– ಅಮೆರಿಕದ ನಡೆ ಮೋದಿಯನ್ನು ರಷ್ಯಾ & ಚೀನಾಗೆ ಹತ್ತಿರವಾಗಿಸಿದೆ: ಬೋಲ್ಟನ್ ಬೇಸರ
ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಆದರೆ, ಈಗ ಅದು ಇಲ್ಲವಾಗಿದೆ ಎಂದು ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ.
ಎರಡು ದಶಕಗಳಲ್ಲಿ ಭಾರತ-ಅಮೆರಿಕ ಸಂಬಂಧಗಳಲ್ಲಿ ಬಹುಶಃ ಅತ್ಯಂತ ಕೆಟ್ಟ ಹಂತದ ಹಿನ್ನೆಲೆಯಲ್ಲಿ ಬೋಲ್ಟನ್ ಈ ಹೇಳಿಕೆ ನೀಡಿದ್ದಾರೆ. ಟ್ರಂಪ್ ಅವರ ಸುಂಕ ನೀತಿ ಮತ್ತು ಭಾರತದ ಮೇಲಿನ ನಿರಂತರ ಟೀಕೆಗಳಿಂದ ಈ ಬಿಕ್ಕಟ್ಟು ಎದುರಾಗಿದೆ.
ಟ್ರಂಪ್ ಅಂತರರಾಷ್ಟ್ರೀಯ ಸಂಬಂಧಗಳನ್ನು ನಾಯಕರೊಂದಿಗಿನ ತಮ್ಮ ವೈಯಕ್ತಿಕ ಬಾಂಧವ್ಯದ ಮೂಲಕವೇ ನೋಡುತ್ತಾರೆ. ಪುಟಿನ್ ಜೊತೆ ಟ್ರಂಪ್ ಉತ್ತಮ ಸಂಬಂಧ ಹೊಂದಿದ್ದರೆ, ಅಮೆರಿಕದೊಂದಿಗೆ ರಷ್ಯಾ ಉತ್ತಮ ಬಾಂಧವ್ಯದಲ್ಲಿದೆ ಎಂದರ್ಥ. ಆದರೆ, ಈಗ ಅಂತಹ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.
ಈ ಮೊದಲ ಟ್ರಂಪ್ ಆಡಳಿತದಲ್ಲಿ NSA ಆಗಿ ಬೋಲ್ಟನ್ ಸೇವೆ ಸಲ್ಲಿಸಿದ್ದರು. ಈಗ ಟ್ರಂಪ್ ಅವರನ್ನೇ ನೇರವಾಗಿ ಟೀಕಿಸುತ್ತಿದ್ದಾರೆ. ಟ್ರಂಪ್ ಅವರು ಮೋದಿ ಅವರೊಂದಿಗೆ ವೈಯಕ್ತಿಕವಾಗಿ ಉತ್ತಮ ಸಂಬಂಧ ಹೊಂದಿದ್ದರು. ಅದು ಈಗ ಇಲ್ಲವಾಗಿದೆ. ಇದು ಎಲ್ಲರಿಗೂ ಒಂದು ಪಾಠವಾಗಿದೆ. ಉದಾಹರಣೆಗೆ (ಯುಕೆ ಪ್ರಧಾನಿ) ಕೀರ್ ಸ್ಟಾರ್ಮರ್, ಒಳ್ಳೆಯ ವೈಯಕ್ತಿಕ ಸಂಬಂಧವು ಕೆಲವೊಮ್ಮೆ ಸಹಾಯ ಮಾಡಬಹುದು. ಆದರೆ ಅದು ನಿಮ್ಮನ್ನು ಕೆಟ್ಟದ್ದರಿಂದ ರಕ್ಷಿಸುವುದಿಲ್ಲ ಎಂದು ಟ್ರಂಪ್‌ಗೆ ಎಚ್ಚರಿಕೆ ಕೂಡ ನೀಡಿದ್ದಾರೆ.
ಟ್ರಂಪ್ ಸೆಪ್ಟೆಂಬರ್ 17 ರಿಂದ 19 ರವರೆಗೆ ಯುಕೆಗೆ ಭೇಟಿ ನೀಡಲಿದ್ದಾರೆ. ಭಾರತದ ಸಂಬಂಧವನ್ನು ಯುಎಸ್ ದಶಕಗಳ ಹಿಂದಕ್ಕೆ ತಳ್ಳಿದೆ. ಈ ನಡೆ ಮೋದಿಯನ್ನು ರಷ್ಯಾ ಮತ್ತು ಚೀನಾಕ್ಕೆ ಹತ್ತಿರವಾಗಿಸಿದೆ. ಯುಎಸ್ ಮತ್ತು ಡೊನಾಲ್ಡ್ ಟ್ರಂಪ್‌ಗೆ ಪರ್ಯಾಯವಾಗಿ ತನ್ನನ್ನು ತಾನು ಚೀನಾ ಬಿಂಬಿಸಿಕೊಂಡಿದೆ ಎಂದು ವಿಶ್ಲೇಷಿಸಿದ್ದಾರೆ.