– ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಇದೆಲ್ಲ ಆಗ್ತಿದೆ
– ಈ ಹಿಂದೆ ಮಂಗಳೂರಿನಿಂದ ಪಾಂಡವಪುರಕ್ಕೆ ಬಂದು ಏನು ನಡೆಸಿದ್ರು ಗೊತ್ತಿದೆ
ಬೆಂಗಳೂರು: ಮೆರವಣಿಗೆ ನಡೆಯುವ ಸಂದರ್ಭದಲ್ಲಿ ಮಸೀದಿ ಕಡೆಯಿಂದ ಕಲ್ಲುಗಳು ಎಸೆದ ಬಗ್ಗೆ ಮಾಹಿತಿ ಇದೆ. ವಿಚಾರಣೆ ನಡೆಸಿ ನಂತರ 21 ಜನರನ್ನು ಬಂಧಿಸಲಾಗಿದೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (N Chaluvaraya Swamy) ಹೇಳಿದ್ದಾರೆ.
ಮದ್ದೂರಿನಲ್ಲಿ (Maddur) ಗಣೇಶ ವಿಸರ್ಜನೆ ಮೆರವಣಿಗೆ (Ganesha Procession) ವೇಳೆ ಕಲ್ಲು ತೂರಾಟದ (Stone Pelting) ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವ ಹಿಂದೂಗಳ ಮೇಲೂ ಕೇಸ್ ದಾಖಲಾಗಿಲ್ಲ. ಇಷ್ಟು ಬೇಗ ಕ್ರಮ ತೆಗೆದುಕೊಂಡ ಪ್ರಕರಣ ಬೇರೆ ಯಾವುದೂ ಇಲ್ಲ. ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಚೋದಿಸುತ್ತಿದ್ದಾರೆ. ಇನ್ನಷ್ಟು ಬಿಗಿಕ್ರಮಗಳನ್ನು ತೆಗೆದುಕೊಳ್ಳಲು ಹೇಳಬಹುದಿತ್ತು. ಅದು ಬಿಟ್ಟು ಕೋಮುಗಲಭೆಗೆ ಪ್ರಚೋದನೆ ಕೊಡುವುದು ಸರಿಯಲ್ಲ ಎಂದರು. ಇದನ್ನೂ ಓದಿ: ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು: ಅಶೋಕ್ ಕಿಡಿ
ಮದ್ದೂರಿನಲ್ಲಿ ಹಿಂದೆ ಎಂದೂ ಈ ರೀತಿ ನಡೆದಿರಲಿಲ್ಲ. ಹೊರಗಡೆಯಿಂದ ಬಂದು ಯಾರೋ ಗಲಭೆ ಮಾಡಿರಬಹುದು ಎಂಬುದನ್ನೂ ವಿಚಾರಣೆ ಮಾಡುತ್ತಿದ್ದೇವೆ. ಯಾವುದೇ ಸಮಾಜವಿದ್ದರೂ ಅವರ ಮೇಲೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಬಿಜೆಪಿ, ಜೆಡಿಎಸ್‌ನವರು ರಾಜಕೀಯವಾಗಿ ನಮ್ಮನ್ನು ಎದುರಿಸಲು ಆಗದೇ ಪ್ರಚೋದನೆ ಮಾಡುತ್ತಿದ್ದಾರೆ. ನಾವು ಯಾರ ಓಲೈಕೆಯನ್ನ ಕೂಡ ಮಾಡುತ್ತಿಲ್ಲ. ಹಾಗಿದ್ರೆ ಯಾಕೆ 21 ಜನರ ಬಂಧನ ಮಾಡುತ್ತಿದ್ದೆವು? ಇದು ಪೂರ್ವನಿಯೋಜಿತ, ನಮಗೆ ಎಲ್ಲ ಗೊತ್ತಿದೆ. ಈ ಹಿಂದೆ ಮಂಗಳೂರಿನಿಂದ ಪಾಂಡವಪುರಕ್ಕೆ ಬಂದು ಏನು ನಡೆಸಿದ್ರು ಗೊತ್ತಿದೆ ನಮಗೆ. ನಾಗಮಂಗಲದಲ್ಲೂ ನಡೆಸಿದ್ರು, ಈ ಸಲ ಎಚ್ಚರಿಕೆ ವಹಿಸಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಒತ್ತಡಕ್ಕೆ ಮಣಿದರೆ ನಾನೇ ಮದ್ದೂರಿಗೆ ಬರಬೇಕಾಗುತ್ತೆ – ಮಂಡ್ಯ ಎಸ್ಪಿಗೆ ಹೆಚ್‌ಡಿಕೆ ಖಡಕ್ ವಾರ್ನಿಂಗ್
ಇದು ಪೂರ್ವನಿಯೋಜಿತವಾಗಿ ನಡೆದಿದೆ. ಉದ್ದೇಶಪೂರ್ವಕವಾಗಿಯೇ ಹೀಗೆ ಮಾಡಿದ್ದಾರೆ. ಅಶೋಕ್ ಸೇರಿದಂತೆ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ಇದೆಲ್ಲ ಆಗುತ್ತಿದೆ. ನನಗೂ ಕೆಲವು ಸಂಘಟನೆಗಳ ಮುಖಂಡರು ಕರೆ ಮಾಡಿ ಮಾತನಾಡಿದ್ದಾರೆ. ಅವರ ಹೆಸರನ್ನ ಈಗ ಹೇಳಲು ಬಯಸುವುದಿಲ್ಲ. ಬಿಜೆಪಿ ನಾಯಕರೇ ಸಂಘಟನೆಗಳ ಮುಖಂಡರಿಗೆ ಕರೆ ಮಾಡಿ ಪ್ರಚೋದನೆ ಕೊಡುತ್ತಿದ್ದಾರೆ. ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ವಿಧಾನಸಭೆಯಲ್ಲಿ ನಮ್ಮನ್ನು ಎದುರಿಸಲು ಅವರಿಗೆ ಆಗಿಲ್ಲ. ಹಾಗಾಗಿ ಇಂತಹ ಘಟನೆಗಳು ನಡೆದಾಗ ಪ್ರಚೋದನೆ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮದ್ದೂರಿನಲ್ಲಿ ಗಲಾಟೆ ಮಾಡಿದವರ ಬಂಧನ ಆಗಿದೆ: ಪರಮೇಶ್ವರ್
ಇನ್ನು ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಚಲುವರಾಯಸ್ವಾಮಿ, ತಪ್ಪಿತಸ್ಥರ ವಿರುದ್ಧ ಕಠಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆಯ ವೇಳೆ ಕಲ್ಲು ತೂರಾಟ ನಡೆದಿರುವುದು ವಿಷಾದನೀಯ. ಈ ಬಗ್ಗೆ ಸಮರ್ಪಕ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಇನ್ನು ಮುಂದೆ ಇಂತಹ ದುರ್ವರ್ತನೆ ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲು ತಿಳಿಸಲಾಗಿದೆ. ಸಾರ್ವಜನಿಕರು ಈ ದಿಶೆಯಲ್ಲಿ ಸಹಕರಿಸಬೇಕು ಹಾಗೂ ಇಂತಹ ಯಾವುದೇ ರೀತಿಯ ಅಹಿತಕರ ಘಟನೆಗೆ ಎಡೆ ಮಾಡಿಕೊಡಬಾರದು ಎಂದು ಎಕ್ಸ್‌ನಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮದ್ದೂರಿನಲ್ಲಿ ಗಣೇಶನಿಗೆ ಕಲ್ಲು – ಪ್ರತಿಭಟಿಸಿದ ಹಿಂದೂ ಕಾರ್ಯಕರ್ತರ ಮೇಲೆ ಲಾಠಿಚಾರ್ಜ್