ಬೆಳಗಾದರೆ ಸಾಕು ತಿಂಡಿ ಏನು ಮಾಡೋದು, ಮಕ್ಕಳ ಲಂಚ್ ಬಾಕ್ಸ್‌ಗೆ ಏನು ರೆಡಿ ಮಾಡೋದು ಎಂಬ ಚಿಂತೆ ಎಲ್ಲಾ ಅಮ್ಮಂದಿರಲ್ಲಿರುತ್ತದೆ. ದಿನಾ ಒಂದೇ ರೀತಿಯ ರೈಸ್, ದೋಸೆ ಮಾಡಿಕೊಟ್ಟರೆ ಮಕ್ಕಳು ಕೂಡ ತಿನ್ನಲು ಇಷ್ಟಪಡಲ್ಲ. ಹಾಗಾಗಿ ಇವತ್ತು ನಾವು ಕೇವಲ 10 ನಿಮಿಷದಲ್ಲಿ ಕ್ಯಾರೆಟ್ ರೈಸ್ ಹೇಗೆ ಮಾಡೋದು ಅಂತ ಹೇಳಿಕೊಡ್ತೀವಿ. ಇದು ಮಾಡಲು ಸುಲಭ ಅಷ್ಟೇ ಅಲ್ಲದೇ ತಿನ್ನಲು ಕೂಡ ರುಚಿಕರವಾಗಿರುತ್ತದೆ. ನೀವು ಕೂಡ ನಿಮ್ಮ ಮನೆಯಲ್ಲಿ ಈ ರೆಸಿಪಿಯನ್ನು ತಪ್ಪದೇ ಟ್ರೈ ಮಾಡಿ.
ಬೇಕಾಗುವ ಸಾಮಗ್ರಿಗಳು:
ಅನ್ನ – 1 ಕಪ್
ತುರಿದ ಕ್ಯಾರೆಟ್ – 2
ಒಣ ಮೆಣಸು – 3
ಗೋಡಂಬಿ – 6
ಸಾಸಿವೆ, ಜೀರಿಗೆ – ಅರ್ಧ ಚಮಚ
ಕರಿಬೇವು- ಒಗ್ಗರಣೆಗೆ
ಹೆಚ್ಚಿದ ಈರುಳ್ಳಿ – 1
ಹೆಚ್ಚಿದ ಕೊತ್ತಂಬರಿ ಸೊಪ್ಪು – ಸ್ವಲ್ಪ
ಅಚ್ಚಖಾರದ ಪುಡಿ -ಅರ್ಧ ಚಮಚ
ಅರಶಿಣ ಪುಡಿ – ಕಾಲು ಚಮಚ
ಗರಂ ಮಸಾಲ – ಅರ್ಧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ತುಪ್ಪ – 1 ಚಮಚ
ಎಣ್ಣೆ – ಒಂದೂವರೆ ಚಮಚ
ಮಾಡುವ ವಿಧಾನ:
*ಮೊದಲಿಗೆ ಗ್ಯಾಸ್ ಸ್ಟವ್ ಮೇಲೆ ಪ್ಯಾನ್ ಇಟ್ಟುಕೊಂಡು ಅದಕ್ಕೆ ತುಪ್ಪ, ಎಣ್ಣೆ ಹಾಕಿ. ಕಾದ ಮೇಲೆ ಅದಕ್ಕೆ ಸಾಸಿವೆ, ಜೀರಿಗೆ ಹಾಕಿಕೊಳ್ಳಿ. ಸಾಸಿವೆ ಸಿಡಿದ ಬಳಿಕ ಅದಕ್ಕೆ ಗೋಡಂಬಿ ಹಾಗೂ ಒಣ ಮೆಣಸು ಹಾಕಿಕೊಂಡು ಚೆನ್ನಾಗಿ ಹುರಿಯಿರಿ.
*ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿಕೊಂಡು ಬಾಡಿಸಿಕೊಳ್ಳಿ. ಈಗ ಇದಕ್ಕೆ ಕರಿಬೇವು ಸೇರಿಸಿ.
*ಬಳಿಕ ಇದಕ್ಕೆ ತುರಿದ ಕ್ಯಾರೆಟ್ ಸೇರಿಸಿಕೊಂಡು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿಕೊಳ್ಳಿ.
*ಈಗ ಈ ಮಿಶ್ರಣಕ್ಕೆ ಖಾರದ ಪುಡಿ, ಅರಶಿಣ ಹಾಗೂ ಗರಂ ಮಸಾಲ ಸೇರಿಸಿಕೊಂಡು ಹುರಿಯಿರಿ.
*ನಂತರ ಇದಕ್ಕೆ ಬೇಯಿಸಿಟ್ಟುಕೊಂಡಿರುವ ಅನ್ನ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ, ಬಳಿಕ ಕೊತ್ತಂಬರಿ ಸೊಪ್ಪು ಹಾಕಿದರೆ ಕ್ಯಾರೆಟ್ ರೈಸ್ ಸವಿಯಲು ಸಿದ್ಧ.