಕೊನೇ ಕ್ಷಣದಲ್ಲಿ ಬಹಿಷ್ಕಾರ ನಿರ್ಧಾರದಿಂದ ಹಿಂದೆ ಸರಿದರೆ, ಇಂದಿನ ಪಂದ್ಯವನ್ನಾಡುವ ಸಾಧ್ಯತೆಗಳಿವೆ.