ಮ್ಯಾಂಚೆಸ್ಟರ್: ಫಿಲ್ ಸಾಲ್ಟ್ (Phil Salt) ಬೆಂಕಿ ಶತಕ ಹಾಗೂ ಇತರ ಬ್ಯಾಟರ್‌ಗಳ ಸ್ಫೋಟಕ ಆಟದಿಂದಾಗಿ ದಕ್ಷಿಣ ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ (England) ಹಲವು ದಾಖಲೆಗಳನ್ನು ಪುಡಿಗಟ್ಟಿದೆ.
ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ರನ್‌ಗಳ ಸುರಿಮಳೆಯನ್ನೇ ಸುರಿಸಿತು. ಈ ಮೂಲಕ ಅಂತಾರಾಷ್ಟ್ರೀಯ ಟಿ20ಯಲ್ಲಿ 3ನೇ ಗರಿಷ್ಠ ಸ್ಕೋರ್ ಮಾಡುವ ಮೂಲಕ ಹೊಸ ದಾಖಲೆಯನ್ನು ಸೃಷ್ಟಿಸಿತು. ಇಂಗ್ಲೆಂಡ್ ಕೇವಲ 2 ವಿಕೆಟ್ ಕಳೆದುಕೊಂಡು 304 ರನ್ ಕಲೆಹಾಕಿದ್ದು, ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಗಳಿಸಿದ 3ನೇ ಗರಿಷ್ಠ ರನ್ ಆಗಿದೆ. ಮೊದಲು ಬ್ಯಾಟ್ ಮಾಡಿದ್ದ ತಂಡ ತಂಡ 12.1 ಓವರ್‌ನಲ್ಲೇ 200ರ ಗಡಿ ದಾಟಿತು. ಇದೂ ಕೂಡ ಟಿ20ಯಲ್ಲಿ ಯಾವುದೇ ತಂಡದ ಪೈಕಿ ಗರಿಷ್ಠ ರನ್ ಆಗಿದೆ.ಇದನ್ನೂ ಓದಿ: ಏಷ್ಯಾ ಕಪ್ 2025 – ಹಾಂಗ್‌ಕಾಂಗ್ ವಿರುದ್ಧ ಬಾಂಗ್ಲಾ ತಂಡಕ್ಕೆ 7 ವಿಕೆಟ್‌ಗಳ ಜಯ
ಇಂಗ್ಲೆಂಡ್ 20 ಓವರ್‌ಗಳಲ್ಲಿ ನೀಡಿದ್ದ 304 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾ 16.1 ಓವರ್‌ಗಳಲ್ಲೇ ಆಲೌಟ್ ಆಯಿತು. ಐಡೆನ್ ಮಾರ್ಕ್ರಾಮ್ 20 ಎಸೆತಗಳಲ್ಲಿ 41 ರನ್, ಬ್ಜೋರ್ನ್ ಫೋರ್ಟುಯಿನ್ 16 ಎಸೆತಗಳಲ್ಲಿ 32 ರನ್, ಟ್ರಿಸ್ಟಾನ್ ಸ್ಟಬ್ಸ್ 25 ಎಸೆತಗಳಲ್ಲಿ 23 ರನ್, ಡೊನೊವನ್ ಪೆರೀರಾ 11 ಎಸೆತಗಳಲ್ಲಿ 23 ರನ್ ಕಲೆಹಾಕಿದರು. ಜೋಫ್ರಾ ಆರ್ಚರ್, ಸ್ಯಾಮ್ ಕರನ್ ಬೌಲಿಂಗ್ ಅಬ್ಬರಕ್ಕೆ ಮಣಿದು ದಕ್ಷಿಣ ಆಫ್ರಿಕಾ ಒಟ್ಟು 158 ರನ್‌ಗಳಿಸಿ ಪರಾಭವಗೊಂಡರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಫಿಲ್ ಸಾಲ್ಟ್ 39 ಎಸೆತಗಳಲ್ಲೇ ಶತಕ ಪೂರ್ಣಗೊಳಿಸಿ, ಇಂಗ್ಲೆಂಡ್ ಪರ ಅತಿ ವೇಗದ ಶತಕದ ದಾಖಲೆ ಬರೆದರು. ಒಟ್ಟು 60 ಎಸೆತಗಳಲ್ಲಿ 15 ಬೌಂಡರಿ, 8 ಸಿಕ್ಸರ್‌ನೊಂದಿಗೆ ಔಟಾಗದೇ 141 ರನ್ ಗಳಿಸಿ, ಲಿವಿಂಗ್‌ಸ್ಟೋನ್ (42 ಎಸೆತ) ಹೆಸರಲ್ಲಿದ್ದ ದಾಖಲೆ ಮುರಿದರು. ಇದು ಇಂಗ್ಲೆಂಡ್ ಪರ ಟಿ20ಯಲ್ಲಿ ಬ್ಯಾಟರೊಬ್ಬರು ಗಳಿಸಿದ ಗರಿಷ್ಠ ರನ್. ಇನ್ನುಳಿದಂತೆ ಬಟ್ಲರ್ 30 ಎಸೆತಕ್ಕೆ 83, ಜಾಕೊಬ್ ಬೆಥಲ್ 14 ಎಸೆತಕ್ಕೆ 26, ನಾಯಕ ಹ್ಯಾರಿ ಬ್ರೂಕ್ 21 ಎಸೆತಕ್ಕೆ ಔಟಾಗದೇ 41 ರನ್ ಸಿಡಿಸಿದರು.ಇದನ್ನೂ ಓದಿ: ಇದು ಮ್ಯಾಚ್ ಅಷ್ಟೇ; ಭಾರತ – ಪಾಕ್ ಪಂದ್ಯ ಬೇಡ ಎಂದ ಅರ್ಜಿ ತುರ್ತು ವಿಚಾರಣೆಗೆ ಸುಪ್ರೀಂ ನಕಾರ