ಸಲ್ಮಾನ್ ಖಾನ್ (Salman Khan) ತಮ್ಮ ವ್ಯಕ್ತಿತ್ವದಲ್ಲಿ ತುಂಬಾ ಖಡಕ್, ಗಟ್ಟಿಮನಸ್ಸುಳ್ಳವರು ಎಂದೆಲ್ಲಾ ವರ್ಣಿಸಿಕೊಳ್ಳುತ್ತಾರೆ. ಆದರೆ ಚಿಕ್ಕದೊಂದು ಭಾವುಕ ಕ್ಷಣವನ್ನೂ ಕಣ್ಣಾರೆ ಕಂಡು ಸಹಿಸಲಾಗದ ಮೃದು ಜೀವಿ ಅನ್ನೋ ವಿಚಾರ ಈ ವಾರದ ಹಿಂದಿಯ ಬಿಗ್‌ಬಾಸ್ ಸೀಸನ್ 19ರ (Bigg Boss 19) ವೀಕೆಂಡ್ ವಾರ್‌ನಲ್ಲಿ ಬಹಿರಂಗವಾಗಿದೆ. ಸ್ಪರ್ಧಿಯೊಬ್ಬರು ಅತ್ತಿದ್ದಕ್ಕೆ ಸಲ್ಮಾನ್ ಖಾನ್ ವೇದಿಕೆ ಮೇಲೆಯೇ ಕಣ್ಣೀರು ಹಾಕಿದ್ದಾರೆ.
ಬ್ಯಾಡ್‌ಬಾಯ್ ಎಂದು ಕರೆಸಿಕೊಳ್ಳುವ ಸಲ್ಮಾನ್ ಖಾನ್ ವೇದಿಕೆಯಲ್ಲಿ ಕಣ್ಣೀರು ಹಾಕುವುದಕ್ಕೆ ಕಾರಣ ಸ್ಪರ್ಧಿ ಕುನಿಕಾ ಸದಾನಂದ್. ಇವರು ಬಿಗ್‌ಬಾಸ್ ಸೀಸನ್ 19ರ ಓರ್ವ ಸ್ಪರ್ಧಿ. ಸ್ಪರ್ಧಿಗಳ ಜೊತೆ ಸಲ್ಮಾನ್ ಖಾನ್ ಅವರ ವೀಕೆಂಡ್ ಮಾತುಕತೆ ತಮಾಷೆಯಿಂದಲೇ ನಡೆಯುತ್ತಿತ್ತು. ಆದರೆ ಕುನಿಕಾ ಸದಾನಂದ್ ಪುತ್ರ ಅಯಾನ್ ಲಾಲ್ ಮಾತನಾಡುತ್ತಾ ಮನೆಯೊಳಗೆ ದಿಢೀರ್ ಪ್ರವೇಶ ಪಡೆದೊಡನೆ ಅಲ್ಲಿನ ಚಿತ್ರಣವೇ ಬದಲಾಯ್ತು. ನಗುತ್ತಲೇ ಇದ್ದ ಸಲ್ಮಾನ್ ಖಾನ್ ಕೂಡ ದಂಗು ಬಡಿದವರಂತೆ ನೋಡುತ್ತಾ ನಿಂತರು.
ಬಿಗ್‌ಬಾಸ್ ಮನೆಯಲ್ಲಿ ತಾಯಿ ಕುನಿಕಾ ಕುರಿತು ಹೃದಯಸ್ಪರ್ಶಿ ಮಾತನಾಡುತ್ತಿದ್ದ ಮಗನ ಧ್ವನಿ ಕೇಳಿಸಿಕೊಂಡ ತಾಯಿ ಕುನಿಕಾ ಸದಾನಂದ್ ಬಿಕ್ಕಿ ಬಿಕ್ಕಿ ಅತ್ತರು. `ಅಮ್ಮಾ ನೀನು ನಮ್ಮನ್ನೆಲ್ಲ ಹೆಮ್ಮೆ ಪಡುವಂತೆ ಮಾಡುತ್ತಿದ್ದೀಯ, ನಿಮ್ಮನ್ನು ಇಡೀ ದೇಶ ನೋಡುತ್ತಿದೆ. ನಿನ್ನ ಮೊಮ್ಮಗ ನಾನು ಹಾಗೂ ನಿಮ್ಮ ಸೊಸೆ, ಹಾಗೂ ನೀವು ಸಹಾಯ ಮಾಡಿರುವ ಕಿನ್ನರ ಸಮಾಜ ಎಲ್ಲರೂ ನಿನ್ನನ್ನು ತುಂಬಾ ಇಷ್ಟ ಪಡುತ್ತಾರೆ. ನಿನ್ನ ಮಗನಾಗಿ ಹುಟ್ಟಿದ್ದಕ್ಕೆ ನಾನು ಹೆಮ್ಮೆ ಪಡುತ್ತೇನೆ’ ಎಂದು ಅಮ್ಮನಿಗೆ ಸಂದೇಶ ಕೊಡುತ್ತಾರೆ. ಬಳಿಕ ಸಪ್ರೈಸ್ ಎಂಟ್ರಿಯನ್ನೂ ಕೊಡುತ್ತಾರೆ. ಹೀಗೆ ಅಮ್ಮ ಮಗನ ಭಾವುಕ ಸಂದರ್ಭವನ್ನ ನೋಡುತ್ತಿದ್ದ ಸಲ್ಮಾನ್ ಖಾನ್ ಹೃದಯ ಮಿಡಿದಿದೆ. ತುಂಬು ಕುಟುಂಬಕ್ಕೆ ಹೆಚ್ಚಿನ ಆದ್ಯತೆ ಕೊಡುವ ಸಲ್ಮಾನ್ ಖಾನ್ ಹೃದಯಸ್ಪರ್ಶಿ ಘಟನೆ ಕಂಡು ಕಣ್ಣೀರು ಹಾಕಿದ್ದಾರೆ. ಅಲ್ಲಿಗೆ ಸಲ್ಮಾನ್ ಖಾನ್ ಮುಗ್ಧತೆಯ ದರ್ಶನವಾಗಿದೆ.